ಕೃಷಿ ಕಾಯಿದೆ ಬಗ್ಗೆ ಭಾರತೀಯ ಕಿಸಾನ್‌ ಸಂಘದ ಅಭಿಪ್ರಾಯವೇನು? ಕಾರ್ಯದರ್ಶಿ ದಿನೇಶ್‌ ಕುಲಕರ್ಣಿ ಸಂದರ್ಶನ ಇಲ್ಲಿದೆ!

-ಕೇಶವ ಪ್ರಸಾದ್‌ಬೆಂಗಳೂರು: ಭಾರತದ ರೈತರ ಹಿತಾಸಕ್ತಿ ಮತ್ತು ಮಾರುಕಟ್ಟೆ ಅಭಿವೃದ್ಧಿಯ ದೃಷ್ಟಿಯಿಂದ ನೂತನ ಕೃಷಿ ಕಾಯಿದೆಯ ಅಗತ್ಯ ಇದೆ. ಆದರೆ ಅದರಲ್ಲಿ ಕೆಲವು ಲೋಪದೋಷಗಳಿದ್ದು, ಸರಿಪಡಿಸಬೇಕು. ಹಾಗೂ ಕನಿಷ್ಠ ಬೆಂಬಲ ಬೆಲೆಗೆ ಕಾಯಿದೆಯ ಬಲ ಕೊಡಬೇಕೆಂಬ ನ್ಯಾಯಯುತ ಬೇಡಿಕೆಯನ್ನು ಸರಕಾರ ಈಡೇರಿಸಬೇಕು. ಆದರೆ ಇಡೀ ಕೃಷಿ ಕಾಯಿದೆಗಳನ್ನೇ ರದ್ದುಪಡಿಸಬೇಕು ಎಂಬ ವಾದ ರಾಜಕೀಯ ಪ್ರೇರಿತವಾಗಿದ್ದು, ಸಮಂಜಸವಲ್ಲ ಎಂದು ಭಾರತೀಯ ಕಿಸಾನ್‌ ಸಂಘ (ಬಿಕೆಎಸ್‌) ಹೇಳಿದೆ. ದಿಲ್ಲಿಯಲ್ಲಿ ರೈತ ಸಂಘಟನೆಗಳ ಪ್ರತಿಭಟನೆ ಮತ್ತು ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ಭಾರತೀಯ ಕಿಸಾನ್‌ ಸಂಘದ ಸಂಘಟನಾ ಕಾರ್ಯದರ್ಶಿ ಅವರು 'ವಿಜಯ ಕರ್ನಾಟಕಕ್ಕೆ' ಸಂದರ್ಶನ ನೀಡಿದ್ದಾರೆ. Q:ರೈತರ ಬೇಡಿಕೆಗೆ ಸಂಬಂಧಿಸಿ ಭಾರತೀಯ ಕಿಸಾನ್‌ ಸಂಘದ (ಬಿಕೆಎಸ್‌) ನಿಲುವೇನು? ಭಾರತದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಈಗ ದಾಖಲೆಯ ಮಟ್ಟದಲ್ಲಿ ಸುಧಾರಿಸಿರುವುದರಿಂದ, ಅದಕ್ಕೆ ತಕ್ಕಂತೆ ಮಾರುಕಟ್ಟೆ ಸುಧಾರಣೆ ಕೂಡ ಅತ್ಯವಶ್ಯಕ. ದೇಶದಲ್ಲಿ ಆಹಾರ ಧಾನ್ಯಗಳ ಕೊರತೆ ಇದ್ದಾಗಿನ ಹಳೆಯ ಕಾಲದ ಕಾಯಿದೆಗಳನ್ನೇ ಈಗಲೂ ಮುಂದುವರಿಸುವುದರಿಂದ ನಿಜಕ್ಕೂ ರೈತರಿಗೇ ಹಾನಿಯಾಗುತ್ತಿದೆ. ಆದರೆ ಸರಕಾರ ಈಗ ಜಾರಿಗೊಳಿಸಿರುವ ಕಾಯಿದೆ ಕೆಲ ನ್ಯೂನತೆಗಳನ್ನೂ ಹೊಂದಿದೆ. ಅವುಗಳನ್ನು ಸರಿಪಡಿಸಬೇಕಾಗಿದೆ. ಆದರೆ ಇಡೀ ಕಾಯಿದೆಯನ್ನೇ ತಿರಸ್ಕರಿಸುವುದು ರಾಜಕೀಯ ಪೂರ್ವಾಗ್ರಹ ಪೀಡಿತವಾಗಿದ್ದು, ಸಮಂಜಸವಲ್ಲಎಂಬುದು ಭಾರತೀಯ ಕಿಸಾನ್‌ ಸಂಘದ ನಿಲುವಾಗಿದೆ. Q:ಪ್ರತಿಭಟನೆಯಲ್ಲಿ ಬಿಕೆಎಸ್‌ ಪಾತ್ರವೇನು? ನಾವು ರೈತರ ಜತೆಗಿದ್ದೇವೆ. ಕೃಷಿ ಕಾಯಿದೆಯ ಚರ್ಚೆ, ಸಂವಾದಗಳಲ್ಲಿ ಭಾರತೀಯ ಕಿಸಾನ್‌ ಸಂಘ ತೊಡಗಿಸಿದೆ. ಪ್ರಧಾನಿಯವರಿಗೂ ಮನವಿಗಳನ್ನು ಸಲ್ಲಿಸಲಾಗಿದೆ. ದೇಶಾದ್ಯಂತ ರೈತರ ಸಹಿ ಸಂಗ್ರಹಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಆದರೆ ನೇರವಾಗಿ ಪ್ರತಿಭಟನೆಯಲ್ಲಿ ತೊಡಗಿಸಿಲ್ಲ. (ಭಾರತೀಯ ಮಜ್ದೂರ್‌ ಸಂಘದ ಸ್ಥಾಪಕ ದತ್ತೋಪಂತ ಠೇಂಗಡಿಯವರು 1979ರಲ್ಲಿ ಭಾರತೀಯ ಕಿಸಾನ್‌ ಸಂಘವನ್ನೂ ಸ್ಥಾಪಿಸಿದ್ದರು.) Q:ಬಿಕೆಎಸ್‌ನ ಬೇಡಿಕೆಗಳೇನು? ಮೊದಲನೆಯದಾಗಿ ಕನಿಷ್ಠ ಬೆಂಬಲ ಬೆಲೆಯನ್ನು ಕಾಯಿದೆಯ ವ್ಯಾಪ್ತಿಗೆ ತರಬೇಕು. ಎಂಎಸ್‌ಪಿಗಿಂತ ಕಡಿಮೆ ಬೆಲೆಗೆ ಯಾರೂ ಕೃಷಿ ಉತ್ಪನ್ನಗಳನ್ನು ಖರೀದಿಸಬಾರದು. ಎರಡನೆಯದಾಗಿ ಎಲ್ಲ ಖಾಸಗಿ ವರ್ತಕರು, ವ್ಯಾಪಾರಿಗಳ ನೋಂದಣಿಯನ್ನು ಕಡ್ಡಾಯವಾಗಿ ಮಾಡಬೇಕು. ಕಾಯಿದೆಯಲ್ಲಿ ಪ್ಯಾನ್‌ ಕಾರ್ಡ್‌ ಇರುವ ಯಾರಾದರೂ ರೈತರ ಹೊಲದಿಂದ ನೇರವಾಗಿ ಖರೀದಿಸಬಹುದು ಎಂದಿದೆ. ಆದರೆ ವರ್ತಕರ ಬ್ಯಾಂಕ್‌ ಭದ್ರತೆ ಸಹಿತ ನೋಂದಣಿ ವ್ಯವಸ್ಥೆಯನ್ನು ರಾಜ್ಯ ಅಥವಾ ಕೇಂದ್ರ ಸರಕಾರ ಮಾಡಬೇಕು. ಇರುವುದು ಮುಖ್ಯ. ಇಲ್ಲದಿದ್ದರೆ ರೈತರನ್ನು ವರ್ತಕರು ವಂಚಿಸುವ ಸಾಧ್ಯತೆ ಇದೆ. ಮೂರನೆಯದಾಗಿ ರೈತರು ಮತ್ತು ವರ್ತಕರು, ಕಂಪನಿಗಳ ನಡುವಣ ವ್ಯಾಜ್ಯ ತಕರಾರುಗಳನ್ನು ಇತ್ಯರ್ಥಪಡಿಸಲು ಪ್ರತ್ಯೇಕ ಕೃಷಿ ನ್ಯಾಯಾಧಿಕರಣಗಳನ್ನು ಸ್ಥಾಪಿಸಬೇಕು. ರೈತರು ವಾಸಿಸುವ ಜಿಲ್ಲಾಮಟ್ಟದಲ್ಲಿಯೇ ಪ್ರಕರಣಗಳು ಇತ್ಯರ್ಥವಾಗಬೇಕು. Q:ಪ್ರತಿಭಟನಾಕಾರರ ಆಗ್ರಹಗಳು ರಾಜಕೀಯ ಪ್ರೇರಿತವೇ, ಸರಕಾರ ಹೇಗೆ ಸ್ಪಂದಿಸುತ್ತಿದೆ? ರೈತರ ಆಗ್ರಹಗಳು ರಾಜಕೀಯ ಪ್ರೇರಿತವಲ್ಲ, ನೈಜ ಆತಂಕಗಳು ಇವೆ. ಮಾತುಕತೆಯ ಮೂಲಕ, ತಿದ್ದುಪಡಿಗಳ ಮೂಲಕ ಅವುಗಳನ್ನು ಬಗೆಹರಿಸಬೇಕು. ಆದರೆ ಇಡೀ ಕಾಯಿದೆಯನ್ನೇ ರದ್ದುಪಡಿಸಬೇಕು ಎಂಬ ಬೇಡಿಕೆ ವಾಸ್ತವವಾಗಿ ರೈತರದ್ದಲ್ಲ. ಇದು ರಾಜಕೀಯ ಪ್ರೇರಿತವಾಗಿದ್ದು, ರಾಜಕೀಯ ಪಕ್ಷಗಳೂ ಪ್ರತಿಭಟನೆಯಲ್ಲಿ ಕೈಜೋಡಿಸಿರುವುದರಿಂದ ಹೀಗಾಗಿದೆ. ಸರಕಾರ ಕೂಡ ಹಲವು ವಿವಾದಾತ್ಮಕ ಅಂಶಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದೆ. ಉದಾಹರಣೆಗೆ ನೂತನ ಕಾಯಿದೆಯಡಿಯಲ್ಲಿ ಸಿವಿಲ್‌ ಕೋರ್ಟ್‌ನಲ್ಲಿ ವಿವಾದವನ್ನು ಪ್ರಶ್ನಿಸಲು ನಿರ್ಬಂಧ ಇತ್ತು. ಅದನ್ನು ಸಡಿಲಗೊಳಿಸುವುದಾಗಿ ತಿಳಿಸಿದೆ. ಇನ್ನೂ ಕೆಲ ಆತಂಕಗಳು ಇವೆ. ಉದಾಹರಣೆಗೆ ತೋಟಗಾರಿಕೆ ಉತ್ಪನ್ನಗಳ ದರ ರಿಟೇಲ್‌ ಮಾರುಕಟ್ಟೆಯಲ್ಲಿ 100 ಪರ್ಸೆಂಟ್‌ ಹೆಚ್ಚಳವಾದರೆ, ಅವುಗಳ ದಾಸ್ತಾನು ಮೇಲೆ ಮಿತಿ ವಿಧಿಸಬಹುದು. ಶೀಘ್ರ ಕೊಳೆಯದಿರುವ ಕೃಷಿ ಉತ್ಪನ್ನಗಳ ಚಿಲ್ಲರೆ ದರ ಶೇ.50ರಷ್ಟು ವೃದ್ಧಿಸಿದರೆ ಕೂಡ ದಾಸ್ತಾನು ಮಿತಿ ಜಾರಿಗೊಳಿಸಬಹುದು. ಆದರೆ ಈ ದಾಸ್ತಾನು ಮಿತಿಯು ಸಂಸ್ಕರಣೆ ಉದ್ದಿಮೆದಾರರಿಗೆ ಅನ್ವಯವಾಗುವುದಿಲ್ಲ. ಸಂಸ್ಕರಣೆ ಘಟಕದ ಒಟ್ಟಾರೆ ಮಿತಿಯನ್ನು ಮೀರದಿದ್ದರೆ ಆಯಿತು ಎಂದು ಕಾಯಿದೆ ಹೇಳಿದ್ದರೂ, ದಾಸ್ತಾನಿಗೆ ಅವಕಾಶ ಕಲ್ಪಿಸಲಾಗಿದೆ. ಇದು ಸರಿಯೇ ಎಂಬುದನ್ನು ಪರಾಮರ್ಶೆಗೆ ಒಳಪಡಿಸಬೇಕಾಗಿದೆ. Q:ಕನಿಷ್ಠ ಬೆಂಬಲ ಬೆಲೆಯನ್ನು ಕಾಯಿದೆಯಾಗಿಸಿದರೆ, ಮಾರುಕಟ್ಟೆ ವ್ಯವಸ್ಥೆಗೆ ಪ್ರತಿಕೂಲ ಪ್ರಭಾವ ಬೀರಬಹುದು, ಖಾಸಗಿ ವಲಯದ ಹೂಡಿಕೆ ಬರದು ಎಂಬ ವಾದಕ್ಕೆ ಏನೆನ್ನುತ್ತೀರಿ? ಇದು ತಪ್ಪು ಕಲ್ಪನೆ. ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಪೂರೈಕೆಯೇ ದರವನ್ನು ನಿಗದಿಪಡಿಸುತ್ತದೆ ಎನ್ನುವುದು ಮಿಥ್ಯೆಯಷ್ಟೇ. ನಮ್ಮಲ್ಲಿ ಬೆಂಬಲ ಬೆಲೆ ಪದ್ಧತಿ ಇದ್ದರೆ, ಅಭಿವೃದ್ಧಿ ಹೊಂದಿರುವ ದೇಶಗಳಲ್ಲೂ ಕೃಷಿಕರಿಗೆ ಭಾರಿ ಮೊತ್ತದ ಸಬ್ಸಿಡಿಗಳನ್ನು ವಿತರಿಸಲಾಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ರೈತರ ಶೋಷಣೆಯನ್ನು ತಪ್ಪಿಸಲು ಕನಿಷ್ಠ ಬೆಂಬಲ ಬೆಲೆಗೆ ಕಾಯಿದೆಯ ಬಲ ಅಗತ್ಯ. Q:ಕೇಂದ್ರ ಸರಕಾರ ಚರ್ಚಿಸದೆಯೇ ಜಾರಿಗೊಳಿಸಿದೆಯೇ? ಕೃಷಿ ಮಾರುಕಟ್ಟೆ (ಎಪಿಎಂಸಿ) ಸುಧಾರಣೆಯ ಕುರಿತು ಕೇಂದ್ರ ಸರಕಾರ 2003ರಲ್ಲಿಯೇ ಚರ್ಚೆಗೆ ಚಾಲನೆ ನೀಡಿತ್ತು. ಅದು ಹೊಸತಲ್ಲ. ಬಹುತೇಕ ರಾಜ್ಯಗಳು ಅದಕ್ಕೆ ಸ್ಪಂದಿಸಿರಲಿಲ್ಲ. ಆದರೆ ಕೃಷಿ ಮಾರುಕಟ್ಟೆಯ ಮೂಲಭೂತ ಬದಲಾವಣೆಗಳನ್ನು ಮಾಡಲು ಹೊರಟಿರುವ ಇತ್ತೀಚಿನ ಹೊಸ ಕಾಯಿದೆಗಳ ಬಗ್ಗೆ ಚರ್ಚೆ ಅಷ್ಟಾಗಿ ನಡೆದಿಲ್ಲ. ಸರಕಾರ ಆತುರದಲ್ಲಿ ಜಾರಿಗೊಳಿಸಿರುವುದು ನಿಜ. ಸರಕಾರ ನಿಷ್ಪಕ್ಷಪಾತವಾದ ಸಮಿತಿ ರಚಿಸಿ ವಿವಾದ ಇತ್ಯರ್ಥಪಡಿಸಲು ಈಗಲೂ ಅವಕಾಶ ಇದೆ.


from India & World News in Kannada | VK Polls https://ift.tt/2Lh944I

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...