ಅಬು ಧಾಬಿ: ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ನೆರವಾಗಿದ್ದ ವೆಂಕಟೇಶ್ ಅಯ್ಯರ್, ತಮ್ಮ ಬ್ಯಾಟಿಂಗ್ ಯಶಸ್ಸಿನ ಶ್ರೇಯವನ್ನು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಗೆ ಸಮರ್ಪಿಸಿದ್ದಾರೆ. ಗುರುವಾರ ಇಲ್ಲಿನ ಶೇಖ್ ಜಾವೆದ್ ಕ್ರೀಡಾಂಗಣದಲ್ಲಿ ನಡೆದಿದ್ದ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 156 ರನ್ ಗುರಿ ಹಿಂಬಾಲಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ 15.1 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತ್ತು. ಶುಭಮನ್ ಗಿಲ್ ಜೊತೆ ಆರಂಭಿಕನಾಗಿ ಕಣಕ್ಕೆ ಇಳಿದಿದ್ದ ವೆಂಕಟೇಶ್ ಅಯ್ಯರ್ ತಾವು ಎದುರಿಸಿದ್ದ ಮೊದಲನೇ ಎಸೆತದಿಂದಲೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಕೇವಲ 30 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 53 ರನ್ ಚೆಚ್ಚಿದ್ದರು ಹಾಗೂ ರಾಹುಲ್ ತ್ರಿಪಾಠಿ(74) ಅವರೊಂದಿಗೆ 88 ರನ್ ಜೊತೆಯಾಟವಾಡುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. ಈ ಪಂದ್ಯದ ಗೆಲುವಿನೊಂದಿಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ 8 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ಆದರೆ, ಸೋಲು ಅನುಭವಿಸಿದ ಮುಂಬೈ ಇಂಡಿಯನ್ಸ್ ಆರನೇ ಸ್ಥಾನಕ್ಕೆ ಇಳಿಯಿತು. "ನನ್ನ ನೆಚ್ಚಿನ ಆಟಗಾರ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಐಪಿಎಲ್ ಆರಂಭಿಕ ಆವೃತ್ತಿಗಳಲ್ಲಿ ಮುನ್ನಡೆಸಿದ್ದರು. ಈ ಕಾರಣದಿಂದ ನಾನು ಕೂಡ ಕೆಕೆಆರ್ ಮೂಲಕವೇ ಐಪಿಎಲ್‌ಗೆ ಪದಾರ್ಪಣೆ ಮಾಡಬೇಕೆಂದು ಬಯಸಿದ್ದೆ. ಅದರಂತೆ ಕೋಲ್ಕತಾ ಫ್ರಾಂಚೈಸಿ ನನಗೆ ಅವಕಾಶ ನೀಡಿದೆ. ಆ ಮೂಲಕ ನನ್ನ ಕನಸು ನನಸಾಗಿದೆ," ಎಂದು ಅಯ್ಯರ್ ಸಹ ಆಟಗಾರ ರಾಹುಲ್ ತ್ರಿಪಾಠಿಗೆ ಹೇಳಿರುವ ವಿಡಿಯೋವನ್ನು ಐಪಿಎಲ್‌ಟಿ20.ಕಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. "ನಾನು ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಮೊದಲ ಬಾರಿ ಆಗಮಿಸಿದಾಗ ಪ್ರತಿಯೊಬ್ಬರೂ ನನ್ನನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ ಹಾಗೂ ಸಾಕಷ್ಟು ಕೊಡುಗೆಗಳನ್ನು ಪಡೆದುಕೊಂಡಿದ್ದೇನೆ. ನಾನು ದಾದಾ(ಗಂಗೂಲಿ) ದೊಡ್ಡ ಅಭಿಮಾನಿ. ಇವರಿಗೆ ಜಾಗತಿಕವಾಗಿ ಮಿಲಿಯನ್ ಗಟ್ಟೆಲೆ ಅಭಿಮಾನಿಗಳ ಬಳಗವಿದೆ. ಇದರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ನನ್ನ ಬ್ಯಾಟಿಂಗ್‌ನಲ್ಲಿ ಗಂಗೂಲಿ ದೊಡ್ಡ ಪಾತ್ರ ನಿರ್ವಹಿಸಿದ್ದಾರೆ," ಎಂದು ಯುವ ಬ್ಯಾಟ್ಸ್‌ಮನ್ ಬಿಸಿಸಿಐ ಅಧ್ಯಕ್ಷರನ್ನು ಕೊಂಡಾಡಿದ್ದಾರೆ. "ನಾನು ಚಿಕ್ಕ ಹುಡುಗನಿದ್ದಾಗ ಬಲಗೈ ಬ್ಯಾಟ್ಸ್‌ಮನ್ ಆಗಿದ್ದೆ, ಆದರೆ ದಾದಾ ಆಡುತ್ತಿದ್ದ ಹಾದಿಯಲ್ಲಿಯೇ ನಾನು ಕೂಡ ಆಡಬೇಕೆಂದು ಬಯಸಿದ್ದ ಕಾರಣ ಎಡಗೈ ಬ್ಯಾಟ್ಸ್‌ಮನ್ ಆಗಿ ಪರಿವರ್ತನೆಯಾದೆ. ಅವರು ನನ್ನ ಜೀವನದಲ್ಲಿ ಅರಿವಿಲ್ಲದೆ ದೊಡ್ಡ ಪಾತ್ರವನ್ನು ನಿರ್ವಹಿಸಿದ್ದಾರೆ. ಅಂದಹಾಗೆ ಅವಕಾಶಕ್ಕಾಗಿ ನಾನು ಎದುರು ನೋಡುತ್ತಿದ್ದೆ ಹಾಗೂ ಅದರಂತೆ ಇದೀಗ ನನಗೆ ಸಿಕ್ಕಿದೆ," ಎಂದು ಅಯ್ಯರ್ ಹೇಳಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ ಜೋಡಿ 56 ಎಸೆತಗಳಿಗೆ 78 ರನ್ ಗಳಿಸುವ ಮೂಲಕ ಭರ್ಜರಿ ಅಡಿಪಾಯ ಹಾಕಿಕೊಟ್ಟಿತ್ತು. ಆದರೆ, ರೋಹಿತ್ 33 ರನ್‌ಗೆ ಔಟಾಗುತ್ತಿದ್ದಂತೆ ಪಂದ್ಯದ ಚಿತ್ರಣ ಸಂಪೂರ್ಣ ಬದಲಾಯಿತು. ಇದರ ಹೊರತಾಗಿಯೂ 42 ಎಸೆತಗಳಲ್ಲಿ 55 ರನ್ ಚೆಚ್ಚಿದ ಕ್ವಿಂಟನ್ ಡಿ ಕಾಕ್ ಮುಂಬೈ ಇಂಡಿಯನ್ಸ್ 155 ರನ್ ಕಲೆ ಹಾಕಲು ನೆರವಾಗಿದ್ದರು. ಕೋಲ್ಕತಾ ನೈಟ್ ರೈಡರ್ಸ್ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂದಿನ ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಇನ್ನು ಮುಂಬೈ ಇಂಡಿಯನ್ಸ್ ಇದೇ ದಿನದಂದು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಾದಾಟ ನಡೆಸಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZtkDx5