ಬೆಂಗಳೂರು: ಕರ್ನಾಟಕದಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಜನರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದ ಅವರು ಮಾಧ್ಯಮಗಳಲ್ಲಿ ಬರುವ ಸುದ್ದಿಗೂ ವಾಸ್ತವ ಸ್ಥಿತಿಗೂ ವೆತ್ಯಾಸವಿದೆ ಎಂದರು. ರಾಜ್ಯದಲ್ಲಿ ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಕುರಿತಾಗಿ ವಿಶೇಷ ಗಮನವನ್ನು ನೀಡಿದ್ದಾರೆ. ರಾಜ್ಯ ಸರ್ಕಾರವೂ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಮಾಹಿತಿ ನೀಡಿದರು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದ್ದು ಮುಂಜಾಗರೂಕತಾ ಕ್ರಮವಾಗಿ ಇದುವರೆಗೆ 40,207 ಪ್ರಯಾಣಿಕರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ. 251 ಜನರ ರಕ್ತ ಪರೀಕ್ಷೆ ನಡೆಸಲಾಗಿದ್ದು, 238 ನೆಗೆಟಿವ್ ಎಂದು ವರದಿ ಬಂದಿದೆ. ಉಳಿದ 13 ಜನರ ವರದಿ ಇನ್ನಷ್ಟೇ ಬರಬೇಕಿದೆ. ಕೊರೊನಾ ಸೋಂಕಿತ ತೆಲಂಗಾಣ ಮೂಲದ ವ್ಯಕ್ತಿ ವಾಸವಾಗಿದ್ದ ಬೆಂಗಳೂರಿನ ನಿವಾಸ ಹಾಗೂ ಕಚೇರಿಯನ್ನು ಸೋಂಕು ಹರಡದಂತೆ ಮಂಗಳವಾರ ಸ್ವಚ್ಛಗೊಳಿಸಲಾಗಿದೆ. ಹಾಗೂ ಕಚೇರಿಯ 25 ಸಹದ್ಯೋಗಿಗಳನ್ನು ಸಂಪರ್ಕಿಸಿ, ಒಬ್ಬರನ್ನು ಮುಂಜಾಗೃತಾ ಕ್ರಮವಾಗಿ ಆಸ್ಪತ್ರೆಗೆ ಸೇರಿಸಿ, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸದ್ಯ ವಿಮಾನ ನಿಲ್ದಾಣ ಸೇರಿದಂತೆ ಮೆಟ್ರೋ ನಿಲ್ದಾಣಗಳಲ್ಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕು ಹರಡದಂತೆ ಆರೋಗ್ಯ ಇಲಾಖೆ ಅಗತ್ಯ ಮುಂಜಾಗರೂಕತೆಯನ್ನು ತೆಗೆದುಕೊಂಡಿದೆ.
from India & World News in Kannada | VK Polls https://ift.tt/2TjjTFg