
: ಅಕ್ರಮವಾಗಿ ಹಣ ವರ್ಗಾವಣೆ ಮಾಡಿ ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸುತ್ತಿದ್ದ ಕೇರಳ ಮೂಲದ ನಾಲ್ವರನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಅಬ್ದುಲ್ ಮನಾಫ್, ಮೊಹಮ್ಮದ್ ಸಾಹಿಲ್, ಫೈಜಲ್ ಹಾಗೂ ಮೊಹಮ್ಮದ್ ಫೈಜಲ್ ಬಂಧಿತರು. ಆರೋಪಿಗಳಿಂದ 20 ಲಕ್ಷಕ್ಕೂ ಅಧಿಕ ಹಣ ಹಾಗೂ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವ ನೂರಾರು ರಶೀದಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?ನ. 21ರಂದು ಜರಗನಹಳ್ಳಿ 6ನೇ ಹಂತದ 16ನೇ ಕ್ರಾಸ್‌ನಲ್ಲಿರುವ ಬ್ಯಾಂಕೊಂದರ ಎಟಿಎಂ ಬಳಿ ಆರೋಪಿ ಮೊಹಮ್ಮದ್ ಸಾಹಿಲ್ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ್ದ ಸ್ಥಳೀಯ ವ್ಯಕ್ತಿಯೊಬ್ಬರು ಇದನ್ನು ಪ್ರಶ್ನಿಸಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳಕ್ಕೆ ಬಂದ ಪೊಲೀಸರು ಮೊಹಮ್ಮದ್ ಸಾಹಿಲ್‌ನನ್ನು ಬಂಧಿಸಿ ತಪಾಸಣೆ ನಡೆಸಿದಾಗ ಅವನ ಬಳಿಯಿದ್ದ ಬ್ಯಾಗ್‌ನಲ್ಲಿ1 ಲಕ್ಷ ರೂ. ನಗದು ಪತ್ತೆಯಾಗಿದೆ. ಈತ ನೀಡಿದ ಸುಳಿವಿನ ಮೇರೆಗೆ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿನ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಬ್ಯಾಂಕ್‌ಗೆ ಠೇವಣಿ ಮಾಡಿದ್ದ ಹತ್ತು ಬಂಡಲ್ ರಶೀದಿಗಳು, 20 ಲಕ್ಷ ರೂ. ನಗದು ಸೇರಿದಂತೆ ಇನ್ನಿತರ ದಾಖಲೆಗಳು ಸಿಕ್ಕಿವೆ. ಈ ವೇಳೆ ದಂಧೆಯಲ್ಲಿ ಭಾಗಿಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. 185 ಬ್ಯಾಂಕ್ ಅಕೌಂಟ್‌ನಿಂದ 31 ಕೋಟಿ ಠೇವಣಿ: ಆರೋಪಿಗಳೆಲ್ಲರೂ ಕೇರಳದ ಮೂಲದವರಾಗಿದ್ದು ಕಳೆದ 6 ತಿಂಗಳಿನಿಂದ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಕೊಂಡಿದ್ದರು. ಇದರಿಂದ ತಿಂಗಳಿಗೆ 60 ಸಾವಿರ ರೂ. ಕಮಿಷನ್ ಪಡೆಯುತ್ತಿದ್ದರು. ಇದುವರೆಗೂ 2,656 ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಸದ್ಯ 185 ಬ್ಯಾಂಕ್ ಖಾತೆಗಳಲ್ಲಿ 31 ಕೋಟಿ ರೂ. ಡೆಪಾಸಿಟ್ ಮಾಡಿರುವುದು ತಿಳಿದು ಬಂದಿದೆ. ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ. ಐಟಿ ಇಲಾಖೆಗೆ ಪತ್ರ ಬರೆದ ಪೊಲೀಸರು:ವ್ಯವಸ್ಥಿತವಾಗಿ ಹಲವು ತಿಂಗಳಿಂದ ಅಕ್ರಮ ಹಣ ವರ್ಗಾವಣೆ ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಹಣದ ಮೂಲದ ತನಿಖೆ ಬಗ್ಗೆಯೂ ಆದಾಯ ತೆರಿಗೆ ಅಧಿಕಾರಿಗಳಿಗೆ ಪುಟ್ಟೇನಹಳ್ಳಿ ಪೊಲೀಸರು ಪತ್ರ ಬರೆದಿದ್ದಾರೆ.
from India & World News in Kannada | VK Polls https://ift.tt/32WS7Wj