ಪ್ರಕಾಶ್ ಜಿ. ಹಾಸನ: ನಿರೀಕ್ಷೆಯಂತೆಯೇ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿನ ನಗೆಬೀರಿದೆ. ದೊಡ್ಡಗೌಡ್ರ ಮನೆ ಕಾಯಲಾದ್ರೂ ಒಬ್ಬರು ಇರಲಿ, ಅದಕ್ಕಾದರೂ, ಅವರನ್ನು ಸೋಲಿಸಿ ಎಂಬ ಶಾಸಕ ಹೇಳಿಕೆಗೆ ಸೂರಜ್ ಹಾಸನದಲ್ಲೇ ಮನೆ ಮಾಡುತ್ತೇನೆ ಎಂದು ಟಾಂಗ್ ನೀಡಿರುವುದು ಜಿಲ್ಲಾ ರಾಜಕೀಯ ಸಾಕಷ್ಟು ಚರ್ಚೆಗೆ ನಾಂದಿಯಾಗಿದೆ. ಮತ್ತು ಜೆಡಿಎಸ್ ನಡುವೆ ಮನೆ ರಾಜಕೀಯ ಪ್ರಾರಂಭಗೊಂಡಿದೆ. ರಾಜ್ಯ ರಾಜಕೀಯದ ದೃಷ್ಟಿಯಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಆರೋಪ ಸದಾಕೇಳಿ ಬರುತ್ತಲೇ ಇರುತ್ತದೆ. ಆದರೆ, ಜಿಲ್ಲೆಯ ಮಟ್ಟಿಗೆ ಕಮಲ ಪಾಳೆಯಕ್ಕೆ ಬಿಜೆಪಿ ಕಡುವೈರಿ. ಅದರಲ್ಲೂ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ಚುನಾವಣಾ ಪ್ರಚಾರವಿರಲಿ, ಸುದ್ದಿಗೋಷ್ಠಿಯೇ ಆಗಲಿ ಜೆಡಿಎಸ್ ವಿರುದ್ಧ ಟೀಕೆ ಮಾಡುವುದರಲ್ಲಿ ಶಾರ್ಪ್ ಶೂಟರ್ ಎಂದೇ ಬಿಂಬಿತವಾಗಿದ್ದಾರೆ. ಈ ಕಾರಣಕ್ಕೆ ಒಂದಿಷ್ಟು ಜನ ಪ್ರೀತಂ ಜೆ.ಗೌಡರ ಧೈರ್ಯವನ್ನು ಮೆಚ್ಚಿದರೆ, ಜೆಡಿಎಸ್ ವಲಯ ತಿರುಗೇಟು ನೀಡುತ್ತಲೇ ಬಂದಿದೆ. ಚನ್ನರಾಯಪಟ್ಟಣದಲ್ಲಿ ವಿಧಾನ ಪರಿಷತ್ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ ಪರ ಬಹಿರಂಗ ವೇದಿಯಲ್ಲಿ ಭಾಷಣ ಮಾಡಿದ ಶಾಸಕ ಪ್ರೀತಂ ಜೆ.ಗೌಡ ದೊಡ್ಡಗೌಡ್ರು ಮನೆಯಿಂದ ದೊಡ್ಡಗೌಡ್ರು ರಾಜ್ಯಸಭೆ ಸದಸ್ಯರು, ರೇವಣ್ಣ ಶಾಸಕರು, ಅವರ ಪುತ್ರ ಪ್ರಜ್ವಲ್ ರೇವಣ್ಣ ಸಂಸದರು, ತಾಯಿ ಭವಾನಿ ಅಕ್ಕ ಜಿಪಂ ಮಾಜಿ ಸದಸ್ಯರು ಹೀಗೆ ಮನೆಮಂದಿಯಲ್ಲ ರಾಜಕಾರಣ ಮಾಡುತ್ತಿದ್ದರೆ ಹೊಳೆನರಸೀಪುರ ಮನೆಕಾಯಲು ಒಬ್ಬರಿರಬಾರದೆ. ಅದಕ್ಕಾದರೂ ಡಾ.ಸೂರಜ್‌ರೇವಣ್ಣ ಅವರನ್ನು ಸೋಲಿಸಿ ಎಂದು ಮತಯಾಚಿಸುವ ಮೂಲಕ ಹಾಸ್ಯಚಟಾಕಿ ಹಾರಿಸಿದ್ದರು. ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣದಲ್ಲೂ ಈ ಮಾತು ವೈರಲ್ ಆಗಿತ್ತು. ಇದು ದಿನಕಳೆದಂತೆ ಹಳೆಯದ್ದಾದರೂ, ಫಲಿತಾಂಶ ಹೊರಬಿದ್ದು ವಿಜಯದ ನಗೆಬೀರಿದ ಡಾ.ಸೂರಜ್‌ರೇವಣ್ಣ ಶಾಸಕರ ಹೆಸರು ಪ್ರಸ್ತಾಪಿಸದೆ ನಾನಿನ್ನು ಹಾಸನದಲ್ಲೇ ಮನೆ ಮಾಡ್ತೀನಿ, ಜಿಲ್ಲೆಯ ಜನರ ಸೇವೆ ಮಾಡ್ತೀನಿ ಎಂದು ಘೋಷಿಸಿದ್ದಾರೆ. ಹಾಸನದಲ್ಲೇ ಮನೆ ಮಾಡ್ತೀನಿ ಎಂದು ಹೇಳಿದ್ದರ ಹಿನ್ನೆಲೆಯಲ್ಲಿ ಬೇರೆಯೇ ಅರ್ಥವಿದೆ. 2018ರ ಚುನಾವಣೆಯಲ್ಲಿ ಹಾಸನ ವಿಧಾನಸಭೆ ಕ್ಷೇತ್ರವನ್ನು ಕಳೆದುಕೊಂಡು ಕೈ,ಕೈ ಹಿಸುಕಿಕೊಳ್ಳುತ್ತಿರುವ ಜೆಡಿಎಸ್, ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರನ್ನು ಆಕಸ್ಮಿಕ ಶಾಸಕ ಎಂದು ಮೂದಲಿಸಿದ್ದು ಇದೆ. ಈ ಹೇಳಿಕೆಗೆ ಪ್ರತ್ಯುತ್ತರ ನೀಡುತ್ತಲೇ ಬಂದ ಪ್ರೀತಂ ಜೆ.ಗೌಡ ಜನರ ಪ್ರೀತಿಯ ಶಾಸಕ ನಾನು ಎಂದು ಸಮರ್ಥಸಿಕೊಂಡಿದ್ದಾರೆ. ಹೇಳಿ ಕೇಳಿ ಜಿಲ್ಲಾಕೇಂದ್ರದ ಅಧಿಕಾರವನ್ನು ಕಳೆದುಕೊಂಡಿರುವುದು ಜೆಡಿಎಸ್‌ಗೆ ನುಂಗಲಾರದ ಬಿಸಿತುಪ್ಪವಾಗಿದೆ. ಇದೇ ಕಾರಣಕ್ಕೆ 2023ರ ಚುನಾವಣೆಗೆ ಈಗಾಗಲೇ ಹಾಸನ ಕ್ಷೇತ್ರವನ್ನು ಜಿಲ್ಲೆಯಲ್ಲೇ ವಿಶೇಷವಾಗಿ ಗಮನ ಕೇಂದ್ರೀಕರಿಸಿಕೊಂಡು ಸಾಕಷ್ಟು ತಾಲೀಮು ನಡೆಸುತ್ತಿದೆ. ಜೆಡಿಎಸ್‌ನಿಂದ ಭವಾನಿ ರೇವಣ್ಣ ಅವರನ್ನೇ ಹಾಸನ ಕ್ಷೇತ್ರದ ಅಭ್ಯರ್ಥಿ ಮಾಡಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಇದರೊಂದಿಗೆ ಮಾಜಿ ಶಾಸಕ ದಿ.ಎಚ್.ಎಸ್.ಪ್ರಕಾಶ್ ಅವರ ಪುತ್ರ ಸ್ವರೂಪ್, ಶಾಸಕ ಪ್ರೀತಂ ಜೆ.ಗೌಡರ ವಿರುದ್ಧ ಸಿಡಿದೆದ್ದು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡು ಸಂಘಟನೆಯಲ್ಲಿ ತೊಡಗಿರುವ ಅಗಿಲೆಯೋಗೀಶ್ ಕೂಡ ಆಕಾಂಕ್ಷಿಯಾಗಿದ್ದಾರೆ. ಚುನಾವಣೆಗೆ ಇನ್ನೂ ಸಾಕಷ್ಟು ಕಾಲಾವಕಾಶವಿದ್ದರೂ, ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸಕ್ಕಿಂತ ಮುಂಚಿತವಾಗಿ ಅಭ್ಯಾಸ ಒಳ್ಳೆಯದೆಂದು ಜೆಡಿಎಸ್‌ನಲ್ಲಿ ತಾಲೀಮು ಪ್ರಾರಂಭಗೊಂಡಿದೆ. ಪ್ರಥಮ ಬಾರಿ ಶಾಸಕನಾದರೂ, ಕೆ.ಆರ್.ಪೇಟೆ ಉಪ ಚುನಾವಣೆ ಸೇರಿದಂತೆ ಇನ್ನಿತರ ಉಪಚುನಾವಣೆಯಲ್ಲಿ ಪಕ್ಷಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಅನುಭವ ಹೊಂದಿದ ಪ್ರೀತಂ ಜೆ.ಗೌಡ, ಕೈಕಟ್ಟಿ ಕೂರುವ ಜಾಯಮಾನವಲ್ಲ. 2018ರ ಚುನಾವಣೆಯಷ್ಟು ಈ ಬಾರಿ ಸುಲಭವಲ್ಲ ಎಂಬ ಸಂಗತಿಯನ್ನು ಮನಗಂಡೇ ತಮ್ಮದೇ ಆದ ರೀತಿಯಲ್ಲಿ ಕಾರ್ಯಕರ್ತರು, ಮುಖಂಡರ ತಂಡವನ್ನು ಕಟ್ಟಿಕೊಂಡು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಆಟೋ ಚಾಲಕರು, ಕಾರು ಚಾಲಕರು ಒಳಗೊಂಡಂತೆ ರಸ್ತೆಬದಿ ವ್ಯಾಪಾರಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಅವರಿಗೆ ವಾಹನ ನಿಲ್ದಾಣ, ಫುಡ್‌ಕೋರ್ಟ್, ಹೂ ಮಾರಾಟಗಾರರಿಗೆ ವ್ಯವಸ್ಥೆ ಹೀಗೆ ಜನರ ಮನಸೆಳೆಯುವಂತ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿಯೇ ಹೆಚ್ಚಿನ ಕಾಲವಿದ್ದು, ಸಭೆ, ಸಮಾರಂಭಕ್ಕಿಂತ ಹೆಚ್ಚಾಗಿ ಅಭಿವೃದ್ಧಿ ಕಡೆ ಹೆಚ್ಚಿನ ದೃಷ್ಟಿ ಹರಿಸಿದ್ದಾರೆ. ಹನುಮ ಜಯಂತಿಗೆ ವಿಶೇಷ ಮಹತ್ವ ನೀಡಿ ಈ ಬಾರಿ ಎಲ್ಲೆಡೆ ಅದ್ಧೂರಿ ಆಚರಣೆಗೆ ಸಹಕರಿಸಿ, ಪಾಲ್ಗೊಳ್ಳುವ ಮೂಲಕ ಜನರ ಮನಸ್ಸು ಗೆಲ್ಲುವ ಕೆಲಸ ಮಾಡಿದ್ದಾರೆ. ಒಟ್ಟಾರೆ ಹಾಸನ ಕ್ಷೇತ್ರದಲ್ಲಿ 2023ರ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ತಾಲೀಮು ಪ್ರಾರಂಭಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
from India & World News in Kannada | VK Polls https://ift.tt/3q0Txqx