
ಹೊಸದಿಲ್ಲಿ: ಅಫ್ಘಾನಿಸ್ತಾನವನ್ನು ಅಮೆರಿಕದ ಆಕ್ರಮಣದಿಂದ ವಿಮೋಚನೆಗೊಳಿಸಿದೆ. ಇನ್ನು ಜಾಗತಿಕ ಸಮುದಾಯಗಳು ಇತರೆ 'ಮುಸ್ಲಿಂ ಭೂಮಿ'ಗಳನ್ನು ಮುಕ್ತಗೊಳಿಸಬೇಕಿದೆ. ಜಾಗತಿಕ ಜಿಹಾದ್‌ನ ಮುಂದಿನ ಗುರಿಯಾಗಿ ಕಾಶ್ಮೀರವನ್ನು ಪರಿಗಣಿಸಬೇಕು ಎಂದು ಉಗ್ರ ಸಂಘಟನೆ ಹೇಳಿದೆ. ಆದರೆ ಅದು, ಮುಸ್ಲಿಂ ಬಾಹುಳ್ಯವಿರುವ ಚೀನಾದ ಕ್ಸಿಂಜಿಯಾಂಗ್ ಮತ್ತು ರಷ್ಯಾದ ಚೆಚ್ನ್ಯಾ ಪ್ರದೇಶಗಳನ್ನು ತನ್ನ ಪಟ್ಟಿಯಿಂದ ಹೊರಗಿರಿಸಿದೆ. ಅಮೆರಿಕ ಮೇಲಿನ ತಾಲಿಬಾನ್ ದಿಗ್ವಿಜಯವನ್ನು ಸಂಭ್ರಮಿಸಿರುವ ಈ ಭಯೋತ್ಪಾದನಾ ಗುಂಪು, ದೇಶದಲ್ಲಿ ತಮಗೆ ಗೆಲುವನ್ನು ತಂದುಕೊಡುವಲ್ಲಿ ಯಶಸ್ವಿಯಾದ ಹೋರಾಟದ ಮುಂದಿನ ಹಂತವನ್ನು ಆರಂಭಿಸುವಂತೆ ಕರೆ ನೀಡಿದೆ. ಭಾರತದ ಅಲ್ಲದೆ ಅದು ಇರಾಕ್, ಸಿರಿಯಾ, ಜೋರ್ಡಾನ್ ಮತ್ತು ಲೆಬನಾನ್ ಅನ್ನು ಒಳಗೊಂಡ ಮೆಡಿಟೇರಿಯನ್ ಪ್ರದೇಶ ಅಥವಾ ಲೆವಾಂಟ್; ಲಿಬಿಯಾ, ಮೊರಾಕ್ಕೋ, ಅಲ್ಜೀರಿಯಾ, ಮೌರಿಟಾನಿಯಾ, ಟ್ಯುನಿಷಿಯಾ ಮತ್ತು ಸೋಮಾಲಿಯಾಗಳನ್ನು ಒಳಗೊಂಡ ವಾಯವ್ಯ ಆಫ್ರಿಕಾದ ಇಸ್ಲಾಮಿಕ್ ಮಘ್ರೆಬ್; ಯೆಮೆನ್ ದೇಶಗಳನ್ನು ತನ್ನ ಗುರಿಗಳಲ್ಲಿ ಪಟ್ಟಿ ಮಾಡಿದೆ. 'ಇಸ್ಲಾಮಿಕ್ ಜಗತ್ತಿನ ಮೇಲೆ ಪಶ್ಚಿಮದವರು ಹೇರಿಕೆ ಮಾಡಿರುವ ನಿರಂಕುಶ ಅಧಿಕಾರದಿಂದ ಮುಸ್ಲಿಂ ಸಮುದಾಯಗಳನ್ನು ಅಲ್ಲಾಹುವಿನ ಸಹಾಯದಿಂದ ವಿಮೋಚನೆಗೊಳಿಸಲು ಈ ಐತಿಹಾಸಿಕ ವಿಜಯ ದಾರಿ ಮಾಡಿಕೊಟ್ಟಿದೆ' ಎಂದು ಪಾಕಿಸ್ತಾನದಲ್ಲಿರುವ ಅಲ್ ಕೈದಾ ಸಂಘಟನೆಯ ಅಧಿಕೃತ ಮಾಧ್ಯಮ ಸಂಸ್ಥೆ ಅಸ್-ಸಾಹಬ್ ಹೇಳಿದೆ. ಕಾಶ್ಮೀರವನ್ನು ತನ್ನ ಗುರಿಗಳ ಪಟ್ಟಿಯಲ್ಲಿ ಅಲ್ ಕೈದಾ ಪ್ರಮುಖವಾಗಿ ಹೆಸರಿಸುತ್ತಾ ಬಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಘಟನೆಯ ಘಟಕ 'ಅನ್ಸಾರ್ ಘಜ್ವಾತುಲ್ ಹಿಂದ್' ಸ್ಥಾಪನೆ ವೇಳೆ ಇಸ್ಲಾಂಗಾಗಿ ಭಾರತವನ್ನು ವಶಪಡಿಸಿಕೊಳ್ಳುವುದಾಗಿ ಅದು ಹೇಳಿತ್ತು. ಚೀನಾದ ಕ್ಸಿಂಜಿಯಾಂಗ್ ಮತ್ತು ರಷ್ಯಾದ ಚೆಚ್ನ್ಯಾ ಎರಡೂ ಪ್ರಾಂತ್ಯಗಳಲ್ಲಿ ಮುಸ್ಲಿಮರ ಮೇಲೆ ದಬ್ಬಾಳಿಕೆಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದಿದ್ದರೂ, ಅಲ್ ಕೈದಾ ಅವುಗಳ ಸ್ವಾತಂತ್ರ್ಯದ ಬಗ್ಗೆ ಚಕಾರವೆತ್ತಿಲ್ಲ. ಇದು ಅದರ ರಾಜಕೀಯ ನಡೆ ಎನ್ನಲಾಗಿದೆ. ರಷ್ಯಾ ಮತ್ತು ಚೀನಾ ಎರಡೂ ಇತ್ತೀಚೆಗೆ ತಾಲಿಬಾನ್ ಬೆಂಬಲಕ್ಕೆ ಬಂದಿದ್ದವು. ಅಲ್ ಕೈದಾ ಸಂಘಟನೆಯ ಮೂಲ ನಾಯಕತ್ವವು ಪಾಕಿಸ್ತಾನದಲ್ಲಿ ಬೇರೂರಿದೆ. ಅದರ ಮುಖ್ಯಸ್ಥ ಅಯ್ಮಾನ್ ಅಲ್ ಜವಾಹಿರಿ ನೇತೃತ್ವದಲ್ಲಿ ಮತ್ತೆ ತನ್ನ ವ್ಯಾಪ್ತಿ ಹಿಗ್ಗಿಸಿಕೊಳ್ಳಲು ಅದು ಮುಂದಾಗಿದೆ. ಕೆಲವು ನಿರ್ದಿಷ್ಟ ಪ್ರದೇಶಗಳನ್ನು ಅದು ಗುರಿಯಾಗಿರಿಸಿ ನೀಡಿರುವ ಹೇಳಿಕೆಯು ಪಾಕಿಸ್ತಾನದ ಸರ್ಕಾರದ ಹಿತಾಸಕ್ತಿಗಳಿಗೆ ಅನುಗುಣವಾಗಿಯೇ ರಾಜಕೀಯ ಚಟುವಟಿಕೆ ನಡೆಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದೆ.
from India & World News in Kannada | VK Polls https://ift.tt/2YoCDIx