ಬೆಂಗಳೂರು: ಮೈಸೂರಿನ ನಂಜನಗೂಡು ದೇವಸ್ಥಾನ ತೆರವಿನ ಬಳಿಕ ಉಂಟಾದ ವಿವಾದ ತಣಿಸಲು ರಾಜ್ಯ ಸರಕಾರ ರೂಪಿಸಿರುವ 'ಧಾರ್ಮಿಕ ಕಟ್ಟಡ ಸಂರಕ್ಷಣೆ ವಿಧೇಯಕ'ದಿಂದ ತೀವ್ರ ಅಸಮಾಧಾನಗೊಂಡಿದೆ. ಬೆಂಗಳೂರಿನಲ್ಲಿ ಗುರುವಾರ ನಡೆದ ಸಂಘ ಪರಿವಾರದ ನಾನಾ ಸಂಘಟನೆಗಳ ಮಹತ್ವದ ಸಮನ್ವಯ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದ್ದು, ಯಾವ ಕಾರಣಕ್ಕೂ ಇದನ್ನು ಒಪ್ಪಬಾರದು ಎಂದು ತೀರ್ಮಾನಿಸಲಾಗಿದೆ. ಈ ವಿಧೇಯಕದ ವಿರುದ್ಧ ಹೋರಾಟ ರೂಪಿಸುವ ಹೊಣೆಗಾರಿಕೆಯನ್ನು ಹಿಂದೂ ಜಾಗರಣ ವೇದಿಕೆಗೆ ವಹಿಸಲಾಗಿದೆ. ಸೆ.27ರಿಂದಲೇ ಹಿಂಜಾವೇ ರಾಜ್ಯಾದ್ಯಂತ ಪ್ರತಿಭಟನೆ ಆರಂಭಿಸಲಿದೆ. ಇದಕ್ಕೆ ನಾನಾ ಹಿಂದೂಪರ ಸಂಘಟನೆಗಳು ಬೆಂಬಲ ನೀಡುವ ನಿರೀಕ್ಷೆ ಇದೆ. ಆರ್‌ಎಸ್‌ಎಸ್ ಪ್ರಮುಖರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಬಜರಂಗ ದಳ ಸೇರಿದಂತೆ ಹಲವಾರು ಹಿಂದೂ ಸಂಘಟನೆಗಳ ಮುಖಂಡರು ಮತ್ತು ಪ್ರತಿನಿಧಿಗಳು ಸರಕಾರದ ಕಾಯಿದೆ ನಡೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಈ ಕಾಯಿದೆ ಬಹುಸಂಖ್ಯಾತ ಹಿಂದೂಗಳು ಮತ್ತು ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಕೆಲವು ಪಕ್ಷ ಪ್ರಮುಖರೂ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ಸಭೆಯ ನಿರ್ಣಯ ಏನೇನು?ನಮ್ಮದೇ ಸರಕಾರ ನಂಜನಗೂಡಿನ ದೇವಸ್ಥಾನವನ್ನು ಈ ರೀತಿ ಅಮಾನುಷವಾಗಿ ಧ್ವಂಸ ಮಾಡಿರುವುದು ಖಂಡನೀಯ. ದೇವಸ್ಥಾನ ಒಡೆದ ಅಧಿಕಾರಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಪೂರ್ವಾಪರ ಯೋಚಿಸದೆ ಸರಕಾರ ತರಲು ಹೊರಟಿರುವ ಕಾಯಿದೆಯನ್ನು ಒಪ್ಪಬಾರದು. ರಾಜ್ಯದಲ್ಲಿ ಅನಧಿಕೃತ ಎನ್ನಲಾದ ದೇವಾಲಯಗಳ ಪಟ್ಟಿ ತಯಾರಿಸಿ, ಅವುಗಳ ಕಾಯಕಲ್ಪಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಸ್ತಾಪಿತ ಕಾಯಿದೆಯನ್ನು ಸರಕಾರ ತಕ್ಷಣ ಕೈಬಿಡಬೇಕು. ಕಾಯಿದೆಗೆ ವಿರೋಧ ಏಕೆ?
- ಈ ಕಾಯಿದೆ ಜಾರಿಗೆ ಬಂದರೆ, ಈಗಾಗಲೇ ರಾಜ್ಯದಲ್ಲಿ ಅಕ್ರಮವಾಗಿ ಕಟ್ಟಲಾಗಿರುವ ಸಾವಿರಾರು ಧಾರ್ಮಿಕ ಕಟ್ಟಡಗಳು, ಎಕರೆಗಟ್ಟಲೆ ಅತಿಕ್ರಮಿತ ಭೂಮಿ ಅಧಿಕೃತವಾಗಿ ಬಿಡುತ್ತವೆ.
- ಸರಕಾರಿ ಜಾಗ, ಅರಣ್ಯ ಪ್ರದೇಶ ಮುಂತಾದ ಕಡೆ ಅಕ್ರಮವಾಗಿ ಧಾರ್ಮಿಕ ಕಟ್ಟಡ ನಿರ್ಮಿಸಿ ದೇಶದ್ರೋಹಿ, ಮತಾಂತರ ಕೃತ್ಯ ನಡೆಸಬಹುದು.
- ಅಕ್ರಮ ಕಟ್ಟಡ ತೆರವಿಗೆ ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿರುವುದರಿಂದ ಈ ಅರೆಬೆಂದ ಕಾಯಿದೆಯಿಂದ ಏನೂ ಪ್ರಯೋಜನವಿಲ್ಲ.
- ಇಂಥ ಅರ್ಥಹೀನ ಕಾಯಿದೆಗೆ ರಾಜ್ಯಪಾಲರು ಸಹಿ ಹಾಕುವುದು ಅನುಮಾನ. ರಾಷ್ಟ್ರಪತಿಯವರೂ ತಿರಸ್ಕರಿಸಬಹುದು.
from India & World News in Kannada | VK Polls https://ift.tt/3EXnTRE