ಬಹಿರಂಗವಾಗಿಯೇ ಮತ ಮಾರಾಟ: ಚುನಾವಣಾ ಆಯೋಗದ ಮೌನಕ್ಕೆ ಪ್ರಜ್ಞಾವಂತರ ಆಕ್ರೋಶ!

ಐತಿಚಂಡ ರಮೇಶ್‌ ಉತ್ತಪ್ಪ ಮೈಸೂರುಮೈಸೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆದು 25 ನೂತನ ಸದಸ್ಯರು ಆಯ್ಕೆಯಾಗಿದ್ದಾರೆ. ಪಕ್ಷಗಳ ಬಲಾಬಲ, ಸೋಲು, ಗೆಲುವಿನ ಕುರಿತು ಚರ್ಚೆಯಾಗುತ್ತಿದೆ. ಆದರೆ, ಇಡೀ ಚುನಾವಣೆ ನಡೆದ ರೀತಿಗೆ ಪ್ರಜ್ಞಾವಂತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದೊಂದು ಪ್ರಜಾಪ್ರಭುತ್ವದ ಬಹುದೊಡ್ಡ ವ್ಯಂಗ್ಯ ಎನ್ನುತ್ತಿದ್ದಾರೆ. ಬಹುಶಃ ಯಾವ ಚುನಾವಣೆಯಲ್ಲಿಯೂ ಮಾಡದಷ್ಟು ವೆಚ್ಚ, ಅಕ್ರಮ, ಆಮಿಷ, ಮೌಢ್ಯ ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಯಲ್ಲಿ ಬಹಿರಂಗವಾಗಿಯೇ ಜರುಗುತ್ತದೆ. ಈ ಬಾರಿಯಂತೂ ಎಗ್ಗಿಲ್ಲದೆ ಹಣದ ಹೊಳೆಯೇ ಹರಿದಿದೆ. ಹಲವು ಕಾಯಿದೆ, ಕಾನೂನುಗಳ ಮೂಲಕ ಇತರ ವ್ಯವಸ್ಥೆಯನ್ನು ಸರಿಪಡಿಸುತ್ತಿದ್ದರೂ ಮೇಲ್ಮನೆ ಚುನಾವಣಾ ಅಕ್ರಮವನ್ನು ಸರಿಪಡಿಸುವಲ್ಲಿ ಯಾರೂ ಆಸಕ್ತಿ ವಹಿಸುತ್ತಿಲ್ಲ ಎನ್ನುವುದು ಹಲವರ ಅಸಮಾಧಾನಕ್ಕೆ ಕಾರಣ. ಲೆಕ್ಕವೇ ಇಲ್ಲ ಲೋಕಸಭೆ ಹಾಗೂ ವಿಧಾನ ಸಭಾ ಚುನಾವಣೆಯಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಭ್ಯರ್ಥಿಗೆ ಇಂತಿಷ್ಟೇ ವೆಚ್ಚ ಮಾಡಬೇಕು ಎನ್ನುವ ಮಿತಿ ಇರುತ್ತದೆ. ತೆರೆಮರೆಯಲ್ಲಿ ಆ ಮಿತಿ ದಾಟಿದರೂ ಒಂದು ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಚುನಾವಣಾ ಆಯೋಗದ ದೃಷ್ಟಿ ತೀಕ್ಷ್ಣವಾಗಿರುತ್ತದೆ. ಆದರೆ, ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆಯುವ ಚುನಾವಣೆ ದಿವಾಳಿತನದ ಸಂಕೇತ. ಇಲ್ಲಿ ಅಭ್ಯರ್ಥಿಗೆ ಯಾವುದೇ ವೆಚ್ಚದ ಮಿತಿ ಇಲ್ಲ. ಯಾರಿಗೂ ಲೆಕ್ಕ ನೀಡಬೇಕಿಲ್ಲ. ಪರಿಣಾಮ, ಬಹಿರಂಗವಾಗಿಯೇ ಪೈಪೋಟಿಯಲ್ಲಿ ಹಣ, ಉಡುಗೊರೆಯ ಹಂಚಿಕೆಯಾಗುತ್ತದೆ. ಆದರೂ ಆಯೋಗ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅಚ್ಚರಿಯಾಗಿದೆ ಎನ್ನುತ್ತಾರೆ. 15 ಕೋಟಿ ರೂ. ವೆಚ್ಚ ವಿಧಾನಪರಿಷತ್‌ ಚುನಾವಣೆಗೆ ಕನಿಷ್ಠವೆಂದರೂ 10 ರಿಂದ 15 ಕೋಟಿ ರೂ. ಬೇಕು. ಮತದಾರರು ಹೆಚ್ಚಿರುವ ಜಿಲ್ಲೆಗಳಲ್ಲಿ ಅದರಲ್ಲಿಯೂ ದ್ವಿಸದಸ್ಯ ಕ್ಷೇತ್ರಗಳಲ್ಲಿ ಹಣದ ಮಿತಿಯೇ ಇರುವುದಿಲ್ಲ. ಕಡಿಮೆ ಮತದಾರರು ಇರುವ ಕೊಡಗು ಜಿಲ್ಲೆಯಂತಹ ಕ್ಷೇತ್ರದಲ್ಲಿ ಸುಮಾರು ಏಳೆಂಟು ಕೋಟಿ ರೂ.ಗಳಲ್ಲಿ ವೆಚ್ಚ ಮುಗಿದರೆ, ಹೆಚ್ಚು ಮತದಾರರು ಇರುವ ಕ್ಷೇತ್ರಗಳಲ್ಲಿ ಭಾರೀ ವೆಚ್ಚ ಮಾಡುತ್ತಾರೆ. ವಿಶೇಷವೆಂದರೆ ಎರಡು ಲಕ್ಷ ರೂ.ಗಳಿಗಿಂತ ಹೆಚ್ಚು ನಗದು ಇಟ್ಟುಕೊಳ್ಳುವಂತಿಲ್ಲ ಎಂದಿದ್ದರೂ, ಯಾವುದೇ ತೆರಿಗೆ ನೀಡದ 10 ರಿಂದ 15 ಕೋಟಿ ರೂ.ಗಳು ಚುನಾವಣೆಯಲ್ಲಿ ಹಸ್ತಾಂತರವಾಗುತ್ತದೆ ಎಂದರೆ ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದು ಹಲವರು ಹೇಳುತ್ತಾರೆ. ಮೌಢ್ಯದ ಪರಮಾವಧಿಪ್ರಗತಿಪರರ, ಚಿಂತಕರು, ಸಾಹಿತಿಗಳು, ಕಲಾವಿದರು, ವಿವಿಧ ಕ್ಷೇತ್ರಗಳ ತಜ್ಞರು ತುಂಬಿರಬೇಕಿದ್ದ ಮೇಲ್ಮನೆಗೆ ಅಭ್ಯರ್ಥಿಗಳು ಮೌಢ್ಯ ಬಿತ್ತಿ ಆ ಮೂಲಕ ಆಯ್ಕೆಯಾಗುತ್ತಿರುವುದು ವಿಪರ್ಯಾಸ. ಮತದಾರರನ್ನು ದೇವರು, ಧರ್ಮ, ನಂಬಿಕೆ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್‌ ಮಾಡಲಾಗುತ್ತಿದೆ. ಹಣದ ಕವರ್‌ನೊಂದಿಗೆ ದೇವರ ಫೊಟೊ, ಕುಂಕುಮ, ಹಾಲಿನ ಪೊಟ್ಟಣಗಳ ಮೇಲೆ ಆಣೆ ಮಾಡಿಸಿಕೊಳ್ಳುತ್ತಾರೆ. ಇವೆಲ್ಲವೂ ಗೊತ್ತಿದ್ದರೂ ವ್ಯವಸ್ಥೆ ಬದಲಾವಣೆಗೆ ಯಾರೂ ಮುಂದಾಗದಿರುವುದು ಪ್ರಜಾಪ್ರಭುತ್ವದ ದುರಂತ ಎನ್ನುತ್ತಿದ್ದಾರೆ. ಅಭ್ಯರ್ಥಿಯಿಂದ ಹಣ ಪಡೆದು ಮತ ಹಾಕಿದವರು ನಂತರ ಅವರನ್ನು ಪ್ರಶ್ನಿಸುವ ಹಕ್ಕನೇ ಕಳೆದುಕೊಳ್ಳುತ್ತಾರೆ. ಹಣ ಹಂಚಿಕೆಯಾಗುತ್ತಿದೆ, ಅಭ್ಯರ್ಥಿ ಇಷ್ಟೇ ಹಣ ನೀಡುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ಬಂದರೂ ಯಾರೂ ಪರಿಶೀಲಿಸುವ, ಕ್ರಮ ತೆಗೆದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಮುಂದಾದರೂ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ, ಚುನಾವಣಾ ವ್ಯವಸ್ಥೆ ಅರ್ಥ ಕಳೆದುಕೊಳ್ಳಲಿದೆ ಎಂದು ಹೇಳುತ್ತಿದ್ದಾರೆ. ಚುನಾವಣಾ ಆಯೋಗ ಎನ್ನುವುದು ಬೇಕಾ? ದುಡ್ಡು ಹಂಚುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದ್ದರೂ ಆಯೋಗಕ್ಕೆ ಏಕೆ ತಿಳಿಯುವುದಿಲ್ಲ? ಇದು ಚುನಾವಣಾ ಆಯೋಗಕ್ಕೇ ಅವಮಾನವಲ್ಲವೇ? ಭ್ರಷ್ಟ ವ್ಯವಸ್ಥೆಯನ್ನು ಕಂಡು ಕಾಣದಂತೆ ಕಾರ್ಯನಿರ್ವಹಿಸುತ್ತಿರುವುದು ವಿಷಾದನೀಯ. - ಪ್ರೊ.ಎಂ.ಕೃಷ್ಣೇಗೌಡ, ವಾಗ್ಮಿ ಮೇಲ್ಮನೆ ಬೇರೆ ಬೇರೆ ಕ್ಷೇತ್ರದ ಅನೇಕ ಚಿಂತನೆಗಳು ನಡೆಯುವ ಚಿಂತಕರ ಚಾವಡಿ. ಅಲ್ಲಿಯೇ ಸಮಾಜ ತಿದ್ದುವ ಮೌಲ್ಯಯುತ ಚರ್ಚೆ ಆಗಬೇಕು. ಆದರೆ, ಇಂದು ಭ್ರಷ್ಟರು ಗೆದ್ದು ಬರುವಂತಾಗಿದೆ. ಮತದಾರನ ಮೌಢ್ಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ವ್ಯವಸ್ಥೆ ಬದಲಾವಣೆಗೆ ಗಂಭೀರ ಚಿಂತನೆ ಆಗಬೇಕಿದೆ. ಡಾ. ಮಲೆಯೂರು ಗುರುಸ್ವಾಮಿ, ಸಾಹಿತಿ ಚುನಾವಣಾ ವ್ಯವಸ್ಥೆ ಪ್ರಜಾಪ್ರಭುತ್ವ ಕಲ್ಪನೆಯನ್ನು ಧೂಳೀಪಟಗೊಳಿಸುತ್ತಿದೆ. ಪ್ರಜ್ಞಾವಂತರ ನಾಡಿನಲ್ಲಿ ನಡೆಯಬಾರದವುಗಳು ನಡೆಯುತ್ತಿವೆ. ಆಣೆ ಪ್ರಮಾಣದಲ್ಲಿ ಮತ ಕೇಳುವುದು ನಾಚಿಕೆಗೇಡು. ಇಂತಹ ವ್ಯವಸ್ಥೆ ಬದಲಾಗಬೇಕಿದೆ. ಮತದಾರರು ಪ್ರಜ್ಞಾವಂತರಾಗಬೇಕಿದೆ. ಪ್ರೊ.ಪಿ.ಕೆ.ರಾಜಶೇಖರ್‌, ಜಾನಪದ ವಿದ್ವಾಂಸ


from India & World News in Kannada | VK Polls https://ift.tt/3E5QW3H

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...