ಕಿಂಗ್‌ ಕೊಹ್ಲಿಯಿಂದ ಕಲಿತ ಪಾಠವನ್ನು ವಿವರಿಸಿದ ಶ್ರೇಯಸ್‌ ಅಯ್ಯರ್‌!

ಆಕ್ಲೆಂಡ್‌: ಸತತ ಎರಡು ಪಂದ್ಯಗಳಲ್ಲಿ ಟೀಮ್‌ ಇಂಡಿಯಾದ ರನ್‌ ಚೇಸಿಂಗ್‌ನಲ್ಲಿ ಮಹತ್ವದ ಪಾತ್ರ ವಹಿಸಿರುವ ಯುವ ಪ್ರತಿಭೆ , ಗುರಿ ಬೆನ್ನತ್ತಿ ಪಂದ್ಯಗಳನ್ನು ಗೆದ್ದುಕೊಡುವುದರಲ್ಲಿ ಭಾರತ ತಂಡದ ನಾಯಕ ತಮಗೆ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ. ಗುರಿ ಎಂಥದ್ದೇ ಇರಲಿ ಬೆನ್ನತ್ತಿ ಜಯ ದಕ್ಕಿಸಿಕೊಳ್ಳುವ ಕೊಹ್ಲಿ ಅವರ ಆಟದಿಂದ ಸಾಕಷ್ಟು ಪಾಠ ಕಲಿತಿರುವುದಾಗಿ ಹೇಳಿಕೊಂಡಿರುವ ಶ್ರೇಯಸ್‌, ಮುಂದಿನ ದಿನಗಳಲ್ಲಿ ತಾವು ಕೂಡ ಅದೇ ರೀತಿಯ ಆಟವನ್ನಾಡುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 59* ಮತ್ತು 44 ರನ್‌ಗಳನ್ನು ಗಳಿಸಿದ 25 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ಶ್ರೇಯಸ್‌, ಈ ಮೊದಲು ಸಿಕ್ಸರ್‌ ಸಿಡಿಸಿ ತಂಡಕ್ಕೆ ಪಂದ್ಯಗಳನ್ನು ಗೆದ್ದುಕೊಡುವುದೆಂದರೆ ಅಚ್ಚು ಮೆಚ್ಚು ಎಂದು ಹೇಳಿಕೊಂಡಿದ್ದರು. ಇದೀಗ ಕೊಹ್ಲಿ ಮಾರ್ಗವನ್ನು ಅನುಸರಿಸುವ ಇಂಗಿತ ವ್ಯಕ್ತ ಪಡಿಸಿ ಭಾರತ ತಂಡದ ಭವಿಷ್ಯದ ಫಿನಿಷರ್‌ ಆಗುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ಟೀಮ್‌ ಇಂಡಿಯಾಗೆ ಹಲವು ಸಮಯದಿಂದ ಕಾಡುತ್ತಿದ್ದ ನಂ.4 ಬ್ಯಾಟ್ಸ್‌ಮನ್‌ನ ಕೊರತೆಯನ್ನು ಶ್ರೇಯಸ್‌ ಅಯ್ಯರ್‌ ನೀಗಿಸಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು 4ನೇ ಕ್ರಮಾಂಕದಲ್ಲಿ ಆಡಿದ ಶ್ರೇಯಸ್‌ 33 ಎಸೆತಗಳಲ್ಲಿ 44 ರನ್‌ ಸಿಡಿಸಿದರು. ಆದರೆ ಸಿಕ್ಸರ್‌ ಬಾರಿಸಿ ಅರ್ಧಶತಕ ಬಾರಿಸುವ ಪ್ರಯತ್ನ ನಡೆಸಿ ಕ್ಯಾಚ್‌ ಔಟ್‌ ಆದರು. ಪಂದ್ಯದಲ್ಲಿ 133 ರನ್‌ಗಳ ಸುಲಭದ ಗುರಿ ಬೆನ್ನತ್ತಿದ್ದ ಭಾರತ ತಂಡ ಕೆಎಲ್‌ ರಾಹುಲ್‌ ಅವರ ಅಜೇಯ 57 ರನ್‌ಗಳ ಬಲದಿಂದ 7 ವಿಕೆಟ್‌ ಜಯ ದಾಖಲಿಸಿ 5 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡಿದೆ. 3ನೇ ಪಂದ್ಯ ಬುಧವಾರ (ಜ.29ರಂದು) ಹ್ಯಾಮಿಲ್ಟನ್‌ನ ಸೆಡಾನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. "ರನ್‌ ಚೇಸ್‌ ಮಾಡುವಾಗ ಓವರ್‌ಗೆ ಎಷ್ಟು ರನ್‌ ಗಳಿಸಿದರೆ ಗುರಿ ಮುಟ್ಟಲು ಸಾಧ್ಯವೆಂಬ ಸ್ಪಷ್ಟ ಲೆಕ್ಕಾಚಾರ ನಿಮ್ಮೊಳಗಿರಬೇಕು. ಇದಕ್ಕೆ ವಿರಾಟ್‌ ಕೊಹ್ಲಿ ಅತ್ಯುತ್ತಮ ಉದಾಹರಣೆ. ಅವರು ಬ್ಯಾಟ್‌ ಮಾಡಲು ಇಳಿದಾಗಲೆಲ್ಲಾ ಇಂಥದ್ದೊಂದು ಲೆಕ್ಕಾಚಾರ ಅವರಲ್ಲಿರುತ್ತದೆ. ವೈಯಕ್ತಿಕವಾಗಿ ನಾನು ಅವರಿಂದ ಸಾಕಷ್ಟು ಕಲಿತಿದ್ದೇನೆ. ಪ್ರತಿ ಪಂದ್ಯದಲ್ಲೂ ತಂಡಕ್ಕೆ ಜಯ ತಂದುಕೊಡಲು ಅಂತ್ಯದವರೆಗೂ ಹೋರಾಡುತ್ತಾರೆ. ಇದು ಅವರಲ್ಲಿನ ಅತ್ಯುತ್ತಮ ಗುಣ," ಎಂದು ಕಿವೀಸ್‌ ವಿರುದ್ಧದ 2ನೇ ಟಿ20 ಪಂದ್ಯದ ಗೆಲುವಿನ ಬಳಿಕ ಶ್ರೇಯಸ್‌ ಹೇಳಿದ್ದಾರೆ. "ರೋಹಿತ್‌ ಶರ್ಮಾ ಅವರಿಂದಲೂ ಸಾಕಷ್ಟು ಕಲಿತಿದ್ದೇನೆ. ಅವರು ಸಿಕ್ಕ ಅವಕಾಶಗಳನ್ನೆಲ್ಲಾ ಅತ್ಯುತ್ತಮ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ತಂಡದಲ್ಲಿ ಈ ರೀತಿಯ ಅದ್ಭುತ ವ್ಯಕ್ತಿತ್ವಗಳಿದ್ದು, ನಮ್ಮಂತ ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ. ಇವರಿಂದ ಕಲಿಯುವುದು ಬಹಳಷ್ಟಿದೆ. ಅಂತೆಯೇ ಕಲಿತಿರುವುದನ್ನು ಪ್ರತಿ ಪಂದ್ಯದಲ್ಲಿ ನನ್ನ ಆಟದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ," ಎಂದಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37Et7Rj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...