
ಹೊಸದಿಲ್ಲಿ: ನಾಯಕ ಕೃಣಾಲ್ ಪಾಂಡ್ಯ ಅನುಚಿತ ವರ್ತನೆಯಿಂದ ಬೇಸತ್ತು ಬರೋಡಾ ತಂಡದಿಂದ ಹೊರ ನಡೆದ ಪರ ನಿಂತಿರುವ ಭಾರತ ತಂಡದ ಮಾಜಿ ಆಲ್‌ರೌಂಡರ್ ಈ ಪ್ರಕರಣವನ್ನು ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. ನಿಮಿತ್ತ ಬರೋಡಾ ತಂಡದ ಶಿಬಿರದಲ್ಲಿ ನಾಯಕ ಕೃಣಾಲ್ ಪಾಂಡ್ಯ ವರ್ತನೆಯಿಂದ ಬೇಸರವಾಗಿದೆ ಎಂದು ದೀಪಕ್ ಹೂಡ ಇತ್ತೀಚೆಗೆ ವರದಿ ಮಾಡಿದ್ದರು. ಅಲ್ಲದೆ, ಕ್ಯಾಂಪ್‌ನಿಂದ ನಿರ್ಗಮಿಸುವ ಮುನ್ನ ಹೂಡ,' ಕೃಣಾಲ್ ಪಾಂಡ್ಯ ನನ್ನ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ' ಎಂದು ಆರೋಪಿಸಿದ್ದರು. ಈ ಪ್ರಕರಣವನ್ನು ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಗಂಭೀರವಾಗಿ ಪರಿಗಣಿಸಬೇಕೆಂದು ಇರ್ಫಾನ್ ಪಠಾಣ್ ಟ್ವಿಟರ್‌ನಲ್ಲಿ ಆಗ್ರಹಿಸಿದ್ದಾರೆ. "ಸಾಂಕ್ರಾಮಿಕ ರೋಗದ ಸನ್ನಿವೇಶದಲ್ಲಿ ಆಟಗಾರರ ಮಾನಸಿಕ ಸ್ಥಿತಿ ತುಂಬಾ ಕಠಿಣವಾಗಿರುತ್ತದೆ ಹಾಗೂ ಬಯೋ ಬಬಲ್ ವಾತಾವರಣದಲ್ಲಿ ಆಟದ ಕಡೆ ಗಮನ ಕೇಂದ್ರಿಕರಿಸುವುದು ತುಂಬಾ ಮುಖ್ಯ. ಆದರೆ ತಂಡದಲ್ಲಿ ಇಂತಹ ಪ್ರಕರಣಗಳು ನಡೆದಾಗ ಆಟಗಾರರ ಮಾನಸಿಕ ಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ಇಂತಹ ಘಟನೆಗಳನ್ನು ತಪ್ಪಿಸಬೇಕು," ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ಪಠಾಣ್ ತಿಳಿಸಿದ್ದಾರೆ. "ಇಂತಹ ಪ್ರಕರಣಗಳು ಕ್ರೀಡೆಯ ಮೇಲೆ ಗಂಭೀರ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಬಿಸಿಎ ಎಲ್ಲಾ ಸದಸ್ಯರೂ ಈ ವಿಷಯದ ಬಗ್ಗೆ ಗಮನ ಹರಿಸಬೇಕೆಂದು, " ಮಾಜಿ ಆಲ್‌ರೌಂಡರ್ ಆಗ್ರಹಿಸಿದ್ದಾರೆ. ಭಾರತದ ಪರ 29 ಟೆಸ್ಟ್, 120 ಓಡಿಐ ಪಂದ್ಯಗಳಾಡಿರುವ ಇರ್ಪಾನ್ ಪಠಾಣ್ ಇದೇ ವೇಳೆ, 'ಭರವಸೆಯ ಆಟಗಾರರನ್ನು ಕಡೆಗಣಿಸುತ್ತಿರುವ ಬಿಸಿಎ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಬರೋಡ ತಂಡದ ಮಾಜಿ ನಾಯಕನಾಗಿ ಹಾಗೂ ಯುವ ಆಟಗಾರರಿಗೆ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದೇನೆ. ಆಟಗಾರರು ಸ್ವಾತಂತ್ರ ಹಾಗೂ ಸುರಕ್ಷಿತವಾಗಿ ಆಡಿ ತಂಡದ ಪರ ಉತ್ತಮ ಪ್ರದರ್ಶನ ತೋರಬೇಕಾದರೆ, ಆಟಗಾರರ ನಡುವಿನ ಸಾಮರಸ್ಯ ಎಷ್ಟು ಮುಖ್ಯ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ," ಎಂದು ಹೇಳಿದ್ದಾರೆ. "ದೀಪಕ್ ಹೂಡ ಘಟನೆ ಬಗ್ಗೆ ನಾನು ಕೇಳಿದ್ದು ನಿಜವಾಗಿದ್ದರೆ, ಅದು ನಿಜಕ್ಕೂ ಆಘಾತಕಾರಿ ಮತ್ತು ನಿರಾಶಾದಾಯಕವಾಗಿದೆ. ಯಾವುದೇ ಆಟಗಾರನನ್ನು ಈ ರೀತಿ ನಡೆಸಿಕೊಳ್ಳಬಾರದು," ಎಂದು 36ರ ಪ್ರಾಯದ ಮಾಜಿ ಆಲ್‌ರೌಂಡರ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಮತ್ತು 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅರ್ಹ ಯುವ ಪ್ರತಿಭೆಗಳನ್ನು ಆಯ್ಕೆಗೆ ಕಡೆಗಣಿಸಲಾಗುತ್ತಿದೆ," ಎಂದು ಆರೋಪಿಸಿದರು. "ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕಳೆದ ಆವೃತ್ತಿಯಲ್ಲಿ ತಂಡದ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಆಗಿದ್ದ ಆದಿತ್ಯ ವಾಗ್ಮೊಡೆ(364 ರನ್) ಹಾಗೂ 216 ರನ್ ಹಾಗೂ 10 ವಿಕೆಟ್‌ಗಳನ್ನು ಪಡೆದಿದ್ದ ಆಲ್‌ರೌಂಡರ್ ಸ್ವಪ್ನಿಲ್ ಸಿಂಗ್ ಅವರನ್ನು ಆಯ್ಕೆಗೆ ಕಡೆಗಣಿಸಿದೆ," ಎಂದು ಇರ್ಫಾನ್ ಪಠಾಣ್ ಬಿಸಿಎ ವಿರುದ್ಧ ಕಿಡಿ ಕಾರಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2N30Iip