
ಕೊಪ್ಪಳ: ಕುಷ್ಟಗಿ ಪಟ್ಟಣದ ಬಾಲಕಿಯೊಬ್ಬಳು ತನ್ನ ತಂದೆಯ ಸಮಾಧಿ ಬಳಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಮನ ಮಿಡಿಯುವ ಘಟನೆ ಬುಧವಾರ ನಡೆದಿದೆ. ಇಲ್ಲಿನ ದುರ್ಗಾ ಕಾಲೊನಿಯ ಸ್ಪಂದನ ಮಹೇಶ ಕೊನಸಾಗರ(8) ಎಂಬ ಪುಟ್ಟ ಹುಡುಗಿ ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ ತನ್ನ ತಂದೆಯ ಸಮಾಧಿ ಬಳಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡು ಗಮನ ಸೆಳೆದಿರುವ ಬಾಲಕಿಯಾಗಿದ್ದು, ಈ ಪುಟ್ಟ ಬಾಲಕಿಗೆ ತನ್ನ ತಂದೆಯ ಮೇಲೆ ಇದ್ದ ಪ್ರೀತಿಯನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಮರುಗಿದ್ದಾರೆ. ಕೊರೊನಾದಿಂದ ಬಾಲಕಿಯ ತಂದೆ ಕೆಲ ದಿನಗಳ ಹಿಂದೆ ಮೃತರಾಗಿದ್ದರು. ತಂದೆಯ ನೆನಪಿನಲ್ಲಿದ್ದ ಬಾಲಕಿ ತನ್ನ 8ನೇ ವರ್ಷದ ಹುಟ್ಟು ಹಬ್ಬವನ್ನು ಬುಧವಾರ ಆಚರಿಸಿಕೊಂಡು ಮೆಚ್ಚುಗೆ ಗಳಿಸಿದಳು. ಆಕೆ ತಂದೆಯ ಸಮಾಧಿ ಬಳಿ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಘಟನೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಬಾಲಕಿಯ ತಂದೆ ಮಹೇಶ ಕೊನಸಾಗರ ಅವರು ಸ್ನೇಹಜೀವಿಯಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಕೋವಿಡ್ ತಗುಲಿ ಚೇತರಿಸಿಕೊಳ್ಳದೆ ಮೃತರಾದಾಗ ಕುಟುಂಬದ ಎಲ್ಲ ಸದಸ್ಯರೂ ಸೇರಿದಂತೆ ಅನೇಕರು ದುಃಖ ವ್ಯಕ್ತಪಡಿಸಿದ್ದರು. ಪ್ರತಿ ವರ್ಷ ಬಾಲಕಿಯ ಹುಟ್ಟು ಹಬ್ಬವನ್ನು ಅವರ ತಂದೆ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಈ ಸಲ ಜನ್ಮದಿನದಂದು ತಂದೆ ಜತೆಗಿರಲಿಲ್ಲ. ಈ ನೋವು ಬಾಲಕಿ ಸೇರಿದಂತೆ ಕುಟುಂಬದ ಎಲ್ಲರನ್ನೂ ಕಾಡಿತು. ಬಾಲಕಿ ತನ್ನ ತಂದೆ ಇರದಿದ್ದರೇನಾಯಿತು ಅವರ ಸಮಾಧಿ ಬಳಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಾಗಿ ಹಿರಿಯರಿಗೆ ತಿಳಿಸಿದಳು. ಮನೆಯವರೆಲ್ಲ ಇದಕ್ಕೆ ಒಪ್ಪಿ ಸಮಾಧಿ ಇದ್ದ ಸ್ಥಳಕ್ಕೆ ತೆರಳಿ ಅಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡಳು. ನಂತರ ಆಕೆ ಭಾವುಕಳಾಗಿ ತಂದೆಯ ಸಮಾಧಿಗೆ ಗೌರವ ಸಲ್ಲಿಸುವ ವಿಡಿಯೋ ವೈರಲ್ ಆಗಿದೆ. ಬಾಲಕಿ 'ಸ್ಪಂದನ' ಈ ಬಗ್ಗೆ ಮಾತನಾಡಿ, ಪ್ರತಿವರ್ಷ ಸಂಭ್ರಮದಿಂದ ನನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ತಂದೆಗೆ ನಾನು ಮುಂದೊಂದು ದಿನ ದೊಡ್ಡ ಅಧಿಕಾರಿಯಾಗಬೇಕು ಎಂಬ ಆಸೆ ಇತ್ತು. ತಂದೆಯ ಆಸೆಯಂತೆ ಚೆನ್ನಾಗಿ ಓದಿ ಅಧಿಕಾರಿಯಾಗುತ್ತೇನೆ. ತಂದೆಯಂತೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾಳೆ. ಈ ಪುಟ್ಟ ಬಾಲಕಿ ತನ್ನ ತಂದೆಯ ಸಮಾಧಿ ಬಳಿ ಕೇಕ್ ಕತ್ತರಿಸಿ ಹುಟ್ಟಿದ ದಿನವನ್ನು ಆಚರಿಸಿಕೊಳ್ಳುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಾರೀ ಸ್ಪಂದನೆ ವ್ಯಕ್ತಪಡಿಸಿದ್ದು, ಬಾಲಕಿಯ ಮುಗ್ದತೆಗೆ ಹಲವರು ಶರಣಾದರೆ, ಇಂತಹ ಮುಗ್ದ ಬಾಲಕಿಯಿಂದ ತನ್ನ ತಂದೆಯನ್ನು ಕಿತ್ತುಕೊಂಡ ಕೊರೊನಾ ಮಹಾಮಾರಿಗೂ ಹಲವರು ಹಿಡಿಶಾಪ ಹಾಕಿದ್ದಾರೆ. ಬಾಲಕಿ ಸ್ಪಂದನ ಅವರ ತಂದೆ ಮಹೇಶ್ ಕೋನಸಾಗರ ಅವರು ಊರಿನಲ್ಲಿ ಸಮಾಜಮುಖಿ ಕೆಲಸ ಮಾಡಿ ಊರಿನವರಿಂದ ಮೆಚ್ಚುಗೆ ಗಳಿಸಿದ್ದರು. ಹಲವಾರು ಕಾರ್ಯಕ್ರಮ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇರುತ್ತಿದ್ದರು.
from India & World News in Kannada | VK Polls https://ift.tt/3zHGY7g