ಹೊಸದಿಲ್ಲಿ: ಭಾರತದಲ್ಲಿ ಬಳಸಲು ಯೋಜಿಸಿರುವ ಲಸಿಕೆಯ ಸುರಕ್ಷತೆ ಬಗ್ಗೆ ಯಾವುದೇ ತಪ್ಪು ಕಲ್ಪನೆಗಳು ಬೇಡ. ಎಲ್ಲವನ್ನೂ ವಿವರವಾಗಿ ಪರಿಶೀಲಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. ಶನಿವಾರ ನವದೆಹಲ್ಲಿಯಲ್ಲಿ ನಡೆಯುತ್ತಿರುವ ಕೊರೊನಾ ವಿತರಣೆಯ ಡ್ರೈ ರನ್ ಪರಿಶೀಲಿಸಿ ಮಾತನಾಡಿದ ಅವರು, ಲಸಿಕೆಯ ಸುರಕ್ಷತೆಯ ಬಗ್ಗೆ ಯಾವುದೇ ಅನುಮಾನಗಳು ಬೇಡ. ಎಲ್ಲವನ್ನೂ ವಿವರವಾಗಿ ಪರಿಶೀಲಿಸಲಾಗಿದೆ. ಆರಂಭದಲ್ಲಿ ಪೋಲಿಯೋ ಲಸಿಕೆ ವಿತರಣೆ ಸಂದರ್ಭದಲ್ಲೂ ವದಂತಿಗಳು ಹಬ್ಬಿದ್ದವು ಎಂದರು. ಆದರೆ, ಅದನ್ನು ಬಳಸಲು ಪ್ರಾರಂಭಿಸಿದಾಗ ಎಲ್ಲ ಜನರಿಗೆ ಸುರಕ್ಷತೆಯ ಬಗ್ಗೆ ಭರವಸೆ ನೀಡಿತು. ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಯಾವುದೇ ಅನುಮಾನ ಬೇಡ ಎಂದ ಅವರು, ಡ್ರೈ ರನ್‌ನಲ್ಲಿ ನೈಜ ಲಸಿಕೆ ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇದು ದಶಕಗಳ ಹಿಂದೆ ನಡೆದ ಪೋಲಿಯೋ ಲಸಿಕೆ ಅಭಿಯಾನಕ್ಕೆ ಸಮ ಎಂದು ಹೇಳಿದರು. ಶನಿವಾರ ದೇಶಾದ್ಯಂತ ಕೊರೊನಾ ವೈರಸ್ ಲಸಿಕೆ ಸಂಗ್ರಹಣೆ ಹಾಗೂ ವಿತರಣೆಯ ಡ್ರೈ ರನ್ (ತಾಲೀಮು) ನಡೆಯುತ್ತಿದೆ. ಸಾಮೂಹಿಕ ವಿತರಣೆ, ಸಂಚಾರ ಹಾಗೂ ತರಬೇತಿಯಲ್ಲಿನ ಲೋಪದೋಷಗಳನ್ನು ಕಂಡುಕೊಳ್ಳಲು ಈ ತಾಲೀಮು ನಡೆಸಲಾಗುತ್ತಿದೆ. ಇದನ್ನು ಕೋವಿನ್ ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ನಡೆಸಲಾಗುತ್ತಿದೆ. ಶನಿವಾರದ ವ್ಯಾಕ್ಸಿನ್ ಡ್ರೈ ರನ್ ಎರಡನೇಯದು. ಈ ಮೊದಲು ಡಿಸೆಂಬರ್ 28 ಮತ್ತು 29ರಂದು ಅಸ್ಸಾಂ, ಆಂಧ್ರಪ್ರದೇಶ, ಪಂಜಾಬ್ ಹಾಗೂ ಗುಜರಾತ್‌ನಲ್ಲಿ ಲಸಿಕೆ ವಿತರಣೆ ತಾಲೀಮು ನಡೆಸಲಾಗಿತ್ತು. ಹಿಂದಿನ ಡ್ರೈ ರನ್‌ನಲ್ಲಿ ಬಂದ ಪ್ರತಿಕ್ರಿಯೆಗಳನ್ನು ಆಧರಿಸಿ ಮಾರ್ಗಸೂಚಿಯನ್ನು ಪರಿಷ್ಕರಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಆಕ್ಸ್‌ಪರ್ಡ್ ವಿಶ್ವವಿದ್ಯಾಲಯ ಹಾಗೂ ಅಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿ, ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್‌ನಲ್ಲಿ ತಯಾರಿಸಿರುವ ಕೋವಿಶೀಲ್ಡ್ ಲಸಿಕೆಗೆ ತಜ್ಞರ ಸಮಿತಿ ಅನುಮತಿ ನೀಡಿದ್ದು, ಭಾರತದ ಔಷಧ ನಿಯಂತ್ರಕದ ಅನುಮೋದನೆಗಾಗಿ ಶಿಫಾರಸು ಮಾಡಲಾಗಿದೆ. ಇದಾದ ಒಂದು ದಿನದ ಬಳಿಕ ಲಸಿಕೆಯ ಸಾಮೂಹಿಕ ಡ್ರೈ ರನ್ ದೇಶಾದ್ಯಂತ ನಡೆಯುತ್ತಿದೆ.
from India & World News in Kannada | VK Polls https://ift.tt/386gfG9