ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ನಕಲಿಯಾಟ..! ದುಷ್ಟ ಜಾಲಕ್ಕೆ ಗೋಕಾಕ್‌ ಏಜೆಂಟ್ ಕಿಂಗ್‌ಪಿನ್..?

ಪ್ರಮೋದ ಹರಿಕಾಂತ ಬೆಳಗಾವಿ: ರಾಜ್ಯದಲ್ಲಿ ನಡೆದ ಪೊಲೀಸ್‌ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿರುವ ನಕಲಿ ಅಭ್ಯರ್ಥಿಗಳನ್ನು ಸೃಷ್ಟಿಸಿದ ಕಿಂಗ್‌ಪಿನ್‌ ಹುಡುಕಾಟದಲ್ಲಿರುವ ಪೊಲೀಸರು, ಬೆಳಗಾವಿ ಕಡೆ ಮುಖಮಾಡಿದ್ದಾರೆ. ಭಾನುವಾರ (ನ.22) ನಡೆದ ಪೊಲೀಸ್‌ ಕಾನ್‌ಸ್ಟೆಬಲ್‌ (ಕೆಎಸ್‌ಆರ್‌ಪಿ, ಐಆರ್‌ಬಿ) ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ನಾಲ್ವರು ನಕಲಿ ಅಭ್ಯರ್ಥಿಗಳು ಸಿಕ್ಕಿ ಬಿದ್ದಿದ್ದರು. ಜತೆಗೆ ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ, ಚಿತ್ರದುರ್ಗ ಸೇರಿ ರಾಜ್ಯದಲ್ಲಿ 13 ನಕಲಿ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸ್‌ ನೇಮಕಾತಿ ಘಟಕದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಮೃತ ಪಾಲ್‌ ತಿಳಿಸಿದ್ದಾರೆ. ಅದರಲ್ಲಿ ಬೆಳಗಾವಿಯಲ್ಲಿ ಸಿಕ್ಕಿ ಬಿದ್ದ ನಾಲ್ವರು ಆರೋಪಿಗಳನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಗೋಕಾಕ ತಾಲೂಕಿನ ಏಜೆಂಟ್‌ ಒಬ್ಬನ ಮಾಹಿತಿ ಸಿಕ್ಕಿದೆ. ಅಲ್ಲದೆ, ಕೋಚಿಂಗ್‌ ಸೆಂಟರ್‌ಗಳೂ ಕೂಡ ಈ ಅಕ್ರಮದಲ್ಲಿ ಭಾಗಿಯಾಗಿರುವ ಸುಳಿವು ಸಿಕ್ಕಿದೆ. ಹಾಗಾಗಿ ಬೇರೆ ಜಿಲ್ಲೆಯ ಪೊಲೀಸರು ಕೂಡ ಬೆಳಗಾವಿಯಲ್ಲಿ ಸುಳಿವು ಹುಡುಕುತ್ತಿದ್ದಾರೆ. ಬೆಳಗಾವಿಯ ನಾಲ್ವರು ಆರೋಪಿಗಳು ಬಾಯಿ ಬಿಟ್ಟಿರುವ ಪ್ರಕಾರ, ಗೋಕಾಕ ತಾಲೂಕಿನ ಏಜೆಂಟರೊಬ್ಬರಿಂದ ಪರೀಕ್ಷೆ ಬರೆಯುವ ಡೀಲ್‌ ಸಿಕ್ಕಿದೆ. ಆ ಏಜೆಂಟ್‌ಗೂ ಸ್ಪರ್ಧಾತ್ಮಕ ಪರೀಕ್ಷೆಯ ಕೋಚಿಂಗ್‌ ಸೆಂಟರ್‌ವೊಂದಕ್ಕೆ ಸಂಬಂಧ ಇದೆ ಎಂದು ಗೊತ್ತಾಗಿದೆ. ಸದ್ಯ ಮೂಲ ಅಭ್ಯರ್ಥಿಗಳು, ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರ ಪತ್ತೆಯಾಗಿ ಬೆಳಗಾವಿ ನಗರ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. ನಾಲ್ವರು ಅಭ್ಯರ್ಥಿಗಳಿಗೆ ಏಜೆಂಟ್‌ ಆಗಿದ್ದ ವ್ಯಕ್ತಿಯಿಂದ ಈ ಅಕ್ರಮದ ಕಿಂಗ್‌ಪಿನ್‌ ಪತ್ತೆ ಮಾಡಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಇದೇ ರೀತಿ ಬೇರೆ ಜಿಲ್ಲೆಯಲ್ಲಿ ನಡೆದಿರುವ ನಕಲಿ ಅಭ್ಯರ್ಥಿಗಳ ಅಕ್ರಮದ ಬಗ್ಗೆಯೂ ಗೋಕಾಕ ಮೂಲದ ಏಜೆಂಟ್‌ನಿಂದ ಮಾಹಿತಿ ಸಿಗಬಹುದು ಎನ್ನುವ ಕಾರಣಕ್ಕೆ ಬೇರೆ ಜಿಲ್ಲೆಯ ಪೊಲೀಸರು ಕೂಡ ಅದೇ ಆರೋಪಿಯನ್ನು ಹುಡುಕುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಕೆಎಎಸ್‌ ತಯಾರಿ ನಡೆಸುತ್ತಿದ್ದ ಆರೋಪಿ..! ಬೆಳಗಾವಿಯಲ್ಲಿ ಸಿಕ್ಕಿ ಬಿದ್ದಿರುವ ನಾಲ್ವರು ಆರೋಪಿಗಳ ಪೈಕಿ ಒಬ್ಬ ಕೆಎಎಸ್‌ ಪರೀಕ್ಷೆ ತಯಾರಿ ನಡೆಸುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ. ಉಳಿದ ಆರೋಪಿಗಳು ಕೂಡ ಬೇರೆ ಬೇರೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದರು ಎಂದು ವಿಚಾರಣೆಯಲ್ಲಿ ಗೊತ್ತಾಗಿದೆ. ಇನ್ನು ಕೋಚಿಂಗ್‌ ಕೇಂದ್ರ ಆರಂಭಿಸಿದ ಕೆಲವರು ಹಣದಾಸೆಗೆ ಇಂಥ ದಂಧೆ ಆರಂಭಿಸಿದ್ದಾರೆ. ಅದಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಪೊಲೀಸರು ಕಂಡು ಕೊಂಡ ಸಂಗತಿ. ಅದೇನೆ ಇದ್ದರೂ ಗೋಕಾಕ ತಾಲೂಕಿನ ಏಜೆಂಟ್‌ ಸಿಕ್ಕ ಬಳಿಕ ಇನ್ನು ಯಾವ ಪರೀಕ್ಷೆಗಳಲ್ಲಿ ಇಂಥ ಅಕ್ರಮ ನಡೆದಿದೆ, ಈ ಅಕ್ರಮ ಜಾಲ ಎಲ್ಲಿಯವರೆಗೆ ವ್ಯಾಪಿಸಿದೆ ಎನ್ನುವುದು ಪತ್ತೆಯಾಗಲಿದೆ ಎಂದು ಬೆಳಗಾವಿಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.


from India & World News in Kannada | VK Polls https://ift.tt/3pXOC99

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...