Omicron Variant: ಅಮೆರಿಕದಲ್ಲಿ ಮೊದಲ 'ಓಮಿಕ್ರಾನ್' ಕೋವಿಡ್ 19 ಪ್ರಕರಣ ಪತ್ತೆ

ವಾಷಿಂಗ್ಟನ್: ತನ್ನಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿರುವುದಾಗಿ ಬುಧವಾರ ತಿಳಿಸಿದೆ. ದಕ್ಷಿಣ ಆಫ್ರಿಕಾದಿಂದ ಮರಳಿರುವ ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬರಲ್ಲಿ ಹೊಸ ತಳಿ ದೃಢಪಟ್ಟಿದೆ. ಈ ವ್ಯಕ್ತಿ ಎರಡೂ ಡೋಸ್ ಲಸಿಕೆಗಳನ್ನು ಪಡೆದುಕೊಂಡಿದ್ದರು. ಅವರಲ್ಲಿ ತೀರಾ ಸಾಮಾನ್ಯ ಲಕ್ಷಣಗಳಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ. ಈ ವ್ಯಕ್ತಿಯು ಪ್ರವಾಸ ಮುಗಿಸಿ ನವೆಂಬರ್ 22ರಂದು ಕ್ಯಾಲಿಫೋರ್ನಿಯಾಕ್ಕೆ ಮರಳಿದ್ದರು. ಅವರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರ ಮಾದರಿಯನ್ನು ಜೆನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿತ್ತು. ಅದರಲ್ಲಿ ಓಮಿಕ್ರಾನ್ ತಳಿ ವೈರಸ್ ಪತ್ತೆಯಾಗಿದೆ. ಆದರೆ ಅವರ ನಿಕಟ ಸಂಪರ್ಕಿತರೆಲ್ಲರಲ್ಲಿಯೂ ನೆಗೆಟಿವ್ ವರದಿ ಬಂದಿದೆ ಎಂದು ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (CDC) ಹೇಳಿಕೆ ತಿಳಿಸಿದೆ. ನವೆಂಬರ್ 29ರಂದು ರೋಗಿಯ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಖಚಿತವಾಗಿದೆ. ಅವರು ಬೂಸ್ಟರ್ ಡೋಸ್ ಪಡೆದುಕೊಂಡಿರಲಿಲ್ಲ. ಓಮಿಕ್ರಾನ್ ತಳಿ ಕಾಣಿಸಿಕೊಳ್ಳುವುದು ಕೆಲವೇ ಸಮಯದ ವಿಷಯವಷ್ಟೇ ಎನ್ನುವುದು ತಿಳಿದಿತ್ತು. ಅಮೆರಿಕನ್ನರು ಲಸಿಕೆ, ಬೂಸ್ಟರ್ ತೆಗೆದುಕೊಳ್ಳುವುದು, ಎಲ್ಲ ಕಡೆ ಮಾಸ್ಕ್ ಧರಿಸುವುದು ರಕ್ಷಣೆಗೆ ಇರುವ ಉತ್ತಮ ಮಾರ್ಗ ಎಂದು ಅಮೆರಿಕದ ಮುಖ್ಯ ಆರೋಗ್ಯ ಅಧಿಕಾರಿ ಆಂಟೋನಿ ಫೌಸಿ ಹೇಳಿದ್ದಾರೆ. ಓಮಿಕ್ರಾನ್ ತೀರಾ ಲಘು ಲಕ್ಷಣಗಳನ್ನಷ್ಟೇ ತೋರಿಸುತ್ತದೆ ಎಂದು ಈವರೆಗಿನ ವರದಿಗಳು ತೋರಿಸಿವೆ. ಆದರೆ ಸಂಪೂರ್ಣ ಪ್ರಮಾಣದ ದಾಖಲೆಗಳು ಲಭ್ಯವಾಗುವವರೆಗೂ ಯಾವುದೇ ತೀರ್ಮಾನಕ್ಕೆ ಬರಲು ಆಗುವುದಿಲ್ಲ. ಅಲ್ಲಿಯವರೆಗೂ ಎಚ್ಚರಿಕೆ ವಹಿಸುವುದು ಮುಖ್ಯ ಎಂದು ಫೌಸಿ ತಿಳಿಸಿದ್ದಾರೆ. 'ಈ ರೋಗಿಯಲ್ಲಿ ಕೇವಲ ಲಘು ಲಕ್ಷಣಗಳು ಇವೆ ಎನ್ನುವುದು ಒಳ್ಳೆಯ ಸಂಗತಿ. ಆದರೆ ಲಕ್ಷಣಗಳು ಸುಧಾರಿಸಿಕೊಳ್ಳುತ್ತಿರುವಂತೆ ಕೂಡ ಕಾಣಿಸುತ್ತಿದೆ. ಈ ತಳಿಗೆ ಸಂಬಂಧಿಸಿದಂತೆ ಅತಿ ಹೆಚ್ಚು ವ್ಯಕ್ತಿಗಳಲ್ಲಿ ಓಮಿಕ್ರಾನ್ ಕಂಡುಬಂದಿರುವ ದಕ್ಷಿಣ ಆಫ್ರಿಕಾದಂತಹ ದೇಶಗಳಲ್ಲಿ ಸಾಕಷ್ಟು ಮಾಹಿತಿಗಳು ಈಗ ಬರತೊಡಗಿವೆ. ಅಂತಹ ಮಾಹಿತಿಗಳು ಕೆಲವು ವಾರ ಹಾಗೂ ತಿಂಗಳುಗಳ ಕಾಲ ಬಂದ ಬಳಿಕ ನಿರ್ದಿಷ್ಟ ಚಿತ್ರಣ ಸಿಗಬಹುದು' ಎಂದು ಹೇಳಿದ್ದಾರೆ. ಈ ಸೋಂಕಿತ ವ್ಯಕ್ತಿ ಸಂಪೂರ್ಣವಾಗಿ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಕೋವಿಡ್ ಬೂಸ್ಟರ್ ನೀಡುವುದು ಒಳ್ಳೆಯ ಯೋಚನೆ. ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯೊಳಗೆ ಒಟ್ಟಾರೆ ಆಂಟಿಬಾಡಿಗಳ ಸಂಖ್ಯೆ ಹೆಚ್ಚಿಸಲು ಇದು ಅನುಕೂಲವಾಗುತ್ತದೆ. ಇವು ಹೊಸ ತಳಿಗಳನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಬಲ್ಲವು ಎಂದಿದ್ದಾರೆ. 'ಡೆಲ್ಟಾ ತಳಿಯಂತಹ ಪ್ರಭೇದದಲ್ಲಿ ನಮಗೆ ಈ ಅನುಭವವಾಗಿದೆ. ಲಸಿಕೆಯು ಡೆಲ್ಟಾ ತಳಿಯನ್ನು ನಿರ್ದಿಷ್ಟವಾಗಿ ಗುರಿ ಮಾಡಿಕೊಂಡಿರದೆ ಇದ್ದರೂ, ನಿಮ್ಮಲ್ಲಿ ಅದು ಅಧಿಕ ಮಟ್ಟದ ಪ್ರತಿರಕ್ಷಣಾ ಪ್ರತಿಸ್ಪಂದನೆಯನ್ನು ನೀಡಿದೆ. ಇದರಿಂದ ನಿಮಗೆ ಅತ್ಯುತ್ತಮ ರಕ್ಷಣೆ ಸಿಕ್ಕಿದೆ' ಎಂದು ಹೇಳಿದ್ದಾರೆ. ಆಫ್ರಿಕಾದ ದಕ್ಷಿಣ ಭಾಗದ ದೇಶಗಳ ಮೇಲೆ ಅಮೆರಿಕ ಪ್ರಯಾಣ ನಿಷೇಧ ವಿಧಿಸಿರುವುದನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ನಾವು ಇದನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲು ಮತ್ತು ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕೆಲವು ಸಮಯ ಬೇಕಾಗುತ್ತದೆ ಎಂದು, ಅಮೆರಿಕ ನಿರ್ಧಾರವು 'ನ್ಯಾಯಸಮ್ಮತವಲ್ಲದ್ದು' ಹಾಗೂ 'ಪರಿಣಾಮಕಾರಿಯಲ್ಲದ್ದು' ಎಂಬ ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಟೀಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.


from India & World News in Kannada | VK Polls https://ift.tt/31kDNWW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...