
ಬೆಂಗಳೂರು: ಇಂದು ಎಲ್ಲೆಡೆ ಸಂಭ್ರಮ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಗೋಪೂಜೆ ಮಾಡುವ ಮೂಲಕ ಆಚರಣೆ ಮಾಡಿದರು. ಅಲ್ಲದೆ ನಾಡಿನ ಜನತೆಗೆ ಸಂಕ್ರಾಂತಿ ಶುಭಾಶಯವನ್ನೂ ಕೋರಿದರು. ಗುರುವಾರ ಸಂಕ್ರಾಂತಿ ಪ್ರಯುಕ್ತ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಬಿಎಸ್ ಯಡಿಯೂರಪ್ಪ ಗೋಪೂಜೆ ನೆರವೇರಿಸಿದರು. ಪ್ರತಿ ವರ್ಷ ಬಿಎಸ್‌ವೈ ಸಂಕ್ರಾಂತಿ ಹಬ್ಬದಂದು ಗೂಪೂಜೆ ನೆರವೇರಿಸುತ್ತಾರೆ. ಈ ವರ್ಷವೂ ರಾಜಕೀಯ ಜಂಜಾಟಗಳ ನಡುವೆ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ:ಸಿ.ಎನ್.ಅಶ್ವತ್ಥ್ ನಾರಾಯಣ್ ಉಪಸ್ಥಿತರಿದ್ದರು. ಹೊಸ ಬೆಳೆ, ಹೊಸ ಭರವಸೆಗಳನ್ನು ಹೊತ್ತುತರುವ ಸುಗ್ಗಿಕಾಲ ಸಂಕ್ರಾಂತಿಗೆ, ನಾಡಿನ ರೈತರ ಜೀವನದಲ್ಲಿ ವಿಶಿಷ್ಟವಾದ ಸ್ಥಾನವಿದೆ. ರೈತರ ಬಾಳಿನಲ್ಲಿ ಸುಗ್ಗಿ ಸದಾ ಇರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮುನ್ನಡೆಯುತ್ತಿದೆ ಎಂದು ಸಂಕ್ರಾಂತಿ ಶುಭಾಶಯವನ್ನು ಬಿಎಸ್‌ವೈ ಕೋರಿದ್ದಾರೆ. ಇನ್ನು ಗೃಹ ಸಚಿವ ಅಮಿತ್ ಶಾ ಕೂಡಾ ಕರ್ನಾಟಕದ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಕರ್ನಾಟಕದ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ಪವಿತ್ರ ಹಬ್ಬ ಎಲ್ಲರ ಜೀವನದಲ್ಲೂ ಸುಖ, ಸಮೃದ್ಧಿ ಮತ್ತು ಆರೋಗ್ಯವನ್ನು ಕರುಣಿಸಲಿ ಎಂದು ಟ್ವೀಟ್ ಮಾಡಿದ್ದಾರೆ.
from India & World News in Kannada | VK Polls https://ift.tt/3oJDZWv