ಭೋಪಾಲ್: ಇತ್ತ ಕರ್ನಾಟಕದಲ್ಲಿ ಯಶಸ್ವಿಯಾದಂತೆ ಅತ್ತ ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲಕ್ಕೆ ಕೈ ಹಾಕಿರುವ ಅನುಮಾನ ವ್ಯಕ್ತವಾಗಿದೆ. ಕಾಂಗ್ರೆಸ್ ಸರ್ಕಾರದ ನಾಲ್ವರು ಶಾಸಕರು ದೆಹಲಿ ಸಮೀಪದ ಗುರುಗ್ರಾಮ್‌ನ ಸ್ಟಾರ್ ಹೊಟೇಲ್‌ವೊಂದರಲ್ಲಿ ಕಾಣಿಸಿಕೊಂಡಿದ್ದು, ಬಿಜೆಪಿ ತನ್ನ ಶಾಸಕರನ್ನು ಖರೀದಿಸುವ ಯತ್ನ ಮಾಡುತ್ತಿದೆ ಎಂದು ಸಿಎಂ ಕಮಲನಾಥ್ ಆರೋಪಿಸಿದ್ದಾರೆ. ಮಧ್ಯಪ್ರದೇಶದಲ್ಲಿ 114 ಸದಸ್ಯ ಬಲದ ಬಹುಮತದ ಸರ್ಕಾರವಿದ್ದು, ಸರ್ಕಾರ ಕೆಡವಲು ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರುಯ ಆರೋಪಿಸುತ್ತಿದ್ದಾರೆ. ಇದಕ್ಕೆ ಪುಷ್ಠಿ ಎಂಬಂತೆ ರಾಜ್ಯದ ನಾಲ್ವರು ಕಾಂಗ್ರೆಸ್ ಶಾಸಕರು ಗುರುಗ್ರಾಮ್ ಸ್ಟಾರ್ ಹೊಟೇಲ್‌ನಲ್ಲಿ ಬೀಡು ಬಿಟ್ಟಿದ್ದು, ಓರ್ವ ಶಾಸಕಿಯನ್ನು ಮರಳಿ ತರುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ರಾಜ್ಯದಲ್ಲಿ ಬಿಜೆಪಿ ಆಪರೇಷನ್ ಕಮಲ ಆರಂಭಿಸಿದ್ದು, ಒಂದು ವೇಳೆ ಬಿಜೆಪಿ ಹಣದ ಆಮೀಷವೊಡ್ಡಿದರೆ ಅದನ್ನು ಸ್ವೀಕರಿಸಿ ಎಂದು ಹೇಳಿರುವುದಾಗಿ ಸಿಎಂ ಕಮಲನಾಥ್ ನಿನ್ನೆಯಷ್ಟೇ ಹೇಳಿದ್ದರು. ಸದ್ಯ ಬಿಎಸ್‌ಪಿ ತೊರೆದು ಕಾಂಗ್ರೆಸ್ ಸೇರಿದ್ದ ಶಾಸಕಿ ರಮಾಬಾಯಿ ಅವರನ್ನು ಹೊಟೇಲ್‌ನಿಂದ ಹೊರಗೆ ಕರೆತರುವಲ್ಲಿ ಕಾಂಗ್ರೆಸ್ ಯಶಶ್ವಿಯಾಗಿದ್ದು, ಮತ್ತೋರ್ವ ಶಾಸಕ ಬಿಸಾಹುಲಾಲ್ ಸಿಂಗ್ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಕಾಂಗ್ರೆಸ್‌ನ ಒಟ್ಟು 11 ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸುತ್ತಿದೆ ಎನ್ನಲಾಗಿದ್ದು, ಈಗಾಗಲೇ ಏಳು ಶಾಸಕರು ಮರಳಿ ಪಕ್ಷ ಸೇರಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಹೈಕಮಾಂಡ್ ಆದೇಶ ನೀಡಿದರೆ ನಿಮ್ಮ ಸರ್ಕಾರವನ್ನು ಕೇವಲ ಒಂದು ನಿಮಿಷಷದಲ್ಲಿ ಬೀಳಿಸುವುದಾಗಿ ಕಳೆದ ವರ್ಷ ಪ್ರತಿಪಕ್ಷ ನಾಯಕ ಗೋಪಾಲ್ ಭಾರ್ಗವ್ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿರುವ ರಾಜ್ಯ ಬಿಜೆಪಿ ಘಟಕ, ಕಾಂಗ್ರೆಸ್ ಶಾಸಕರನ್ನು ಖರೀದಿಸಿ ಸರ್ಕಾರವನ್ನು ಉರುಳಿಸುವ ಇರಾದೆ ಪಕ್ಷಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ. ಒಟ್ಟಿನಲ್ಲಿ ಮಧ್ಯಪ್ರದೇಶದಲ್ಲಿ ರಾಜಕೀಯ ಅಸ್ಥಿರತೆ ಎದುರಾಗುವ ಸ್ಪಷ್ಟ ಸೂಚನೆಗಳು ಕಂಡು ಬರುತ್ತಿದ್ದು, ರಾಜಕೀಯ ಚದುರಂಗದಾಟದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
from India & World News in Kannada | VK Polls https://ift.tt/2vqkxaV