ಗೋಹತ್ಯೆ ನಿಷೇಧ ಕಾಯ್ದೆಯೇನೋ ತಂದ್ರು, ಆದರೆ ಕೊಡಗಿನ ಏಕೈಕ ಗೋಶಾಲೆಯನ್ನು ಕೇಳೋರೆ ಇಲ್ಲ..!

ಸುನಿಲ್‌ ಪೊನ್ನೇಟಿ ಮಡಿಕೇರಿ: ಸುಮಾರು 70 ರಾಸುಗಳು, ತಿಂಗಳಿಗೆ ಅಂದಾಜು 2.5 ಲಕ್ಷ ಖರ್ಚು, ಮೇವಿಗೆಂದು ಬೆಳೆದಿದ್ದ ಹುಲ್ಲು ನೀರು ಪಾಲು, ಕೈ ಜೋಡಿಸುತ್ತೇವೆ ಎಂದವರು ಕೈ ಚೆಲ್ಲಿ ಕುಳಿತಿದ್ದಾರೆ. ಇದು ಕೊಡಗಿನಲ್ಲಿರುವ ಬಿಡಾಡಿ ದನಗಳ ಏಕೈಕ ಖಾಸಗಿ ಗೋಶಾಲೆಯ ಸದ್ಯದ ಸ್ಥಿತಿ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಬಂದಿದ್ದು, ತಾಲೂಕು ಮಟ್ಟದಲ್ಲೂ ಗೋಶಾಲೆಗಳನ್ನು ತೆರೆಯಲು ಸರಕಾರ ಹೊರಟಿರುವ ಬೆನ್ನಲ್ಲೇ ಹಾಲಿ ಇರುವ ಗೋಶಾಲೆಯ ಸಂಕಷ್ಟದ ಕತೆ ಕಣ್ಣೀರು ತರಿಸುವಂತಿದೆ. ಮಡಿಕೇರಿ ತಾಲೂಕು ಭಾಗಮಂಡಲ ಸಮೀಪದ ಚೆಟ್ಟಿಮಾನಿಯಲ್ಲಿ 2019ರ ಡಿಸೆಂಬರ್‌ನಿಂದ ಶ್ರೀಕೃಷ್ಣ ಕಾರ್ಯನಿರ್ವಹಿಸುತ್ತಿದೆ. ಶ್ರೀ ವಿಶ್ವಕರ್ಮ ಸೇವಾ ಜಾಗೃತ ಟ್ರಸ್ಟ್‌ ಎನ್ನುವ ಟ್ರಸ್ಟ್‌ ಈ ಗೋ ಶಾಲೆಯನ್ನು ನಿರ್ವಹಣೆ ಮಾಡುತ್ತಿದೆ. ಹರೀಶ್‌ ಆಚಾರ್ಯ ಟ್ರಸ್ಟ್‌ ಅಧ್ಯಕ್ಷರಾಗಿದ್ದು, ಜಾತಿ, ಭೇದವಿಲ್ಲದೆ ಗೋ ಪ್ರಿಯರು ಟ್ರಸ್ಟಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚೆಟ್ಟಿಮಾನಿಯಲ್ಲಿ 6 ಎಕರೆ ಜಾಗ ಗುತ್ತಿಗೆಗೆ ಪಡೆದುಕೊಂಡು, ಶ್ರೀ ಕೃಷ್ಣ ಗೋಶಾಲೆ ನಡೆಸಲಾಗುತ್ತಿದೆ. ಆರಂಭದಲ್ಲಿ ಯಾರ್ಯಾರೋ ತಂದುಬಿಟ್ಟ 10 ಜಾನುವಾರುಗಳಿಂದ ಗೋಶಾಲೆ ಶುರುವಾಯಿತು. ಸ್ನೇಹಿತರು ಕೂಡ ನೆರವಿಗೆ ನಿಂತರು. ವಿದೇಶದಲ್ಲಿರುವ ಸಹಪಾಠಿಗಳು ಪ್ರತೀ ತಿಂಗಳು ಒಂದಿಲ್ಲೊಂದು ರೀತಿಯಲ್ಲಿ ಸಹಕಾರದ ಭರವಸೆ ಕೊಟ್ಟಿದ್ದರು. 2020ರ ಮಾರ್ಚ್ ತನಕ ಗೋಶಾಲೆ ನಿರ್ವಹಣೆಗೆ ಯಾವುದೇ ತೊಂದರೆ ಆಗಿರಲಿಲ್ಲ. ಈಗ ಗೋಶಾಲೆಯಲ್ಲಿ ಎತ್ತು, ಹಸು, ಎಮ್ಮೆ, ಕೋಣ ಸೇರಿ ಒಟ್ಟು 70 ಜಾನುವಾರುಗಳಿವೆ. ಬಿಡಾಡಿ ದನಗಳನ್ನು ಮಾತ್ರ ತಂದು ಇಲ್ಲಿ ಸೇರಿಸುವುದಿಲ್ಲ. ವಯಸ್ಸಾದ, ತಮಗೆ ನಿರುಪಯುಕ್ತ ಎಂದು ಭಾವಿಸುವ ಹಸು, ಎತ್ತುಗಳನ್ನೂ ಇಲ್ಲಿಗೆ ತಂದು ಬಿಡುವವರಿದ್ದಾರೆ. ಒಂದು ಸಾವಿರದ ತನಕವೂ ಜಾನುವಾರುಗಳನ್ನು ಇಲ್ಲಿ ಆರೈಕೆ ಮಾಡಲು ಬೇಕಾದಷ್ಟು ಸ್ಥಳಾವಕಾಶ ಇದೆ. ಆದರೆ ಸಂಪನ್ಮೂಲದ ಕೊರತೆಯೇ ದೊಡ್ಡ ಸಮಸ್ಯೆ ಆಗಿದೆ. ಬಗೆ ಬಗೆಯ ಸಹಾಯದ ಭರವಸೆ ನೀಡಿದ್ದವರೆಲ್ಲಾ ಕೊರೊನಾ ನಂತರ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಗೋವುಗಳ ಮೇವಿಗೆಂದು ಬೆಳೆದಿದ್ದ ಹುಲ್ಲುಆಗಸ್ಟ್‌ನಲ್ಲಿ ಸುರಿದ ಮಹಾಮಳೆಗೆ ಕರಗಿ ಹೋಗಿದೆ. ಹಾಗಾಗಿ ಹೊರಗಿನಿಂದ ಮೇವು ತರುವುದು ಅನಿವಾರ್ಯ. 30 ಸಾವಿರ ಖರ್ಚು ಮಾಡಿ ಪ್ರತಿ ತಿಂಗಳು ಹುಲಿಯೂರು ದುರ್ಗದಿಂದ ಹುಲ್ಲು ತರಿಸಲಾಗುತ್ತಿದೆ. ಭದ್ರತಾ ಸಿಬ್ಬಂದಿ ಸೇರಿ 7 ಮಂದಿ ಕೆಲಸಗಾರರು ಇಲ್ಲಿದ್ದಾರೆ. ಎಲ್ಲಾ ಸೇರಿ ತಿಂಗಳಿಗೆ ಸುಮಾರು 2.5 ಲಕ್ಷ ರೂ. ಖರ್ಚು ಬರುತ್ತಿದೆ. ಪಶು ಸಂಗೋಪನಾ ಇಲಾಖೆಯಿಂದ ಈತನಕ ಒಟ್ಟು 45,600 ರೂ. ನೆರವು ಬಿಟ್ಟರೆ ಬೇರೇನೂ ಸಿಕ್ಕಿಲ್ಲ. ಜಾನುವಾರುಗಳಿಗೆ ಭಾಗಮಂಡಲದಿಂದ ಪಶು ವೈದ್ಯರು ಆಗಮಿಸಿ ಅಗತ್ಯ ಚಿಕಿತ್ಸೆ ಕೊಡುತ್ತಾರೆ. ಜಿಲ್ಲೆಯಲ್ಲಿ ಪಶುವೈದ್ಯರ ಕೊರತೆ ಇರುವುದರಿಂದ ಒಮ್ಮೊಮ್ಮೆ ಅದು ಕೂಡ ಸಾಧ್ಯವಾಗುವುದಿಲ್ಲ.


from India & World News in Kannada | VK Polls https://ift.tt/39mj05y

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...