ಮಹಾಬಲೇಶ್ವರ ಕಲ್ಕಣಿ, ಬೆಂಗಳೂರು ಆರ್.ಶ್ರೀಧರ್ ರಾಮನಗರ ಬೆಂಗಳೂರು: ಕೇಂದ್ರ ಸಚಿವ ಸಂಪುಟವು ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಏರಿಸಲು ಸಮ್ಮತಿಸಿದೆ. ಇದರಿಂದ ಮಹಿಳೆಯರ ಸಬಲೀಕರಣ ಸಾಧ್ಯವಾಗುತ್ತದೆ. ಜತೆಗೆ ಆರೋಗ್ಯ ದೃಷ್ಟಿಯಿಂದಲೂ ಈ ಕ್ರಮ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೆಣ್ಣು ಮಕ್ಕಳನ್ನು 21 ವರ್ಷಕ್ಕೆ ಮದುವೆ ಮಾಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಬೆಳೆದಿರುತ್ತಾರೆ. ಇದು ಸಹಜ ಹೆರಿಗೆಗೆ ಅನುಕೂಲವಾಗಲಿದ್ದು ಶಿಶು ಮರಣ ಪ್ರಮಾಣ ತಗ್ಗಲಿದೆ. ಶಿಶು ತೂಕ ಕೂಡ ಹೆಚ್ಚಾಗಲಿದೆ. ರಕ್ತದೊತ್ತಡ ಮತ್ತು ಅನಿಮಿಯಾ ಸಮಸ್ಯೆಯಿಂದ ಹೆಣ್ಣುಮಕ್ಕಳನ್ನು ರಕ್ಷಿಸುವುದಕ್ಕೆ ಇದು ಸಹಕಾರಿ. ''ಹೆಣ್ಣು ಮಕ್ಕಳನ್ನು 18 ವರ್ಷಕ್ಕೆ ಮದುವೆ ಮಾಡಿದರೆ, ಆ ವಯಸ್ಸಿನಲ್ಲಿ ಬಹಳಷ್ಟು ಮಂದಿ ದೈಹಿಕವಾಗಿ ದುರ್ಬಲರಾಗಿರುತ್ತಾರೆ. ಅವರು ಮದುವೆಯ ಬಗ್ಗೆ ಆಲೋಚನೆ ಕೂಡ ಮಾಡಿರುವುದಿಲ್ಲ. ಮದುವೆ ಬಳಿಕ ಯುವತಿಯು ಮಕ್ಕಳನ್ನು ಹೆರುವ ಒತ್ತಡಕ್ಕೂ ಒಳಗಾಗುತ್ತಾಳೆ. ಇದು ತಾಯಿ ಮತ್ತು ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪರಿಣಾಮ ಕುಟುಂಬದ ಆರೋಗ್ಯ ಕೂಡ ಹದಗೆಡುತ್ತದೆ,'' ಎನ್ನುತ್ತಾರೆ ವಾಣಿವಿಲಾಸ ಆಸ್ಪತ್ರೆಯ ನಿರ್ದೇಶಕಿ ಡಾ. ಗೀತಾ ಶಿವಮೂರ್ತಿ. ''ಮದುವೆಯ ವಯಸ್ಸು ಹೆಚ್ಚಳವು ಆರೋಗ್ಯವಂತ ಪೀಳಿಗೆಗೆ ಸಹಕಾರಿಯಾಗಲಿದೆ. ನಮ್ಮ ಸಂಸ್ಕೃತಿಯಲ್ಲಿ ಮದುವೆಯಾಗಿ ವರ್ಷದೊಳಗೆ ಮಗುವಾಗಬೇಕು ಎನ್ನುವ ಒತ್ತಡ ಇದೆ. ಇದರಿಂದ ಮದುವೆಯಾದಾಕ್ಷಣ ಮಕ್ಕಳನ್ನು ಪಡೆಯುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಗರ್ಭ ಧರಿಸುವುದರಿಂದ ಅಕಾಲಿಕ ಪ್ರಸವ ಮತ್ತು ರಕ್ತಸ್ರಾವಕ್ಕೆ ತುತ್ತಾಗುವರ ಸಂಖ್ಯೆ ಅಧಿಕವಾಗಿದೆ. ಮದುವೆಯ ವಯಸ್ಸನ್ನು ಹೆಚ್ಚಿಸುವುದರಿಂದ ಸಹಜವಾಗಿ ಗರ್ಭ ಧರಿಸುವ ವಯಸ್ಸು ಕೂಡ ಅಧಿಕವಾಗಲಿದೆ. ಇದರಿಂದ ಪ್ರಸವ ಸಂದರ್ಭದಲ್ಲಿನ ತಾಯಿ ಮತ್ತು ಮಗುವಿನ ಮರಣವನ್ನು ಕಡಿಮೆ ಮಾಡಬಹುದಾಗಿದೆ,'' ಎನ್ನುವುದು ಖ್ಯಾತ ಲೈಂಗಿಕ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಅಭಿಪ್ರಾಯ. ''ಪ್ರಸವದ ವಯಸ್ಸು ಚಿಕ್ಕದಿದ್ದಾಗ ಪೌಷ್ಟಿಕಾಂಶದ ಕೊರತೆ, ರಕ್ತಹೀನತೆ, ವಿಟಮಿನ್ ಕೊರತೆ ಉಂಟಾಗಲಿದೆ. ಅದು ಹುಟ್ಟುವ ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಈ ಸಂದರ್ಭದಲ್ಲಿ ಜನಿಸುವ ಮಕ್ಕಳು ದೀರ್ಘಕಾಲದ ಡಯಾಬಿಟಿಸ್, ರಕ್ತದ ಒತ್ತಡ ಸೇರಿದಂತೆ ಹಲವು ಕಾಯಿಲೆಗೆಗಳಿಗೆ ತುತ್ತಾಗುವ ಸಾಧ್ಯತೆ ಇದೆ,'' ಎಂದು ಅವರು ಎಚ್ಚರಿಸಿದ್ದಾರೆ.
from India & World News in Kannada | VK Polls https://ift.tt/3e51yFy