ಬೀದರ್: ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ಮೊಟ್ಟೆಯ ಬದಲಾಗಿ ಸತ್ವಯುತ ಸರ್ವ ಸಮ್ಮತ ಸಸ್ಯಹಾರ ಪದಾರ್ಥ ನೀಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಸಸ್ಯಹಾರಿಗಳಿಗಾಗಿ ಪ್ರತ್ಯೇಕ ಶಾಲೆ, ಅಂಗನವಾಡಿಗಳನ್ನು ತೆರೆಯಬೇಕು ಎಂದು ಆಗ್ರಹಿಸಿ, ಬೆಳಗಾವಿಯಲ್ಲಿಡಿ. 20 ರಂದು ಬೆಳಗ್ಗೆ 10ರಿಂದ ಸುವರ್ಣ ಸೌಧ ಚಲೋ ಹಾಗೂ ಸಂತ ಸಮಾವೇಶ ನಡೆಯಲಿದೆ ಎಂದು ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟದ ಪ್ರಧಾನ ಸಂಚಾಲಕ ದಯಾನಂದ ಸ್ವಾಮಿ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಗಳಲ್ಲಿ- ಅಂಗನವಾಡಿಗಳಲ್ಲಿ ಸರಕಾರ ಪೌಷ್ಠಿಕಾಂಶದ ಹೆಸರಿನಲ್ಲಿ ಮೊಟ್ಟೆ ತಿನ್ನಿಸುವುದನ್ನು ಕೈ ಬಿಟ್ಟು, ಮೊಟ್ಟೆಗಿಂತಲೂ ಅಧಿಕ ಬಹು ಪೋಷಕಾಂಶಗಳನ್ನು ಒಳಗೊಂಡಿರುವ ಸತ್ವಯುತ, ಸರ್ವ ಸಮ್ಮತ, ಏಕರೂಪದ ಶುದ್ಧ ಸಸ್ಯಹಾರ ಪದಾರ್ಥ ನೀಡಬೇಕು ಎಂದರು. ಮೊಟ್ಟೆ ಸ್ಥಗಿತಗೊಳಿಸಲು ಸಾಧ್ಯವೇ ಇಲ್ಲ ಎಂದರೆ ಲಿಂಗಾಯತ, ಜೈನ, ಬ್ರಾಹ್ಮಣ, ವೈಶ್ಯ ಮುಂತಾದವರ ಸಂಪ್ರದಾಯ, ಪರಂಪರೆಗಳ ರಕ್ಷಣೆಗೆ ಹಕ್ಕೊತ್ತಾಯಿಸಿ ಡಿ. 20 ರಂದು ಬೆಳಗಾವಿಯಲ್ಲಿ ಸಂತ ಸಮಾವೇಶ ಮತ್ತು ಸುವರ್ಣ ಸೌಧ ಚಲೋ ಚಳವಳಿ ನಡೆಸಲಿದ್ದೇವೆ. ಸರಕಾರಕ್ಕೆ ಈ ಮೂಲಕ ಒತ್ತಾಯಿಸಲಾಗುತ್ತದೆ. ಹಲವು ಮಠಾಧೀಶರು ಈಗಾಗಲೇ ಸಿಎಂಗೆ ಮನವಿ ಮಾಡಿದರೂ ಮೊಟ್ಟೆ ಸ್ಥಗಿತಗೊಳಿಸದ ಕಾರಣ ಈ ಹೋರಾಟ ಅನಿವಾರ್ಯವಾಗಿದೆ ಎಂದರು. ಮೊಟ್ಟೆಗ ಪರ್ಯಾಯವಾಗಿ ಬಾಳೆ ಹಣ್ಣು ನೀಡಲಾಗುವುದು ಎಂಬ ಯೋಜನೆಯಿಂದ ಒಂದೇ ಶಾಲೆಯಲ್ಲಿ ಓದುವ ಒಂದೇ ಪಂಕ್ತಿಯಲ್ಲಿ ಮೊಟ್ಟೆ ಸೇವನೆ ಮಾಡುವ ಮಕ್ಕಳ ಜತೆ ಊಟ ಮಾಡುವ ಸಸ್ಯಹಾರಿ ಮಕ್ಕಳ ಮೇಲೆ ಉಂಟಾಗುವ ದೂರಗಾಮಿ ಪರಿಣಾಮ ಮತ್ತು ಸಸ್ಯಹಾರಿ- ಮಾಂಸಹಾರಿ ಮಕ್ಕಳ ನಡುವಿನ ಭಾವನೆಗಳು, ಇದರಿಂದ ಪಾಲಕರ ಮೇಲಾಗುವ ಆತಂಕ ಇತ್ಯಾದಿ ಕುರಿತು ದಯಾನಂದ ಸ್ವಾಮಿ ವಿವರಿಸಿದರು. ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮೊಟ್ಟೆ ವಿತರಣೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟದ ಪ್ರಧಾನ ಸಂಘಟಕ ಚನ್ನಬಸವಾನಂದ ಸ್ವಾಮಿ, ಬಸವಕಲ್ಯಾಣದ ಬಸವ ಮಹಾಮನೆಯ ಸಿದ್ಧರಾಮೇಶ್ವರ ಮಹಾಸ್ವಾಮಿ, ಮಾತೆ ಸತ್ಯಾದೇವಿ, ಸುನಂದಾದೇವಿ, ಅಖಿಲ ಭಾರತ ವೀರಶೈವ ಮಹಾಸ ಭಾದ ಜಿಲ್ಲಾಧ್ಯಕ್ಷ ಡಾ. ವೈಜನಾಥ ಕಮಠಾಣೆ, ಶಿವರಾಜ ಪಾಟೀಲ್ ಅತಿವಾಳ ಹಾಗೂ ಮತ್ತಿತರರು ಇದ್ದರು.
from India & World News in Kannada | VK Polls https://ift.tt/3yrZctM