![](https://vijaykarnataka.com/photo/81342327/photo-81342327.jpg)
ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯ ಮೂಲದವರ ಪ್ರಭಾವ ಹೆಚ್ಚುತ್ತಿದ್ದು, ತಮ್ಮ ಆಡಳಿತದಲ್ಲಿ ಭಾರತೀಯ ಮೂಲದ ಅಮೆರಿಕನ್ನರೇ ಉನ್ನತ ಹುದ್ದೆಗಳನ್ನು ಪಡೆದಿರುವುದು ಇದಕ್ಕೆ ಸಾಕ್ಷಿ ಎಂದು ಅಧ್ಯಕ್ಷ ಹೇಳಿದ್ದಾರೆ. ನಾಸಾದ ಪರ್ಸಿವರನ್ಸ್ ನೌಕೆ ಮಂಗಳ ಗ್ರಹ ಮೇಲೆ ಯಶಸ್ವಿಯಾಗಿ ಇಳಿದ ಹಿನ್ನೆಲೆಯಲ್ಲಿ, ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಜೋ ಬಿಡೆನ್ ಮಾತನಾಡಿದರು. ಅಮೆರಿಕದ ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯ ಮೂಲದವರ ಪ್ರಭಾವ ಹೆಚ್ಚಾಗುತ್ತಿದೆ. ಸರ್ಕಾರ ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಅವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಜೋ ಬಿಡೆನ್ ಹೇಳಿದರು. ತಮ್ಮ ಆಡಳಿತದಲ್ಲೂ ಭಾರತೀಯ ಮೂಲದವರ ಸಂಖ್ಯೆಯೇ ಹೆಚ್ಚಿದ್ದು, ಸರ್ಕಾರದ ಆಯಕಟ್ಟಿನ ಸ್ಥಾನಗಳಲ್ಲಿ ಭಾರತೀಯ ಮೂಲದವರು ರಾರಾಜಿಸುತ್ತಿದ್ದಾರೆ ಎಂದು ಜೋ ಬಿಡೆನ್ ಸಂತಸ ವ್ಯಕ್ತಪಡಿಸಿದರು. ಅಮೆರಿಕದ ಪ್ರಸ್ತುತ ಹಾಗೂ ಪ್ರಥಮ ಮಹಿಳಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಭಾರತೀಯ ಮೂಲದವರೇ ಆಗಿದ್ದು, ಅಮೆರಿಕದ ಉನ್ನತಿಯಲ್ಲಿ ಅವರ ಕೊಡುಗೆ ಗಮನಾರ್ಹ ಎಂದು ಜೋ ಬಿಡೆನ್ ಇದೇ ವೇಳೆ ನುಡಿದರು. ನಾಸಾದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಮೂಲದ ಸ್ವಾತಿ ಮೋಹನ್, ಪರ್ಸಿವರನ್ಸ್ ನೌಕೆ ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿಯುವಂತೆ ನೋಡಿಕೊಳ್ಳುವ ತಂಡದ ಸದಸ್ಯರಾಗಿದ್ದಾರೆ. ಸ್ವಾತಿ ಮೋಫಹನ್ ಅವರನ್ನು ಉದ್ದೇಶಿಸಿ ಜೋ ಬಿಡೆನ್ ಭಾರತೀಯ ಮೂಲದವರ ಕೊಡುಗೆಯನ್ನು ಸ್ಮರಿಸಿದ್ದಾರೆ. ತಮ್ಮ 50 ದಿನಗಳ ಇದುವರೆಗಿನ ಆಡಳಿತಾವಧಿಯಲ್ಲಿ ಜೋ ಬಿಡೆನ್ ಸುಮಾರು 55 ಭಾರತೀಯ ಮೂಲದ ಅಮೆರಿಕನ್ನರಿಗೆ ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
from India & World News in Kannada | VK Polls https://ift.tt/3ea4EsY