ಅಲ್‌ಕೈದಾ ಕಾಶ್ಮೀರ ಪ್ರಸ್ತಾಪದ ಹಿಂದೆ ಪಾಕಿಸ್ತಾನದ ಐಎಸ್‌ಐ ಕೈವಾಡ - ಕೇಂದ್ರ ಸರಕಾರ

ಹೊಸದಿಲ್ಲಿ: ಜಮ್ಮು-ಕಾಶ್ಮೀರದ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ ಎಂದು ತಾಲಿಬಾನಿಗಳೇ ಹೇಳಿದರೂ, "ಕಾಶ್ಮೀರವನ್ನೂ ಇಸ್ಲಾಂ ವಿರೋಧಿಗಳಿಂದ ಮುಕ್ತಗೊಳಿಸಬೇಕು," ಎಂದು ಉಗ್ರ ಸಂಘಟನೆ ಅಲ್‌ಕೈದಾ ಆಗ್ರಹಿಸಿರುವುದರ ಹಿಂದೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಕೈವಾಡವಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. ಆಫ್ಘನ್‌ ಅನ್ನು ತಾಲಿಬಾನಿಗಳು ಸಂಪೂರ್ಣವಾಗಿ ವಶಪಡಿಸಿಕೊಂಡ ಹಿನ್ನೆಲೆಯಲ್ಲಿಅಭಿನಂದನೆ ತಿಳಿಸಿದ ಅಲ್‌ಕೈದಾ, "ಭಾರತದ ಕಾಶ್ಮೀರ ಸೇರಿ ಜಗತ್ತಿನ ಯಾವುದೇ ಪ್ರದೇಶಗಳನ್ನು ಇಸ್ಲಾಂ ವಿರೋಧಿಗಳು ನಿಯಂತ್ರಿಸುತ್ತಿದ್ದರೆ, ಅಂತಹ ಪ್ರದೇಶಗಳನ್ನು ವಶಕ್ಕೆ ಪಡೆಯಬೇಕು. ಜಮ್ಮು-ಕಾಶ್ಮೀರವನ್ನು ಇಸ್ಲಾಂ ವಿರೋಧಿಗಳಿಂದ ಮುಕ್ತಗೊಳಿಸಬೇಕು. ಜಿಹಾದ್‌ ಅನ್ನು ಇನ್ನಷ್ಟು ತೀವ್ರಗೊಳಿಸಬೇಕು," ಎಂದೂ ಅನ್ನು ಆಗ್ರಹಿಸಿತ್ತು. ''ಜಿಹಾದ್‌ ಪಸರಿಸುವ ಕುರಿತು ಅಲ್‌ಕೈದಾ ಕರೆ ನೀಡಿರುವುದು ಕಳವಳಕಾರಿಯಾಗಿದೆ. ತಾಲಿಬಾನಿಗಳಿಗೆ ಇದುವರೆಗೆ ಜಮ್ಮು-ಕಾಶ್ಮೀರದ ವಿಚಾರದಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ಅದನ್ನು ಅವರು ಮೊದಲೇ ಸ್ಪಷ್ಟಪಡಿಸಿದ್ದರು. ಆದರೆ, ಅಲ್‌ಕೈದಾ ಅವರಿಗೆ ಕಾಶ್ಮೀರ ಕುರಿತು ಪ್ರಚೋದನೆ ನೀಡಿದೆ. ಇದರ ಹಿಂದೆ ಐಎಸ್‌ಐ ಇರುವುದು ದಿಟ,'' ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ''ಅಲ್‌ಕೈದಾ ಉಗ್ರ ಸಂಘಟನೆಯು ಜಗತ್ತಿನ ಮುಸ್ಲಿಮರಲ್ಲಿ ಮೂಲಭೂತವಾದ ಬಿತ್ತುತ್ತಿದೆ. ಇದು ಮನುಕುಲಕ್ಕೆ ಅಪಾಯಕಾರಿಯಾಗಿದೆ. ಪಾಕಿಸ್ತಾನವು ಈ ಸಂಘಟನೆ ಮೂಲಕ ತನ್ನ ಅಜೆಂಡಾ ಹೇರಲು, ಕಾಶ್ಮೀರ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುತ್ತಿದೆ,'' ಎಂದು ಹೇಳಿದ್ದಾರೆ. ತಾಲಿಬಾನ್‌ ನಿಲುವೇನು?ಭಾರತದ ಜತೆ ಉತ್ತಮ ಸಂಬಂಧ ಹೊಂದಲು ಬಯಸಿರುವ ತಾಲಿಬಾನ್‌ ಸಂಘಟನೆಯು, ''ಕಾಶ್ಮೀರ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅದು ಭಾರತ-ಪಾಕಿಸ್ತಾನದ ಆಂತರಿಕ ವಿಚಾರ. ನಾವು ಭಾರತದ ಜತೆ ಒಳ್ಳೆಯ ರಾಜತಾಂತ್ರಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸಂಬಂಧ ಹೊಂದಲು ಮಾತ್ರ ಬಯಸುತ್ತೇವೆ,'' ಎಂದು ಸ್ಪಷ್ಟಪಡಿಸಿದೆ. ಭಾರತದ ಕಾಶ್ಮೀರ ಸೇರಿ ಜಗತ್ತಿನ ಯಾವುದೇ ಪ್ರದೇಶಗಳನ್ನು ಇಸ್ಲಾಂ ವಿರೋಧಿಗಳು ನಿಯಂತ್ರಿಸುತ್ತಿದ್ದರೆ, ಅಂತಹ ಪ್ರದೇಶಗಳನ್ನು ವಶಕ್ಕೆ ಪಡೆಯಬೇಕು ಎಂದು ಅಲ್‌ಕೈದಾ ಕರೆ ನೀಡಿದ್ದು, ಇದನ್ನು ತಾಲಿಬಾನಿಗಳು ಪಾಲಿಸುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ ಜಮ್ಮು-ಕಾಶ್ಮೀರ ವಿಚಾರದಲ್ಲಿ ತಾಲಿಬಾನ್‌ ತನ್ನ ನಿಲುವು ಸ್ಪಷ್ಟಪಡಿಸಿರುವುದು, ಸದ್ಯ ಆಫ್ಘನ್‌ ಮೇಲೆಯೇ ಹೆಚ್ಚಿನ ಗಮನ ಹರಿಸುತ್ತಿರುವುದು, ಇಡೀ ವಿಶ್ವದ ಕಣ್ಣು ತಾಲಿಬಾನ್‌ ಮೇಲೆ ಇದೆ ಎಂಬುದು ಅದಕ್ಕೆ ಗೊತ್ತಿರುವುದು ಹಾಗೂ ಮೊದಲಿನಿಂದಲೂ ಕಾಶ್ಮೀರದ ಮೇಲೆ ಯಾವುದೇ ಆಸಕ್ತಿ ಹೊಂದಿರುವುದನ್ನು ನೋಡಿದರೆ, ಅವರು ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ. ಆರ್ಥಿಕ ಸಂಬಂಧ ಹೊಂದಲು ಉಗ್ರರು ಬಯಸುತ್ತಿರುವುದರಿಂದ ಭಾರತದ ವಿರೋಧ ಕಟ್ಟಿಕೊಳ್ಳುವುದಿಲ್ಲ ಎನ್ನಲಾಗುತ್ತಿದೆ. ಭಾರತದ ವಿರುದ್ಧ ಚೀನಾದಿಂದ ಪಾಕಿಸ್ತಾನ ಅಸ್ತ್ರವಾಗಿ ಬಳಕೆ ಭಾರತವನ್ನು ನೇರವಾಗಿ ಎದುರಿಸಲಾಗದೆ ಕುತಂತ್ರ ಮಾಡುವ ಚೀನಾ ಈಗ ಪಾಕಿಸ್ತಾನವನ್ನು ಭಾರತದ ವಿರುದ್ಧ ಅಸ್ತ್ರವಾಗಿ ಬಳಸುತ್ತಿದೆ. ಇದಕ್ಕಾಗಿಯೇ ಪಾಕಿಸ್ತಾನವನ್ನು ಬೆಂಬಲಿಸುತ್ತಿದೆ ಎಂದು ಅಮೆರಿಕ ಎಚ್ಚರಿಸಿದೆ. "ಅಫ್ಘಾನಿಸ್ತಾನದ ಬಾಗ್ರಾಮ್‌ ವಾಯುಪಡೆ ನೆಲೆಯನ್ನು ವಶಪಡಿಸಿಕೊಳ್ಳಲು ಚೀನಾ ಹವಣಿಸುತ್ತಿದೆ. ಆಫ್ಘನ್‌ನಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಚೀನಾ ಇಂತಹ ತಂತ್ರ ಹೂಡುತ್ತದೆ. ಹಾಗೆಯೇ ಭಾರತದ ವಿರುದ್ಧ ಪಾಕಿಸ್ತಾನವನ್ನು ಬಲಿಷ್ಠಗೊಳಿಸಲು ಯತ್ನಿಸುತ್ತಿದೆ. ಹಾಗಾಗಿ ಅಮೆರಿಕವು ಚೀನಾ ಮೇಲೆ ಯಾವಾಗಲೂ ಒಂದು ಕಣ್ಣಿಟ್ಟಿರಬೇಕು,'' ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ. ಕಾಬೂಲ್‌ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಕತಾರ್‌ ಯತ್ನ ಅಮೆರಿಕ ಸೇನೆ ವಾಪಸಾತಿ ಬಳಿಕ ಸ್ಥಗಿತಗೊಂಡಿರುವ ಕಾಬೂಲ್‌ ವಿಮಾನ ನಿಲ್ದಾಣ ಕಾರ್ಯಾರಂಭಿಸುವಂತೆ ಮಾಡುವ ದಿಸೆಯಲ್ಲಿ ತಾಲಿಬಾನ್‌ ಉಗ್ರರ ಜತೆ ಕತಾರ್‌ ಮಾತುಕತೆ ನಡೆಸುತ್ತಿದೆ. ''ವಿಮಾನ ನಿಲ್ದಾಣ ಮತ್ತೆ ಆರಂಭಿಸುವ ದಿಸೆಯಲ್ಲಿಕತಾರ್‌ ಹೆಚ್ಚಿನ ಪ್ರಯತ್ನ ಮಾಡುತ್ತಿದೆ. ತಾಲಿಬಾನ್‌ ಜತೆ ನಿರಂತರವಾಗಿ ಚರ್ಚಿಸುತ್ತಿದೆ. ಕೆಲವೇ ದಿನಗಳಲ್ಲಿ ಮತ್ತೆ ಏರ್‌ಪೋರ್ಟ್‌ ಆರಂಭವಾಗಲಿದೆ ಎಂಬ ವಿಶ್ವಾಸವಿದೆ,'' ಎಂದು ಕತಾರ್‌ ಶೇಖ್‌ ಮೊಹಮ್ಮದ್‌ ಬಿನ್‌ ಅಬ್ದುಲ್‌ ರೆಹಮಾನ್‌ ಅಲ್‌-ಥಾನಿ ಹೇಳಿದ್ದಾರೆ. ಮತ್ತೊಂದೆಡೆ, ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಡಾಮಿನಿಕ್‌ ರಾಬ್‌ ಅವರು ಗುರುವಾರ ಕತಾರ್‌ಗೆ ತೆರಳಿದ್ದು, ಕತಾರ್‌ ಅರಸ, ಅಲ್ಲಿನ ವಿದೇಶಾಂಗ ಸಚಿವರನ್ನು ಭೇಟಿಯಾಗಿ, ಆಫ್ಘನ್‌ ಕುರಿತು ಚರ್ಚಿಸಿದ್ದಾರೆ. ಪಾಕ್‌ ಗಡಿ ಸ್ಥಗಿತ ಕಾಬೂಲ್‌ ವಿಮಾನ ನಿಲ್ದಾಣ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸಾವಿರಾರು ಆಫ್ಘನ್ನರು ಗಡಿಗಳಿಗೆ ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವು ತಾತ್ಕಾಲಿಕವಾಗಿ ಗಡಿ ಪ್ರವೇಶ ಸ್ಥಗಿತಗೊಳಿಸಿದೆ. ಆಫ್ಘನ್‌ ಜತೆ ಹಂಚಿಕೊಂಡಿರುವ ಚಮನ್‌, ಖೈಬರ್‌ ಪ್ರದೇಶಗಳ ಬಳಿ ಗಡಿ ಬಂದ್‌ ಮಾಡಿದೆ. ಸಾವಿರಾರು ಸಂಖ್ಯೆಯಲ್ಲಿ ನಿರಾಶ್ರಿತರು ಪ್ರವೇಶಿಸುವ ಭೀತಿಯಿಂದಾಗಿ ಪಾಕ್‌ ಗಡಿ ಬಂದ್‌ ಮಾಡಿದೆ. ಅಮೆರಿಕ ಹೆಲಿಕಾಪ್ಟರ್‌ ನಿಷ್ಕ್ರಿಯ ಹಿನ್ನೆಲೆ ಉಗ್ರರಿಗೆ ಅಸಮಾಧಾನ ಸೇನೆಯ ಸಂಪೂರ್ಣ ವಾಪಸಾತಿಗೂ ಮುನ್ನ ಅಮೆರಿಕನ್ನರು ಬಿಟ್ಟು ಹೋಗಿರುವ ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್‌ಗಳ ಮೆರವಣಿಗೆ ಮಾಡಿ ಸಂಭ್ರಮಾಚರಿಸಿದ್ದ ತಾಲಿಬಾನಿಗಳಿಗೀಗ ನಿರಾಸೆಯಾಗಿದೆ. ''ಅಮೆರಿಕನ್ನರು ತೆರಳುವ ಮುನ್ನ ತಮ್ಮ ಹೆಲಿಕಾಪ್ಟರ್‌ ಹಾಗೂ ಯುದ್ಧವಿಮಾನಗಳನ್ನು ನಿಷ್ಕ್ರಿಯಗೊಳಿಸಿ ನಮಗೆ ದ್ರೋಹ ಮಾಡಿದ್ದಾರೆ,'' ಎಂಬುದಾಗಿ ತಾಲಿಬಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.


from India & World News in Kannada | VK Polls https://ift.tt/3zGbgr0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...