- ಕಣಿತಹಳ್ಳಿ ಎನ್.ಚಂದ್ರೇಗೌಡ,
ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭಿಸಿ ತಿಂಗಳಾಗಿದ್ದು, ಅಗತ್ಯ ಅನುದಾನದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಹೀಗಾಗಿ ಶಿಕ್ಷಕರ ಜೇಬಿಗೆ 'ಬಿಸಿ'ಯಾಗಿದೆ. ಶಿಕ್ಷಕರು ಕೈಯಿಂದ ಹಣ ಹಾಕಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಹೆಚ್ಚಿನ ಖರ್ಚು ಮಾಡಲಾಗದೆ ತಿಳಿಸಾರಿನ ಭೊಜನವಷ್ಟೇ ಮಕ್ಕಳಿಗೆ ಸಿಗುತ್ತಿದೆ! ಸರಕಾರದ ಬಿಸಿಯೂಟದ ಲೆಕ್ಕಾಚಾರ ಶಿಕ್ಷಕರಿಗೆ ನುಂಗಲಾರದ ತುತ್ತಾಗಿದೆ. ಬೆಲೆ ಏರಿಕೆ ಹೊಡೆತ ಬಾಧಿಸುತ್ತಿದೆ. ತರಕಾರಿ ಸೇರಿದಂತೆ ಅಡುಗೆ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದು, ಸರಕಾರ ಕೊಡುವ ಅಕ್ಷರ ದಾಸೋಹ ಅನುದಾನ ಯಾವುದಕ್ಕೂ ಸಾಲದಂತಾಗಿದೆ. ತರಕಾರಿ, ಉಪ್ಪು, ಸಾಂಬಾರ ಪದಾರ್ಥಗಳಿಗೆ 1-5ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ಮಗುವಿಗೆ ದಿನಕ್ಕೆ 1.76 ರೂ. ಹಾಗೂ 6-10ನೇ ತರಗತಿ ಮಕ್ಕಳಿಗೆ ತಲಾ 2.64 ರೂ. ಲೆಕ್ಕದಲ್ಲಿ ಸರಕಾರ ಅನುದಾನ ನೀಡುತ್ತಿದೆ. ಈ ಪ್ರಕಾರ 1-5ನೇ ತರಗತಿಗೆ 100 ಮಕ್ಕಳಿಗೆ 176 ರೂ. ಹಾಗೂ 6-10ನೇ ತರಗತಿಯ 100 ಮಕ್ಕಳಿಗೆ 264 ರೂ.ಗಳನ್ನು ಸರಕಾರ ನೀಡುತ್ತಿದೆ. ಆದರೆ, ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 100 ಮಕ್ಕಳಿಗೆ ಅಕ್ಕಿ, ಬೇಳೆ, ಎಣ್ಣೆ , ಅಡುಗೆ ಅನಿಲ ಹೊರತುಪಡಿಸಿ ಕೇವಲ ತರಕಾರಿ, ಉಪ್ಪು, ಸಾಂಬಾರ ಪದಾರ್ಥಗಳಿಗೆ ಕನಿಷ್ಠ 300 ರೂ. ಬೇಕಾಗುತ್ತದೆ. ಅಂತೆಯೇ ಪ್ರೌಢಶಾಲೆಗಳಲ್ಲಿ 100 ಮಕ್ಕಳಿಗೆ ಕನಿಷ್ಠ 400 ರೂ. ಬೇಕು. ಹೀಗಾಗಿ ಸರಾಸರಿ 100 ಮಕ್ಕಳ ಬಿಸಿಯೂಟ ಲೆಕ್ಕಾಚಾರದಲ್ಲಿ ನಿತ್ಯ ಕನಿಷ್ಠ 124-136 ರೂ.ವರೆಗೆ ಶಿಕ್ಷಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ಬೇಳೆಯೂ ಇಲ್ಲ, ಎಣ್ಣೆಯೂ ಕೊಡ್ತಿಲ್ಲ ಅಕ್ಕಿ, ಗೋಧಿ, ಎಣ್ಣೆ ಸರಕಾರದಿಂದ ಹಾಗೂ ತೊಗರಿ ಬೇಳೆ ಜಿಲ್ಲಾವಾರು ಟೆಂಡರ್ ಮೂಲಕ ಪೂರೈಕೆಯಾಗುತ್ತದೆ. ಆದರೆ 'ಕೊರೊನೋತ್ತರ ಬಿಸಿಯೂಟ'ದಲ್ಲಿ ಬಹುತೇಕ ಶಾಲೆಗಳಿಗೆ ಎಣ್ಣೆ, ಬೇಳೆ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಶಾಲೆಗಳ ಲಭ್ಯವಿರುವ ಅನುದಾನ, ಅಂದರೆ 'ಸಂಚಿತ ನಿಧಿ'ಯನ್ನು ಇವುಗಳಿಗೆ ಬಳಸಿಕೊಳ್ಳುವಂತೆ ಇಲಾಖೆ ಹೇಳಿದೆ ಎಂದು ತಿಳಿದು ಬಂದಿದೆ. ಆದರೆ, ನಾನಾ ಶಾಲೆಗಳಲ್ಲಿ ಈ ಅನುದಾನ ಲಭ್ಯವಿಲ್ಲ. ಆದ್ದರಿಂದ ಈ ಸಾಮಗ್ರಿಗಳ ಹೊಡೆತ ಕೂಡ ಶಿಕ್ಷಕರಿಗೆ!
ಬೇಳೆ ಗುಣಮಟ್ಟವಿಲ್ಲ ಜಿಲ್ಲಾವಾರು ಟೆಂಡರ್ ಕರೆದು ತೊಗರಿ ಬೇಳೆ ಪೂರೈಸಲಾಗುತ್ತದೆ. ಆದರೆ, ಬಹುತೇಕ ಕಡೆಗಳಲ್ಲಿ ಗುಣಮಟ್ಟದ ಬೇಳೆ ಪೂರೈಕೆ ಆಗುತ್ತಿಲ್ಲವೆಂಬ ಆರೋಪವೂ ಇದೆ. ಈ ಬಗ್ಗೆಯೂ ಸರಕಾರ ಗಮನಹರಿಸಬೇಕು ಎಂಬುದು ಹಲವು ಶಿಕ್ಷಕರ ಅಭಿಪ್ರಾಯ. ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸಲು ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಆದರೆ ಕೊಡುವ ಆಹಾರಕ್ಕೆ ತಕ್ಕದಾದ ಅನುದಾನವನ್ನು ನೀಡಬೇಕು. ಸರಕಾರ ನೀಡುತ್ತಿರುವ ಅನುದಾನ ಏನೇನೂ ಸಾಲದು. ಬೆಲೆ ಏರಿಕೆಗೆ ಅನುಗುಣವಾಗಿ ಅನುದಾನ ಹೆಚ್ಚಿಸಬೇಕು ಎನ್ನುತ್ತಾರೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ (ನಾ.ನಿ) ಬಸವರಾಜು ಸಂಗಪ್ಪನವರ. ಈಗ ಬಹುಪಾಲು ಬೇಳೆ ಬಂದಿದೆ. ಎಣ್ಣೆ ಕೂಡ ಸರಬರಾಜಾಗಿದೆ. ಉಪ್ಪು ಸದ್ಯದಲ್ಲೇ ಪೂರೈಕೆಯಾಗಲಿದೆ. ಕೆಲವೇ ದಿನಗಳಲ್ಲಿ ಎಲ್ಲೆಡೆ ಬಿಸಿಯೂಟಕ್ಕೆ ಬೇಕಾದ ಸಾಮಾಗ್ರಿಗಳು ಸಮರ್ಪಕವಾಗಿ ಸರಬರಾಜು ಆಗಲಿವೆ ಎಂದು ಭರವಸೆ ನೀಡಿದ್ದಾರೆ ಚಿಕ್ಕಬಳ್ಳಾಪುರದ ಅಕ್ಷರ ದಾಸೋಹ ಅಧಿಕಾರಿ ಶೈಲಾ.
from India & World News in Kannada | VK Polls https://ift.tt/3ddnMVs