
ಮಂಗಳೂರು: ವೈದ್ಯಕೀಯ ಕ್ಷೇತ್ರ ಮತ್ತು ವೈದ್ಯಕೀಯ ವೃತ್ತಿ ಸುಳ್ಳುಗಳನ್ನೇ ಹೇಳಿಕೊಂಡು, ಅದನ್ನೇ ನಂಬಿಸಿಕೊಂಡು ಬರುತ್ತಿರುವಾಗ, ನಾನು ಸತ್ಯವನ್ನೇ ಹೇಳಿಕೊಂಡು ಬಂದಿದ್ದೇನೆ. ಜನರು ಅದನ್ನು ಮೆಚ್ಚಿದ್ದಾರೆ. ಸರಕಾರ ಕೂಡಾ ಅದನ್ನು ಒಪ್ಪಿದ್ದರಿಂದ ದೇಶದ ಅತ್ಯುನ್ನತ ಪುರಸ್ಕಾರಗಳಿಗೆ ಪಾತ್ರನಾಗಲು ಸಾಧ್ಯವಾಗಿದೆ ಎಂದು ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ವೈದ್ಯ ಡಾ.ಬಿಎಂ ಹೆಗ್ಡೆ ಹೇಳಿದರು. ಘೋಷಣೆ ಬಳಿಕ ಮಂಗಳವಾರ ಅವರ ನಿವಾಸಕ್ಕೆ ತೆರಳಿ, ಶುಭಾಶಯಗಳನ್ನು ಹೇಳುವ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಅವರು, ವೈದ್ಯಕೀಯ ವೃತ್ತಿ ಎಂದು ಕೂಡಾ ಉದ್ಯಮವಾಗಲು ಸಾಧ್ಯವಿಲ್ಲ. ದುರಷೃಷ್ಟವಶಾತ್ ಅದು ಉದ್ಯಮವಾಗಿ ಬೆಳೆದಿದೆ ಎಂದು ಖೇದ ವ್ಯಕ್ತಪಡಿಸಿದರು. ವೈದ್ಯಕೀಯ ಕ್ಷೇತ್ರದ ತಪ್ಪುಗಳ ಬಗ್ಗೆ ನಾನು ಮಾತನಾಡುವಾಗ ಅನೇಕರಿಗೆ ಇಷ್ಟವಾಗಿಲ್ಲ. ಹಲವರ ವಿರೋಧ ಕೂಡಾ ಎದುರಿಸಿದ್ದೇನೆ. ಹಾಗಂತ ನಾನು ಸತ್ಯವನ್ನು ಮರೆ ಮಾಚಲು ಸಾಧ್ಯವಿಲ್ಲ. ಮುಂದೆಯೂ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತೇನೆ. ಪದ್ಮವಿಭೂಷಣ ಪುರಸ್ಕಾರದಿಂದ ಬಹಳಷ್ಟು ಸಂತೋಷವಾಗಿದೆ. ಜತೆಗೆ ನನ್ನ ಜವಬ್ದಾರಿಯೂ ಹೆಚ್ಚಿದೆ ಎಂದು ಡಾ.ಹೆಗ್ಡೆ ಹರ್ಷ ವ್ಯಕ್ತಪಡಿಸಿದರು. ಲಾಕ್‌ಡೌನ್ ಸರಿಯಾದ ನಿರ್ಧಾರ : ಕೊರೊನಾ ಬಗ್ಗೆ ಅಷ್ಟು ಭಯಪಡುವ ಅಗತ್ಯವಿರಲಿಲ್ಲ, ಜಾಗೃತಿಯೇ ಮುಖ್ಯ. ಸರಕಾರ ಲಾಕ್‌ಡೌನ್ ಹೇರುವ ಮೂಲಕ ಕೊರೊನಾವನ್ನು ಉತ್ತಮವಾಗಿ ನಿಭಾಯಿಸಿದೆ. ಒಂದು ವರ್ಗ ಲಾಕ್‌ಡೌನ್ ಅಗತ್ಯವಿರಲಿಲ್ಲ, ಉದ್ಯಮ ನಷ್ಟವಾಗಿದೆ ಎನ್ನುತ್ತಾರೆ. ಲಾಕ್‌ಡೌನ್ ಮಾಡಿಯೇ ಅಷ್ಟು ಜನ ಬಳಲಿ, ಸಾವು, ನೋವು ಸಂಭವಿಸಿವೆ. ಇನ್ನು ಭಯವೇ ಇಲ್ಲದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ನೀವೇ ಊಹಿಸಿ ಎಂದರು. ಈಗ ಕೋವಿಡ್‌ಗೆ ಲಸಿಕೆ ಬಂದಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಲಸಿಕೆಯೇ ಪರಿಹಾರವಲ್ಲ. ಸೋಂಕಿನಿಂದ ರಕ್ಷಣೆ ಪಡೆಯಲು ಜನರು ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಇನ್ನು ಎಲ್ಲರಿಗೂ ಉತ್ತಮ ವೈದ್ಯಕೀಯ ಸೇವೆ ಸರಕಾರದಿಂದ ಮಾತ್ರ ಕೊಡಲು ಅಸಾಧ್ಯ. ಖಾಸಗಿ ವೈದ್ಯಕೀಯ ಸಂಸ್ಥೆಗಳ ಸಹಭಾಗಿತ್ವ ಅತೀ ಅಗತ್ಯ. ಅದು ನಮ್ಮ ಕರಾವಳಿಯಲ್ಲಿ ಯಶಸ್ವಿಯಾಗಿದೆ. ಅದರ ಸಮನ್ವಯವನ್ನು ಸರಕಾರ ಮಾಡಬೇಕು. ಎಲ್ಲರಿಗೂ ಆರೋಗ್ಯ ಸೇವೆ ಸಿಗುತ್ತಿದೆಯೋ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಡಾ.ಬಿ.ಎಂ.ಹೆಗ್ಡೆ ಹೇಳಿದರು. ಸಂಸದರ, ಶಾಸಕರ ಅಭಿನಂದನೆ: ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಡಾ.ಬಿಎಂ ಹೆಗ್ಡೆ ಅವರನ್ನು ಸಂಸದ, ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ಡಿ.ವೇದವ್ಯಾಸ್ ಕಾಮತ್ ಅಭಿನಂದಿಸಿದರು. ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಮುಂತಾದವರು ಉಪಸ್ಥಿತರಿದ್ದರು.
from India & World News in Kannada | VK Polls https://ift.tt/36gt7Iq