ಇಗೊ ನಾವು ಬರುತ್ತಿದ್ದೇವೆ; ಭಾರತೀಯ ಅಭಿಮಾನಿಗಳಿಗೆ ವಾರ್ನರ್ ಸಂದೇಶ

ಹೊಸದಿಲ್ಲಿ: ಶ್ರೀಲಂಕಾ ವಿರುದ್ಧದ ಸರಣಿಯ ಬೆನ್ನಲ್ಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸುತ್ತಿದೆ. ಇದರಂತೆ ಆಸೀಸ್ ಆಟಗಾರರು ಭಾರತದ ಪ್ರವಾಸ ಬೆಳೆಸಿದ್ದಾರೆ. ಈ ನಡುವೆ ಆಸ್ಟ್ರೇಲಿಯಾದ ಎಡಗೈ ಓಪನರ್ , ಭಾರತೀಯ ಅಭಿಮಾನಿಗಳಿಗಾಗಿ ಸಂದೇಶ ಹಂಚಿದ್ದಾರೆ. 'ಇಗೊ ನಾವು ಬರುತ್ತಿದ್ದೇವೆ. ಇದು ಅತ್ಯುತ್ತಮ ಮೂರು ಪಂದ್ಯಗಳ ಸರಣಿಯಾಗಿರಲಿದೆ. ನಮ್ಮೆಲ್ಲ ಭಾರತೀಯ ಅಭಿಮಾನಿಗಳನ್ನು ನೋಡುವುದನ್ನು ಎದುರು ನೋಡುತ್ತಿದ್ದೇವೆ' ಎಂದು ವಾರ್ನರ್ ಇನ್‌ಸ್ಟಾಗ್ರಾಂ ಸಂದೇಶದಲ್ಲಿ ತಿಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ಡೇವಿಡ್ ವಾರ್ನರ್, ಭಾರತದಲ್ಲೂ ಅಪಾರ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿದ್ದಾರೆ. ಅಲ್ಲದೆ ಭಾರತದಲ್ಲಿ ಕಿಕ್ಕಿರಿದು ತುಂಬಿರುವ ಸ್ಟೇಡಿಯಂನಲ್ಲಿ ಆಡುವುದನ್ನು ಅತೀವ ಇಷ್ಟಪಡುವುದಾಗಿ ತಿಳಿಸಿದ್ದಾರೆ. ಬ್ಯಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಒಂದು ವರ್ಷದ ನಿಷೇಧಕ್ಕೊಳಗಾಗಿರುವ ಡೇವಿಡ್ ವಾರ್ನರ್ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದರು. ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಂತೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅಲ್ಲದೆ ಕೊನೆಯ ಟೆಸ್ಟ್ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ್ದರು. ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಆಗಮನದೊಂದಿಗೆ ಆಸ್ಟ್ರೇಲಿಯಾ ಇದೀಗ ಹೆಚ್ಚು ಬಲಿಷ್ಠವೆನಿಸಿದೆ. ಹಾಗಾಗಿ ಭಾರತ ವಿರುದ್ದ ಸರಣಿಯು ಹೆಚ್ಚಿನ ರೋಚಕತೆಯಿಂದ ಕೂಡಿರಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ಅನುಕ್ರಮವಾಗಿ ಜ.14, 17 ಹಾಗೂ 19ನೇ ದಿನಾಂಕಗಳಲ್ಲಿ ಮುಂಬಯಿ, ರಾಜ್‌ಕೋಟ್ ಹಾಗೂ ಬೆಂಗಳೂರಿನಲ್ಲಿ ನಡೆಯಲಿದೆ. ಈ ಮಧ್ಯೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸದ ವೇಳೆಯಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದ ಯುವ ಅಭಿಮಾನಿಗೆ ಬ್ಯಾಟ್ ಉಡುಗೊರೆಯಾಗಿ ನೀಡುವ ಮೂಲಕ ಡೇವಿಡ್ ವಾರ್ನರ್ ಗಮನ ಸೆಳೆದಿದ್ದಾರೆ. ಪ್ರಸ್ತುತ ವಿಡಿಯೋ ವೈರಲ್ ಆಗಿ ಹರಡಿದೆ. ಭಾರತ ವಿರುದ್ಧದ ಸರಣಿಗೆ ಆಸೀಸ್ ತಂಡ ಇಂತಿದೆ: ಆ್ಯರೋನ್ ಫಿಂಚ್ (ನಾಯಕ), ಆಶ್ಟ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹೇಜಲ್‌ವುಡ್, ಮಾರ್ನಸ್ ಲ್ಯಾಬುಶಾನೆ, ಕೇನ್ ರಿಚರ್ಡ್ಸನ್, ಡಾರ್ಸಿ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಆಶ್ಟನ್ ಟರ್ನರ್, ಡೇವಿಡ್ ವಾರ್ನರ್ ಮತ್ತು ಆ್ಯಡಂ ಜಾಂಪಾ. ಭಾರತ ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಕೇದರ್ ಜಾಧವ್, ಶಿವಂ ದುಬೆ, ರವೀಂದ್ರ ಜಡೇಜಾ, ಕೆಎಲ್ ರಾಹುಲ್, ರಿಷಬ್ ಪಂತ್, ಯುಜ್ವೇಂದ್ರ ಚಹಲ್, ಕುಲ್‌ದೀಪ್ ಯಾದವ್, ನವದೀಪ್ ಸೈನಿ, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಶಮಿ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/39UkEuI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...