
ಬೆಂಗಳೂರು: ಕಗ್ಗಂಟು ಮುಂದುವರಿದಿದ್ದು ಇನ್ನೇನಿದ್ದರೂ ಸಂಕ್ರಾಂತಿ ಮುಗಿದ ಮೇಲಷ್ಟೇ ನಿರ್ಧಾರ ಆಗುವ ಸಾಧ್ಯತೆ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆ ಬೆನ್ನಲ್ಲೇ ಸಂಪುಟ ವಿಸ್ತರಣೆ ನಡೆಸಬೇಕು ಎಂಬುವುದು ಸಚಿವಾಕಾಂಕ್ಷಿಗಳ ಬೇಡಿಕೆ ಆಗಿತ್ತು. ಆದರೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಈ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬಂದ ಹಾಗಿಲ್ಲ. ಶಿವಮೊಗ್ಗದಲ್ಲಿ ಶನಿವಾರ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದೆ. ಆದರೆ ಸಭೆಯಲ್ಲಿ ಈ ಕುರಿತಾದ ಯಾವುದೇ ನಿರ್ಧಾರವನ್ನು ಕೈಗೊಳ್ಳದೆ ಇರುವುದು ಸಚಿವಾಕಾಂಕ್ಷಿಗಳಲ್ಲೂ ನಿರಾಸೆ ಮೂಡಿಸಿದೆ. ಗ್ರಾಮ ಪಂಚಾಯಿತಿ ಚುನಾವಣೆಯ ಬಳಿಕ ಹಾಗೂ ಜಂಟಿ ಅಧಿವೇಶನಕ್ಕೂ ಮೊದಲು ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿದ್ದು ಸಹಜ ಕುತೂಹಲ ಮೂಡಿಸಿತ್ತು. ಸಂಪುಟ ವಿಸ್ತರಣೆ ಕುರಿತಾಗಿ ಅರುಣ್ ಸಿಂಗ್ ಏನಾದರೂ ಸಂದೇಶ ಹೊತ್ತು ತರುತ್ತಾರಾ ಎಂಬ ನಿರೀಕ್ಷೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಇದ್ದರು. ಆದರೆ ಅಂತಹ ವಿಶೇಷ ಸುದ್ದಿಯನ್ನು ಅಥವಾ ಸಂದೇಶವನ್ನು ಅರುಣ್ ಸಿಂಗ್ ಹೊತ್ತು ತಂದ ಹಾಗಿಲ್ಲ. ಜೊತೆಗೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಈ ಕುರಿತಾಗಿ ವಿಶೇಷ ಚರ್ಚೆ ನಡೆದು ನಿರ್ಧಾರಕ್ಕೆ ಬಂದ ಹಾಗೆ ಕಾಣಿಸುತ್ತಿಲ್ಲ. ಪರಿಣಾಮ ಸದ್ಯಕ್ಕೆ ಸಂಕ್ರಾಂತಿ ಮುಗಿಯುವವರೆಗೂ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇಲ್ಲ. ಸಂಕ್ರಾಂತಿ ಬಳಿಕವಷ್ಟೇ ಏನಾದರೂ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನುತ್ತಿವೆ ಬಿಜೆಪಿ ಮೂಲಗಳು.
from India & World News in Kannada | VK Polls https://ift.tt/2Lgx4VE