ಬೆಂಗಳೂರು: ರಾಜ್ಯದಲ್ಲಿ ಸಂಪುಟ ಸರ್ಕಸ್ ತೀವ್ರಗೊಂಡಿದ್ದು ಸಚಿವರು ಹಾಗೂ ಶಾಸಕರು ದೆಹಲಿಯತ್ತ ಮುಖಮಾಡುತ್ತಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಚೇರಿ ಪೂಜೆಯಲ್ಲಿ ಭಾಗಿಯಾಗುವ ನೆಪದಲ್ಲಿ ಸಚಿವರ ತಂಡ ದೆಹಲಿಗೆ ತೆರಳುತ್ತಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಸಚಿವ ರಮೇಶ್ ಜಾರಕಿಹೊಳಿ ಬುಧವಾರವೇ ದೆಹಲಿಗೆ ತೆರಳಿದ್ದರೆ, ಆರ್ ಅಶೋಕ್, ಡಿಸಿಎಂ ಲಕ್ಷ್ಮಣ ಸವದಿ, ಸಚಿವಾಕಾಂಕ್ಷಿ ಸಿ.ಪಿ ಯೋಗೇಶ್ವರ್ ದೆಹಲಿ ವಿಮಾನ ಏರಿದ್ದಾರೆ. ಇನ್ನು ಸಚಿವ ಕೆ.ಎಸ್ ಈಶ್ವರಪ್ಪ ಕೂಡಾ ದೆಹಲಿಯಲ್ಲಿ ಇದ್ದಾರೆ. ಇವರ ಜೊತೆಗೆ ಮತ್ತಷ್ಟು ಸಚಿವರು ಶಾಸಕರು ದೆಹಲಿಗೆ ತೆರಳುವ ಸಾಧ್ಯತೆ ಇದ್ದು ಮುಖಂಡರ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ. ದೆಹಲಿಯಲ್ಲಿರುವ ಕೆ.ಎಸ್ ಈಶ್ವರಪ್ಪ ಬುಧವಾರ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದರ ಬೆನಲ್ಲೇ ರಮೇಶ್ ಜಾರಕಿಹೊಳಿ ದೆಹಲಿಗೆ ತೆರಳಿ ವರಿಷ್ಠರವನ್ನು ಭೇಟಿ ಮಾಡುವ ಪ್ರಯತ್ನದಲ್ಲಿದ್ದಾರೆ. ಮತ್ತೊಂದು ಕಡೆಯಲ್ಲಿ ಆರ್ ಅಶೋಕ್ ಹಾಗೂ ಲಕ್ಷ್ಮಣ ಸವದಿ ಕೂಡಾ ದೆಹಲಿಗೆ ತೆರಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದೆಹಲಿಯಲ್ಲಿ ಸಿ.ಟಿ ರವಿ ನೂತನ ಕಚೇರಿಯಲ್ಲಿ ಪೂಜೆಯಲ್ಲಿ ಭಾಗಿಯಾಗಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕೂಡಾ ಬರುವ ಸಾಧ್ಯತೆ ಇದೆ. ಈ ಸಂದರ್ಭವನ್ನು ಬಳಸಿಕೊಂಡು ವರಿಷ್ಠರ ಜೊತೆಗೆ ರಾಜ್ಯ ರಾಜಕೀಯದ ಹಲವು ವಿಚಾರಗಳ ಕುರಿತಾಗಿ ಮಾತುಕತೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವಿಳಂಬ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನುತ್ತಿವೆ ಬಿಜೆಪಿ ಮೂಲಗಳು. ಈ ಎಲ್ಲಾ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಸಚಿವರ ದೆಹಲಿ ಭೇಟಿ ಕುತೂಹಲ ಕೆರಳಿಸಿದೆ.
from India & World News in Kannada | VK Polls https://ift.tt/2HC5Wz4