ನಿಜವಾಗಲೂ ಕಮಲ್‌ನಾಥ್ ಸರ್ಕಾರ ಉರುಳಿಸಿದ್ದು ದಿಗ್ವಿಜಯ ಸಿಂಗ್..!

ಶಿವಾನಂದ ಹಿರೇಮಠ ಹೊಸದಿಲ್ಲಿ: ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಪ್ರಭಾವಕ್ಕೆ ಒಳಗಾಗಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರು ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ಬಣವನ್ನು ಕಡೆಗಣಿಸಿದ್ದರ ಪರಿಣಾಮವೇ ದಶಕದ ನಂತರ ಅಧಿಕಾರ ಹಿಡಿದಿದ್ದ ಕಾಂಗ್ರೆಸ್‌ ಸರಕಾರಕ್ಕೆ ಈಗ ಆಪತ್ತು ಎದುರಾಗಿದೆ. ಈ ಬೆಳವಣಿಗೆಗೆ ಮೂಲ ಕಾರಣ ಜ್ಯೋತಿರಾದಿತ್ಯ ಸಿಂಧಿಯಾ ಆದರೂ ಮಧ್ಯಪ್ರದೇಶದ ರಾಜಕಾರಣದಲ್ಲಿ ಜ್ಯೋತಿರಾದಿತ್ಯ ಅವರನ್ನು ಕಡೆಗಣಿಸಿದ್ದು ದಿಗ್ವಿಜಯ್‌ ಸಿಂಗ್‌. ಈ ಹಿನ್ನೆಲೆಯಿಂದ ಕಮಲ್‌ನಾಥ್‌ ಸರಕಾರಕ್ಕೆ ಮೂಲ ಶತ್ರುವಾಗಿದ್ದು ದಿಗ್ವಿಜಯ ಸಿಂಗ್‌ ಅವರೇ ವಿನಾ ಜ್ಯೋತಿರಾದಿತ್ಯ ಅಲ್ಲ ಎಂಬುದು ರಾಜಕೀಯ ಪಂಡಿತರ ವ್ಯಾಖ್ಯಾನ. ಮಧ್ಯಪ್ರದೇಶದ ಇಂದಿನ ರಾಜಕೀಯ ವಸ್ತುಸ್ಥಿತಿ ಅವಲೋಕಿಸಿದರೆ ಮಾಜಿ ಸಿಎಂ, ಕಾಂಗ್ರೆಸ್‌ ಧುರೀಣ ದಿವಂಗತ ಅರ್ಜುನ್‌ ಸಿಂಗ್‌ ಅವರನ್ನು ನೆನಪಿಸಿಕೊಳ್ಳುವಂತೆ ದಿಗ್ವಿಜಯ್‌ ಸಿಂಗ್‌ ಮಾಡಿದ್ದಾರೆ. ಸುಮಾರು 27 ವರ್ಷ ಹಿಂದೆ, ಅಂದರೆ 1993ರಲ್ಲಿ ಮತ್ತೊಮ್ಮೆ ಸಿಎಂ ಆಗಲು ಅರ್ಜುನ್‌ ಸಿಂಗ್‌ ಅವರಿಗಿದ್ದ ಅವಕಾಶವನ್ನು ಕಸಿದುಕೊಂಡು ದಿಗ್ವಿಜಯ್‌ ಸಿಂಗ್‌ ಮುಖ್ಯಮಂತ್ರಿಯಾಗಿದ್ದರು. ಅವರ ಸರಕಾರವನ್ನು ಉರುಳಿಸಲು ಅರ್ಜುನ್‌ ಸಿಂಗ್‌ ಪ್ರಯತ್ನಿಸಿದ್ದರು. ಈ ಬಾರಿ ಪರಿಸ್ಥಿತಿ ತುಸು ಭಿನ್ನವಾಗಿದೆ. ಈಗಿನ ಸರಕಾರ ಕಮಲ್‌ನಾಥ್‌ ಅವರದು, 15 ತಿಂಗಳಲ್ಲೇ ಸರಕಾರ ಉರುಳಿದರೆ ನಷ್ಟವಾಗುವುದೂ ಅವರಿಗೇ. ಅರ್ಜುನ್‌ ಸಿಂಗ್‌ ಮತ್ತು ಜ್ಯೋತಿರಾದಿತ್ಯರ ನಡುವಿನ ವ್ಯತ್ಯಾಸವೆಂದರೆ ಆಗ ಅರ್ಜುನ್‌ ಸಿಂಗ್‌ಗೆ ದಿಗ್ವಿಜಯ್‌ ಸರಕಾರವನ್ನು ಉರುಳಿಸಲು ಸಾಧ್ಯವಾಗಲಿಲ್ಲ. ಈಗ ಜ್ಯೋತಿರಾದಿತ್ಯ ಅವರು ಕಮಲ್‌ನಾಥ್‌ ಸರಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ರಾಜಕೀಯ ಬೆಳವಣಿಗೆಗಳ ಮಧ್ಯೆ ಸಿಎಂ ಕಮಲ್‌ನಾಥ್‌ ಅವರು ಕೇವಲ ಪಾತ್ರದಾರಿ ಅಷ್ಟೇ. ಕಾರ್ಪೊರೇಟ್‌ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಮಾತ್ರ ಅವರು ಸಮರ್ಥರು ಎಂಬುದು ಮಧ್ಯಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಮಾತು. ಬಹುಪಾಲು ದಿಗ್ವಿಜಯ್‌ ಸಿಂಗ್‌ ಹೇಳಿದಂತೆಯೇ ನಡೆಯುತ್ತಿದೆ. ಸರಕಾರದ ಮುಖ್ಯ ಕಾರ್ಯದರ್ಶಿ, ಐಎಎಸ್‌ ಅಧಿಕಾರಿ, ಸಚಿವ ಸ್ಥಾನ ಸೇರಿದಂತೆ ಮಹತ್ವದ ಎಲ್ಲ ಸ್ಥಾನಗಳನ್ನು ದಿಗ್ವಿಜಯ್‌ ಶಿಫಾರಸ್ಸು ಮೇರೆಗೆ ನೇಮಕವಾಗುತ್ತಿವೆ ಎಂಬ ಆರೋಪಗಳಿವೆ. 15 ತಿಂಗಳ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಸಿಂಧಿಯಾ ಮತ್ತು ಅವರ ಬಣವನ್ನು ಕಡೆಗಣಿಸಲಾಗಿತ್ತು. ರಾಜ್ಯ ಗುಪ್ತಚರ ಇಲಾಖೆಯೂ ಅವರ ವಿರುದ್ದ ಕೆಲಸ ಮಾಡುತ್ತಿತ್ತು. ಸಿಂಧಿಯಾ ಬೆಂಬಲಿಗರನ್ನು ಎಲ್ಲ ಹಂತದಲ್ಲೂ ತಡೆ ಹಿಡಿಯುವ, ಅವರ ವಿರುದ್ಧ ದೂರು ಸಲ್ಲಿಸುವ ಪ್ರಯತ್ನ ಈ ಮೊದಲಿನಿಂದಲೂ ನಡೆಯುತ್ತಲೇ ಬಂದಿತ್ತು. ದಿಗ್ವಿಜಯ್‌ ಸಿಂಗ್‌ ಮತ್ತು ಕಮಲ್‌ನಾಥ್‌ ರಾಜಕಾರಣದ ಮಧ್ಯೆ ಜ್ಯೋತಿರಾದಿತ್ಯ ಸ್ವಾಭಿಮಾನದ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿದ್ದರು. ಹಳೆ ದ್ವೇಷ, ಹೊಸ ಕಾರಣ ಕೇವಲ ಅಧಿಕಾರಕ್ಕಾಗಿ ರಾಜಕಾರಣವು ತೀವ್ರಗತಿಯಲ್ಲಿ ಬದಲಾಗುತ್ತಿಲ್ಲ. ಇಲ್ಲಿ ರಾಜಮನೆತನ ಮತ್ತು ಜಾಗೀರದಾರ್‌ ನಡುವಿನ ಶೀತಲ ಸಮರವು ಆಗಾಗ ಯುದ್ಧ ಭೂಮಿಗೆ ಬಂದು ನಿಲ್ಲುತ್ತಿರುತ್ತದೆ. ರಾಜಶಾಹಿ ಆಡಳಿತ ಸಂದರ್ಭದಲ್ಲಿ ಗ್ವಾಲಿಯರ್‌ ರಾಜಮನೆತನದ ಸಿಂಧಿಯಾ ಮನೆತನಕ್ಕೆ ವರದಿ ಒಪ್ಪಿಸುತ್ತಿದ್ದ 8 ಜನ ಜಾಗೀರದಾರ್‌ ಮನೆತನದವರಲ್ಲಿ ರಾಘವಗಢ ಜಾಗೀರದಾರ್‌ ಆಗಿದ್ದವರು ಈಗಿನ ಕಾಂಗ್ರೆಸ್‌ ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌ ಮನೆತನದ ಹಿರಿಯರು. ಅಂದಿನಿಂದಲೂ ಅಧಿಕಾರ ಮತ್ತು ಸ್ವಾಭಿಮಾನಕ್ಕಾಗಿ ರಾಜಮನೆತನ ಮತ್ತು ಜಾಗೀರದಾರ್‌ ನಡುವಿನ ಶೀತಲಸಮರ ಇದ್ದೇ ಇದೆ. ರಾಜಕೀಯವಾಗಿ ರಾಜಮನೆತನಕ್ಕಿಂತ ಜಾಗೀರದಾರ್‌ ಮನೆತನ ಎತ್ತರಕ್ಕೆ ಬೆಳೆಯುವುದು ಸಿಂಧಿಯಾ ಮನೆತನದ ಸ್ವಾಭಿಮಾನಕ್ಕೆ ಧಕ್ಕೆ ತಂದಿತ್ತು. 25 ವರ್ಷಗಳ ಹಿಂದಿನಿಂದಲೂ ಈ ಒಳಜಗಳ ಇದೆ. ಜ್ಯೋತಿರಾದಿತ್ಯ ತಂದೆ ಮಾಧವರಾವ್‌ ಸಿಂಧಿಯಾ ಅವರನ್ನು ಕಟ್ಟಿಹಾಕಲು ದಿಗ್ವಿಜಯ್‌ ಸಿಂಗ್‌ ಯಶಸ್ವಿಯೂ ಆಗಿದ್ದರು. ಮಾಜಿ ಸಿಎಂ ಅರ್ಜುನ್‌ ಸಿಂಗ್‌, ದಿಗ್ವಿಜಯ್‌ ಸಿಂಗ್‌ ಮತ್ತು ಈಗಿನ ಸಿಎಂ ಕಮಲ್‌ನಾಥ್‌ ಸೇರಿ ಮಾಧವ್‌ ರಾವ್‌ ಸಿಂಧಿಯಾ ಅವರನ್ನು ರಾಜಕೀಯವಾಗಿ ಮೂಲೆ ಗುಂಪು ಮಾಡಿದ್ದರು. 1996ರ ಲೋಕಸಭಾ ಚುನಾವಣೆಯಲ್ಲಿ ಮಾಧವ್‌ ರಾವ್‌ ಅವರಿಗೆ ಟಿಕೆಟ್‌ ಸಿಗದಂತೆ ವ್ಯವಸ್ಥಿತವಾಗಿ ಕೆಲಸ ಮಾಡಿದ್ದರು. ತಮ್ಮದೇ ಪಕ್ಷದ ಮುಖಂಡರ ಒಳಸಂಚಿನಿಂದ ಬೇಸತ್ತಿದ್ದ ಮಾದವ್‌ ರಾವ್‌ ಕಾಂಗ್ರೆಸ್‌ ತೊರೆದು ಮಧ್ಯಪ್ರದೇಶ ವಿಕಾಸ್‌ ಕಾಂಗ್ರೆಸ್‌ ಪಾರ್ಟಿ ಸ್ಥಾಪಿಸಿ ಗ್ವಾಲಿಯರ್‌ನಲ್ಲಿ ಚುನಾವಣೆ ಎದುರಿಸಿದ್ದರು. ಆ ಸಮಯದಲ್ಲಿ ಬಿಜೆಪಿ ಮಾಧವ್‌ರಾವ್‌ ಅವರಿಗೆ ಬೆಂಬಲ ಸೂಚಿಸಿ ತನ್ನ ಸ್ಪರ್ಧಿಯನ್ನು ಕಣಕ್ಕಿಳಿಸಿರಲಿಲ್ಲ. ಅಂದು ಮಾಧವ್‌ ರಾವ್‌ ಜಯ ಗಳಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ ಸೇರಿದ ಮಾಧವ್‌ ರಾವ್‌, ಮತ್ತೆ ದಿಗ್ಗಿ ಬಣದ ವಿರುದ್ಧ ಹೋರಾಟ ನಡೆಸಿದರು. ತಾಯಿ ವಿಜಯರಾಜೇ ಸಿಂಧಿಯಾ ಸಾವಿನ ನಂತರ ಗುನಾ ಕ್ಷೇತ್ರವನ್ನು ಆರಿಸಿಕೊಂಡರು. ಒಳಸಂಚು: ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಜ್ಯೋತಿರಾದಿತ್ಯ ಒಳಸಂಚಿಗೆ ಬಲಿಯಾಗಿದ್ದಾರೆ. ಉತ್ತರಪ್ರದೇಶ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಅವರಿಗೆ ಗುನಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಮತ್ತೊಂದೆಡೆ ಅವರ ಶತ್ರು ಬಳಗವು ವ್ಯವಸ್ಥಿತವಾಗಿ ಅವರ ಸೋಲಿಗೆ ಮುನ್ನುಡಿ ಬರೆಯಿತು. ಸಿಂಧಿಯಾಗೆ ವಡೋದರ ನಂಟು ಜ್ಯೋತಿರಾದಿತ್ಯ ಸಿಂಧಿಯಾ ಅವರ ಪತ್ನಿ ಗುಜರಾತ್‌ನ ವಡೋದರ ರಾಜಮನೆತನದವರು. ಇದೇ ರಾಜಮನೆತನದವರ ಮೂಲಕವೇ ಜ್ಯೋತಿರಾದಿತ್ಯ ಸಿಂಧಿಯಾ ಅಮಿತ್‌ ಶಾ ಅವರ ಸಂಪರ್ಕ ಸಾಧಿಸಿದ್ದಾರೆ. ಅಮಿತ್‌ ಶಾ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ನಡುವೆ ವಡೋದರ ರಾಜಮನೆತನದವರು ಸೇತುವೆ ಆಗಿದ್ದರಿಂದ ಜ್ಯೋತಿರಾದಿತ್ಯ ಅವರಿಗೆ ಬಿಜೆಪಿ ಸೇರುವುದು ಸುಲಭವಾಗಿದೆ.


from India & World News in Kannada | VK Polls https://ift.tt/3bePuhh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...