ಬೆಂಗಳೂರು: ಖ್ಯಾತ ಲೈಂಗಿಕ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಅವರ ಹೆಸರಿನಲ್ಲಿ ತೆಗೆದ ಖದೀಮರು, ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಸ್ತ್ರೀಯರ ಸಮಸ್ಯೆಗಳ ಕುರಿತು ಕನ್ಸಲ್ಟೇಷನ್ ಮೂಲಕ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಡಾ. ಪದ್ಮಿನಿ ಅವರು ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಡಾ. ಪದ್ಮಿನಿ ಅವರ ನೈಜ ಖಾತೆಯಲ್ಲಿನ ಫೋಟೊಗಳನ್ನು ಎತ್ತಿಕೊಂಡಿರುವ ಖದೀಮರು, ನಕಲಿ ಖಾತೆ ಸೃಷ್ಟಿಸಿ ವೃತ್ತಿಯನ್ನು ಸೆಕ್ಸಾಲಜಿಸ್ಟ್ ಎಂದು ಬರೆದುಕೊಂಡಿದ್ದಾರೆ. ನಕಲಿ ಖಾತೆಯಿಂದ ನೂರಾರು ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗಿದೆ. ರಿಕ್ವೆಸ್ಟ್ ಆ್ಯಕ್ಸೆಪ್ಟ್ ಮಾಡಿದವರ ಜೊತೆ ನಕಲಿ ಖಾತೆ ವ್ಯಕ್ತಿ ಲೈಂಗಿಕ ವಿಚಾರಗಳ ಕುರಿತು ಚಾಟಿಂಗ್ ಮಾಡಿದ್ದಾರೆ. ಅಲ್ಲದೇ, ಖಾಸಗಿ ಭಾಗಗಳ ವಿಡಿಯೊ ಮತ್ತು ಫೋಟೊ ತೆಗೆದು ಕಳುಹಿಸಿ ಎಂದಿದ್ದಾರೆ. ಪೋನ್ ನಂಬರ್ ಕೊಡಿ ಎಂದೂ ಕೇಳಿದ್ದಾರೆ. ಇದರಿಂದ ಅನುಮಾನಗೊಂಡು, ಡಾ. ಪದ್ಮಿನಿ ಅವರನ್ನು ಪೋನ್‌ನಲ್ಲಿ ಸಂಪರ್ಕಿಸಿದಾಗ ಚಾಟಿಂಗ್ ಮಾಡಿದವರು ನಕಲಿ ವ್ಯಕ್ತಿ ಎಂದು ಗೊತ್ತಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪದ್ಮಿನಿ ಪ್ರಸಾದ್ ''ನಾನು ಆನ್‌ಲೈನ್ ಸೇರಿದಂತೆ ಜಾಲತಾಣಗಳ ಮೂಲಕ ಯಾವುದೇ ಕನ್ಸಲ್ಟೇಷನ್ ಮಾಡುವುದಿಲ್ಲ. ಕ್ಲಿನಿಕ್‌ನಲ್ಲಿ ನೇರ ಭೇಟಿ ಮೂಲಕ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಆದರೆ, ನಕಲಿ ಖಾತೆಯ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ದೂರು ಕೂಡು ನೀಡುತ್ತಿದ್ದೇನೆ. ನನ್ನ ಹೆಸರಿನಲ್ಲಿ ಯಾರಾದರೂ ಯಾವುದೇ ಜಾಲತಾಣದ ಮೂಲಕ ಕನ್ಸಲ್ಟೇಷನ್‌ಗೆ ಯತ್ನಿಸಿದರೆ ನಂಬಬೇಡಿ. ನೇರವಾಗಿ ಕ್ಲಿನಿಕ್‌ಗೆ ಭೇಟಿ ನೀಡಿ ಸಂಪರ್ಕಿಸಿ'' ಎಂದು ತಿಳಿಸಿದರು. ರಾತ್ರಿ ಕನ್ಸಲ್ಟೇಷನ್ ! ಲೈಂಗಿಕ ಸಮಸ್ಯೆ ಏನೇ ಇದ್ದರೂ ರಾತ್ರಿ 10ರಿಂದ 11.30ರವರೆಗೆ ಮೆಸೇಜ್ ಮಾಡಿ ಎಂದು ನಕಲಿ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಮುಗ್ಧ ಮಹಿಳೆಯರನ್ನು ಆನ್‌ಲೈನ್ ಕನ್ಸಲ್ಟೇಷನ್ ನೆಪದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು ಫೇಸ್‌ಬುಕ್ ಬಳಕೆದಾರರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಕಿರಾತಕರನ್ನು ಆದಷ್ಟು ಬೇಗ ಹಿಡಿಯುವ ಬಗ್ಗೆ ಪೊಲೀಸರು ಭರವಸೆ ನೀಡಿದ್ದಾರೆ.
from India & World News in Kannada | VK Polls https://ift.tt/387AKC4