ಬೆಂಗಳೂರು: ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ ಅಂತಾರಲ್ಲ, ಅದೇ ತರ ರಾಜ್ಯದ ಸಹಕಾರ ಸಂಘಗಳಲ್ಲಿ ನೂರಾರು ಕೋಟಿ ಸಾಲ ಪಡೆದು ಬಡ್ಡಿಯನ್ನೂ ಕಟ್ಟದೆ ಬಾಕಿ ಉಳಿಸಿಕೊಂಡಿರುವ ಶಾಸಕರ ಪರ ಸಚಿವ ಶಿವರಾಮ ಹೆಬ್ಬಾರ್ ವಕಾಲತ್ತು ವಹಿಸಿದ್ದಾರೆ! ವಿವಿಧ ಸಹಕಾರ ಸಂಘಗಳಿಂದ ಸಾಲ ಪಡೆದು ಬಡ್ಡಿಯನ್ನೂ ಕಟ್ಟದೆ ನೂರಾರು ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಶಾಸಕರ ಪರ ಸಚಿವ ಶಿವರಾಮ್ ಹೆಬ್ಬಾರ್ ವಕಾಲತು ವಹಿಸಿದ್ದಾರೆ. ಶಾಸಕರಿಗೆ ಸಾಲ ಕೊಡಬಾರದು ಎಂದು ಸಹಕಾರ ಕಾಯಿದೆಯಲ್ಲಿ ಇಲ್ಲ ಎಂದು ವಿಷಯ ತಿರುಚುವ ಮೂಲಕ, ಸಹಕಾರ ಸಂಘಗಳನ್ನೇ ಮುಳುಗಿಸಬಹುದಾದ ಈ ಗಂಭೀರ ವಿಷಯವನ್ನು ಮರೆ ಮಾಚಲು ಹೆಬ್ಬಾರ್ ಯತ್ನಿಸಿದ್ದಾರೆ. ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಮ ಹೆಬ್ಬಾರ್ ಅವರ ಈ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಒಳಗಾಗಿದ್ದು, ಇನ್ನೂ ಮುಂದುವರಿದು ಮಾತನಾಡಿರುವ ಸಚಿವ ಹೆಬ್ಬಾರ್, ‘ಕೆಲ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದ ಶಾಸಕರು ತುಂಬಿಲ್ಲ ಎಂದು ವಿಧಾನಸಭೆಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಯಾವ ಅರ್ಥದಿಂದ ಹೇಳಿದರು, ಯಾರ ಬಗ್ಗೆ ಹೇಳಿದರೂ, ಯಾಕೆ ಹೇಳಿದರು ಗೊತ್ತಿಲ್ಲ’ ಎಂದೂ ಹೆಬ್ಬಾರ್ ಹೇಳಿದ್ದಾರೆ. ಏನಿದು ಶಾಸಕರ ಸಾಲ?ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಶಾಸಕರ ಮಾಲೀಕತ್ವದ ಅನೇಕ ಸಕ್ಕರೆ ಕಾರ್ಖಾನೆಗಳೇ ಸಹಕಾರ ಬ್ಯಾಂಕುಗಳಿಂದ ಸಾಲ ಪಡೆದು ನೂರಾರು ಕೋಟಿ ರೂ. ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ವಿಧಾನ ಪರಿಷತ್ತಿನಲ್ಲಿ ನೀಡಿರುವ ಹೇಳಿಕೆ ಬಳಿಕ ಮತ್ತಷ್ಟು ಪೂರಕ ಮಾಹಿತಿಗಳು ಹೊರ ಬಂದಿವೆ. ಶಾಸಕ ರಮೇಶ್ ಜಾರಕಿಹೊಳಿಯ ಹೆಸರನ್ನು ಪ್ರಸ್ತಾಪಿಸದೆಯೇ, ಶಾಸಕರ ಮಾಲೀಕತ್ವದ ಸಕ್ಕರೆ ಕಾರ್ಖಾನೆಯೊಂದು ಸುಮಾರು 250 ಕೋಟಿ ರೂ.ಗಳಷ್ಟು ಸಾಲವನ್ನು ಅಪೆಕ್ಸ್ ಬ್ಯಾಂಕ್, ಬೆಳಗಾವಿ ಮತ್ತು ಕಾರವಾರ ಡಿಸಿಸಿ ಬ್ಯಾಂಕುಗಳಿಂದ ಪಡೆದು ಬಾಕಿ ಉಳಿಸಿಕೊಂಡಿದೆ ಎಂದು ಸೋಮಶೇಖರ್ ಹೇಳಿದ್ದರು. ಈಗ ಈ ಶಾಸಕ ರಮೇಶ್ ಜಾರಕಿಹೊಳಿ ಎಂದು ತಿಳಿದು ಬಂದಿದೆ. ಸಚಿವ ಸೋಮಶೇಖರ್ ಶಾಸಕರ ಹೆಸರು ಬಹಿರಂಗಪಡಿಸಲಿಲ್ಲ. ಆದರೆ ಅವರು ಉತ್ತರ ನೀಡಲು ಸಿದ್ಧಪಡಿಸಿಕೊಂಡಿದ್ದ ಪಟ್ಟಿಯಲ್ಲಿ ಹಲವು ಶಾಸಕರು ಮತ್ತು ಮಾಜಿ ಶಾಸಕರ ಹೆಸರುಗಳಿವೆ. 250 ಕೋಟಿ ರೂ. ಮಾತ್ರವಲ್ಲದೆ ಮತ್ತೊಂದು ಬ್ಯಾಂಕ್‌ನಲ್ಲಿ ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಒಡೆತನದ ಬೆಳಗಾವಿಯ ಸೌಭಾಗ್ಯ ಲಕ್ಷ್ಮೀ ಶುಗರ್ಸ್ 95 ಕೋಟಿ ರೂ. ಸಾಲ ಪಡೆದು ಬಾಕಿ ಉಳಿಸಿಕೊಂಡಿರುವುದು ಕಂಡು ಬಂದಿದೆ. ಶಾಸಕ ಬಂಡೆಪ್ಪ ಕಾಶೆಂಪುರ್ ಅವರ ಬೀದರ್‌ನ ಭವಾನಿ ಖಂಡಾಸಿರಿಯ 30 ಕೋಟಿ ರೂ., ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಅವರ ಭಾಲ್ಕಿಯ ಬಾಲೇಶ್ವರ ಶುಗರ್ಸ್ 14 ಕೋಟಿ ರೂ. ಮತ್ತು ಮಾಜಿ ಶಾಸಕ ಜಿ.ಟಿ.ಪಾಟೀಲ ಅವರ ವಿಜಯಪುರದ ಮನಾಲಿ ಶುಗರ್ 3 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದಾರೆ. ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ನಿಯಮ 330ರಡಿ ಮಂಡಿಸಿದ ಸೂಚನೆಗೆ ಉತ್ತರಿಸಿದ ಸೋಮಸೇಖರ್ ರೈತರು ಸಕಾಲದಲ್ಲಿ ಸಾಲ ಪಾವತಿ ಮಾಡಲಿಲ್ಲವೆಂದರೆ ದಂಡ ಹಾಕುವ, ಡಂಗೂರ ಸಾರುವ, ಅವರ ಆಸ್ತಿ ಹರಾಜು ಹಾಕುವ ಸಹಕಾರ ಬ್ಯಾಂಕುಗಳು, ಕೋಟ್ಯಂತರ ರೂ. ಸಾಲ ಬಾಕಿ ಉಳಿಸಿಕೊಂಡಿದ್ದರೂ ಕೆಲವು ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಸಹಕಾರ ವಲಯದ 34 ಸಕ್ಕರೆ ಕಾರ್ಖಾನೆಗಳ ಪೈಕಿ ಶೇ.50ರಷ್ಟು ಮಾತ್ರ ಸಾಲ ಮರುಪಾವತಿ ಮಾಡುತ್ತಿವೆ. ಕೆಲವು ಕೇವಲ ಬಡ್ಡಿ ಪಾವತಿಸಿದರೆ, ಕೆಲವು ಸ್ವಲ್ಪ ಅಸಲು ಮತ್ತು ಸ್ವಲ್ಪ ಬಡ್ಡಿ ಪಾವತಿಸುತ್ತಿವೆ. ಆದರೆ ಕೆಲವು ಕಾರ್ಖಾನೆಗಳು ಮಾತ್ರ ಒಂದೂ ಪೈಸೆಯನ್ನೂ ಪಾವತಿಸುತ್ತಿಲ್ಲ. ಆದರೂ ಆ ಕಾರ್ಖಾನೆಗಳು ನಡೆಯುತ್ತಿವೆ ಎಂದು ಸಚಿವರು ಹೇಳಿದರು.
from India & World News in Kannada | VK Polls https://ift.tt/3AWK7Rr