ಬೆಂಗಳೂರು: ಕೋವಿಡ್-19 ಲಸಿಕೆ ಸಾರ್ವತ್ರಿಕ ವಿತರಣೆಗೆ ಯಾವುದೇ ಕ್ಷಣದಲ್ಲಿ ಅನುಮತಿ ಸಿಗುವ ನಿರೀಕ್ಷೆಯ ನಡುವೆಯೇ, ವ್ಯಾಕ್ಸಿನೇಷನ್ ಸನ್ನದ್ಧತೆಯ ಪರೀಕ್ಷೆಗಾಗಿ ಎಲ್ಲ ರಾಜ್ಯಗಳಲ್ಲೂ ಶನಿವಾರದಿಂದ ಅಣುಕು ಲಸಿಕೆ ವಿತರಣೆ (ಡ್ರೈರನ್) ಶುರುವಾಗಿದೆ. ರಾಜ್ಯದಲ್ಲೂ , ಬೆಳಗಾವಿ, ಕಲಬುರಗಿ, ಶಿವಮೊಗ್ಗ ಮೈಸೂರು ಸೇರಿದಂತೆ 5 ಜಿಲ್ಲೆಗಳನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಜಿಲ್ಲಾ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ಪ್ರತಿ ಹಂತದಲ್ಲಿ ಕನಿಷ್ಠ 25 ಮಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ಅಣಕು ಲಸಿಕೆ ವಿತರಣೆ ಕಾರ್ಯಕ್ರಮ ಆರಂಭವಾಗಿದೆ. ಆರೋಗ್ಯ ಇಲಾಖೆಯ 25 ಮಂದಿ ಈಗಾಗಲೇ ಆಗಮಿಸಿದ್ದು ಒಬ್ಬೊಬ್ಬರೇ ಲಸಿಕೆ ಪಡೆಯುತ್ತಿದ್ದಾರೆ. ಈ ಮೂಲಕ ಕೊರೊನಾ ಲಸಿಕೆ ಸಂಬಂಧ ದೇಶದ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ. ಬೆಂಗಳೂರಿನಲ್ಲಿ ಎರಡು ಕಡೆ ಲಸಿಕೆಯ ಡ್ರೈ ರನ್ ನಡೆಯತ್ತಿದೆ. ಒಂದು ನಗರದ ವಿದ್ಯಾಪೀಠ (ದಕ್ಷಿಣ ವಲಯ) ಮತ್ತು ಕಾಮಾಕ್ಷಿಪಾಳ್ಯ (ಪಶ್ಚಿಮ ವಲಯ)ದಲ್ಲಿ ನಡೆಸಲಾಗುತ್ತಿದೆ. ಇನ್ನೊಂದು ಬೆಂಗಳೂರು ಗ್ರಾಮೀಣ ಪ್ರದೇಶದ ಬನ್ನೇರುಘಟ್ಟ-ಅನೆಕಲ್ ರಸ್ತೆಯ ಹರಗದ್ದೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ವಿತರಣೆ ನಡೆಯುತ್ತಿದೆ. ಒಂದು ಪ್ರಾಥಮಿಕ ಕೇಂದ್ರದಲ್ಲಿ 25 ಮಂದಿ ಲಸಿಕೆ ಪಡೆಯಲಿದ್ದಾರೆ. ವಿತರಣೆ ಬಳಿಕ ಕೇಂದ್ರಕ್ಕೆ ರಾಜ್ಯ ವರದಿ ನೀಡುತ್ತದೆ. ಕೇಂದ್ರ ಸರಕಾರದ ಒಂದು ಬಾರಿ ಲಸಿಕೆ ನೀಡಲು ಅನುಮತಿ ನೀಡಿದರೆ ಬೆಂಗಳೂರಿನ ಸುಮಾರು 1,517 ಆರೋಗ್ಯ ಕೇಂದ್ರಗಳನ್ನು ಲಸಿಕೆ ವಿತರಣೆ ಬಳಸಿಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ. ಕೋವಿಶೀಲ್ಡ್ ಬಳಕೆಗೆ ಅಸ್ತು ಆಕ್ಸ್‌ಫರ್ಡ್ ವಿವಿ-ಆಸ್ಟ್ರಾಜೆನಿಕಾ ಸಹಯೋಗದಲ್ಲಿ ಪುಣೆಯ ಸೀರಮ್ ಇನ್ಸ್‌ಟಿಟ್ಯೂಟ್ ತಯಾರಿಸಿದ 'ಕೋವಿಶೀಲ್ಡ್' ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ಸೋಂಕಿತರಿಗೆ ಬಳಸಲು ತಜ್ಞರ ಸಮಿತಿ ಶುಕ್ರವಾರ ಷರತ್ತುಬದ್ಧ ಅನುಮೋದನೆ ನೀಡಿದೆ. ಈ ಮೂಲಕ ಇದು ಭಾರತದಲ್ಲಿ ಬಳಕೆಗೆ ಅನುಮತಿ ಪಡೆದ ಮೊದಲ ಲಸಿಕೆ ಎನಿಸಿಕೊಂಡಿದೆ. ಆದರೆ, ಲಸಿಕೆಯ ಸಾರ್ವತ್ರಿಕ ಬಳಕೆಗೆ ಔಷಧ ನಿಯಂತ್ರಣ ಪ್ರಾಧಿಕಾರದ (ಡಿಸಿಜಿಐ) ಅನುಮೋದನೆ ಅಗತ್ಯವಾಗಿದ್ದು, ಯಾವುದೇ ಕ್ಷಣ ಅಲ್ಲೂ ಗ್ರೀನ್ ಸಿಗ್ನಲ್ ದೊರೆಯುವ ನಿರೀಕ್ಷೆಯಿದೆ.
from India & World News in Kannada | VK Polls https://ift.tt/38Qlskx