ಹೊಸದಿಲ್ಲಿ: ಸೋಂಕಿತರ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ. ಐಸಿಎಂಆರ್‌ನ ಸದ್ಯದ ವರದಿಯಂತೆ ಕೋವಿಡ್-19 ಸೋಂಕಿತರ ಸಂಖ್ಯೆ 279ಕ್ಕೆ ಏರಿದ್ದು, ನಾಲ್ಕು ಜನ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ. ಶುಕ್ರವಾರ ಒಂದೇ ದಿನ ದೇಶದಲ್ಲಿ 49 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಬೆಳಗ್ಗೆ 236 ಇದ್ದ ಕೊರೊನಾ ಸೋಂಕಿತರ ಸಂಖ್ಯೆ, ಮಧ್ಯಾಹ್ನ 12 ಗಂಟೆ ಹೊತ್ತಿಗೆ 279 ತಲುಪಿದ್ದು, ಹೊಸದಾಗಿ 35 ಕೋವಿಡ್-19 ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ 63, ಕೇರಳದಲ್ಲಿ 40, ಉತ್ತರ ಪ್ರದೇಶದಲ್ಲಿ 24, ರಾಜಸ್ಥಾನದಲ್ಲಿ 23, ತೆಲಂಗಾಣದಲ್ಲಿ 19, ದೆಹಲಿಯಲ್ಲಿ 17, ಕರ್ನಾಟಕದಲ್ಲಿ 16, ಲಡಾಕ್‌ನಲ್ಲಿ 13 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಗುಜರಾತ್‌ನಲ್ಲಿ 7, ಪಂಜಾಬ್‌ನಲ್ಲಿ 6, ಪಶ್ಚಿಮ ಬಂಗಾಳ, ಚಂಡೀಗಡದಲ್ಲಿ ತಲಾ 5 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನು, 250 ಕೊರೊನಾ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ವೈರಸ್‌ನಿಂದ 23 ವ್ಯಕ್ತಿಗಳು ಗುಣಮುಖರಾಗಿದ್ದು, ಇದುವರೆಗೂ ಕೊರೊನಾದಿಂದ ನಾಲ್ವರು ಸಾವನ್ನಪ್ಪಿದ್ದಾರೆ. ವಿಶ್ವದಾದ್ಯಂತ 11,419 ಜನ ಕೋವಿಡ್-19ಗೆ ಬಲಿಯಾಗಿದ್ದು, 2 ಲಕ್ಷದ 76 ಸಾವಿರ ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇದುವರೆಗೂ 91,954 ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಭಾನುವಾರ ಜನತಾ ಕರ್ಫ್ಯೂಗೆ ಮೋದಿ ಕರೆ ನೀಡಿದ್ದಾರೆ. ಇದರಿಂದ ಭಾನುವಾರ ಭಾರತೀಯ ರೈಲ್ವೆ ಕೂಡ ಪ್ಯಾಸೆಂಜರ್ ರೈಲುಗಳನ್ನು ದೇಶಾದ್ಯಂತ ಸ್ಥಗಿತಗೊಳಿಸಿದ್ದು, ಬೆಂಗಳೂರಿನ ನಮ್ಮ ಮೆಟ್ರೋ ಸೇರಿ ದೇಶದ ಹಲವು ಮೆಟರೋಗಳ ಸಂಚಾರವು ಬಂದ್ ಆಗಲಿದೆ. ಇದರ ಜೊತೆ ನಾಳೆಯಿಂದ ಅಂತರಾಷ್ಟ್ರೀಯ ವಿಮಾನಗಳ ಸಂಚಾರವನ್ನು ನಿಷೇಧಿಸಿದ್ದು, ವೀಸಾಗಳನ್ನು ರದ್ದುಗೊಳಿಸಿದೆ. ದೇಶಾದ್ಯಂತ ಮಾಲ್, ಥಿಯೇಟರ್, ಪಬ್, ನೈಟ್‌ಕ್ಲಬ್, ಜಾತ್ರೆ, ಮದುವೆ ಸೇರಿ ಜನರು ಹೆಚ್ಚು ಸೇರುವ ಸ್ಥಳ, ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಿದ್ದು, ಭಾಗಶಃ ಕಂಪನಿಗಳ ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ.
from India & World News in Kannada | VK Polls https://ift.tt/33F0WjJ