ಶಿವಮೊಗ್ಗ: ಸೇವೆಯಿಂದ ನಿವೃತ್ತಿ ಹೊಂದಿದ ಬಳಿಕ ನೌಕರರು ಪಿಂಚಣಿಗಾಗಿ ಭವಿಷ್ಯ ನಿಧಿ ಸಂಸ್ಥೆಯ ಕಚೇರಿಗೆ ಅಲೆಯಬೇಕಾಗಿಲ್ಲ. ಇನ್ನು ಮುಂದೆ ನಿವೃತ್ತಿ ಹೊಂದಿದ ದಿನವೇ ಪಿಂಚಣಿಯನ್ನು ಪಡೆಯುವ ವ್ಯವಸ್ಥೆಯನ್ನು ಭವಿಷ್ಯ ನಿಧಿ ಸಂಸ್ಥೆ ಜಾರಿಗೊಳಿಸಿದೆ. ಭವಿಷ್ಯ ನಿಧಿ ಸದಸ್ಯರಿಗಾಗಿ ಪ್ರಯಾಸ್ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಇದರಡಿಯಲ್ಲಿ ನಿವೃತ್ತಿ ದಿನವೇ ಪಿಂಚಣಿ ಪಡೆಯಬಹುದಾಗಿದೆ ಎಂದು ಭವಿಷ್ಯ ನಿಧಿ ಸಹಾಯಕ ಆಯುಕ್ತ ಪಿ.ಶ್ರೀನಾಥ್ ತಿಳಿಸಿದರು. ಅವರು ನಗರದ ಭವಿಷ್ಯ ನಿಧಿ ವಿಭಾಗೀಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಿಂಚಣಿ ಯೋಜನೆಯಡಿ ಮಾಸಿಕ ಕಂತನ್ನು ಒಂದು ತಿಂಗಳ ಮುಂಚಿತವಾಗಿ ಭವಿಷ್ಯ ನಿಧಿ ಸಂಖ್ಯೆಗೆ ಕಟ್ಟಿದಲ್ಲಿ, ಅಂತಹ ಉದ್ಯೋಗಿಗಳ/ಕಾರ್ಮಿಕರ ಪಿಂಚಣಿಯ ಆದೇಶವನ್ನು ನಿವೃತ್ತಿಯ ದಿನವೇ ವಿತರಿಸಲಾಗುವುದು ಎಂದರು. ಕಾರ್ಮಿಕರ ಪಿಂಚಣಿ ಯೋಜನೆ 1995ರ ಅಡಿಯಲ್ಲಿ ಬರುವ ಉದ್ಯೋಗಿಗಳು ಮತ್ತು ಕಾರ್ಮಿಕರು 58 ವರ್ಷಕ್ಕೆ ಸೇವಾ ನಿವೃತ್ತಿ ಹೊಂದಿದ ದಿನವೇ ಪಿಂಚಣಿ ಪಡೆಯಲು ಪ್ರಯಾಸ್ ಯೋಜನೆ ಜಾರಿಗೊಳಿಸಲಾಗಿದೆ. ಈ ಹಿಂದೆ ನಿವೃತ್ತಿ ನಂತರ ಪಿಂಚಣಿಗಾಗಿ ಅರ್ಜಿ ಸಲ್ಲಿಸಬೇಕಿತ್ತು. ಅದಾಗಿ ಒಂದು ಅಥವಾ ಎರಡು ತಿಂಗಳ ನಂತರ ಪಿಂಚಣಿ ಬಿಡುಗಡೆಯಾಗುತ್ತಿತ್ತು ಎಂದರು. ಪ್ರಸ್ತುತ ಕೊರೊನಾಕ್ಕೆ ಒಳಗಾದ ಸಮಯದಲ್ಲಿ ಭವಿಷ್ಯನಿಧಿ ಸಂಸ್ಥೆಯು, ಸರಕಾರದ ಹಲವಾರು ಸೌಲಭ್ಯಗಳನ್ನು ತನ್ನ ಚಂದಾದಾರರಿಗೆ ಕಲ್ಪಿಸಿದೆ. ವೈದ್ಯಕೀಯ ಖರ್ಚಿಗೆ ಭವಿಷ್ಯ ನಿಧಿ ಮುಂಗಡ ಹಣ, ಚಂದಾದಾರರಿಗೆ ವಂತಿಗೆ ನೀಡುವಲ್ಲಿ ರಿಯಾಯಿತಿ ಮುಂತಾದ ಸೌಲಭ್ಯಗಳನ್ನು ಒದಗಿಸಿದೆ ಎಂದರು. ಸರಿಯಾದ ದಾಖಲೆ ಸಲ್ಲಿಸಿಭವಿಷ್ಯ ನಿಧಿ ಯೋಜನೆಯ ಸೌಲಭ್ಯಗಳನ್ನು ಸರಿಯಾದ ಸಮಯದಲ್ಲಿ ಪಡೆಯಲು ಸದಸ್ಯರು ತಮ್ಮ ಉದ್ಯೋಗದಾತರ ಮೂಲಕ ಸರಿಯಾದ ಬ್ಯಾಂಕ್ ಅಕೌಂಟ್ ಮತ್ತು ಆಧಾರ್ ಕೆವೈಸಿ ಮಾಹಿತಿಯನ್ನು ಯುನಿವರ್ಸಲ್ ಅಕೌಂಟ್ ನಂಬರ್ ಗೆ ಲಿಂಕ್ ಮಾಡಬೇಕು. ವಿಂಚಣಿದಾರರು, ತಮ್ಮ ಡಿಜಿಟಲ್ ಜೀವಂತ ಪ್ರಮಾಣ ಪತ್ರವನ್ನು ಸಾಮಾನ್ಯ ಸೇವಾ ಕೇಂದ್ರ, ಅಂಚೆ ಕಚೇರಿ, ಬ್ಯಾಂಕ್ ಮತ್ತು ಉಮಂಗ್(ಯುಎಂಎಎನ್‌ಜಿ) ಆ್ಯಪ್ ಮೂಲಕವೂ ಸಲ್ಲಿಸಬಹುದು ಎಂದು ಪಿ.ಶ್ರೀನಾಥ್ ಹೇಳಿದರು.
from India & World News in Kannada | VK Polls https://ift.tt/33eQArL