ಕೊರಟಗೆರೆ: ಕರಡಿ ತಿಂದರೆ ಕೊರೊನಾ ಮತ್ತು ಪಾರ್ಶ್ವವಾಯು ರೋಗ ಬರುವುದಿಲ್ಲ ಎಂಬ ಅಪರಿಚಿತ ವ್ಯಕ್ತಿಯ ಮಾತಿನಿಂದ ಅರಣ್ಯದಲ್ಲಿ ವಾಸಿಸುತ್ತಿದ್ದ ಕರಡಿಯನ್ನು ಸೆರೆ ಹಿಡಿದು ಕೊಂದು, ಅದರ ದೇಹವನ್ನು ಬೆಟ್ಟದ ಮೇಲೆ ಕತ್ತರಿಸಿ ಮಾಂಸವನ್ನಾಗಿ ಪರಿವರ್ತಿಸಿ ಸೇವಿಸಿರುವ ಘಟನೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ತಾಲೂಕಿನ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಗೌಜಗಲ್ಲು ಗ್ರಾಮದ ಚಿಕ್ಕಬಸವಯ್ಯ ಎಂಬುವರ ಮನೆಯ ಮೇಲೆ ವಲಯ ಅರಣ್ಯಾಧಿಕಾರಿ ಸುರೇಶ್ ನೇತೃತ್ವದ ತಂಡ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ವೇಳೆ 1 ಕೆಜಿ 50 ಗ್ರಾಂ ಕರಡಿಯ ಮಾಂಸ ಪತ್ತೆಯಾಗಿದೆ. ಚಿಕ್ಕ ಬಸವಯ್ಯನ ಮನೆಯಲ್ಲಿ ಸಿಕ್ಕ ಕರಡಿಯ ಮಾಂಸವನ್ನು ಬೆನ್ನತ್ತಿ ತನಿಖೆ ನಡೆಸಿದ ವೇಳೆ ಈ ಕೃತ್ಯ ಬಯಲಾಗಿದೆ. ಚನ್ನರಾಯನದುರ್ಗ, ಸೋಳೆಕಲ್ಲು, ಕೋಳಿಕಲ್ಲು ಅರಣ್ಯ ಪ್ರದೇಶದಿಂದ ರೈತರ ಜಮೀನಿಗೆ ಆಹಾರಕ್ಕಾಗಿ ಬಂದ ವೇಳೆ ಕರಡಿಯನ್ನು ಬೇಟೆಯಾಡಿದ್ದಾರೆ. ಗೌಜಗಲ್ಲು ಸ. ನಂ.17ರ ಬಂಡೆಯಲ್ಲಿ ಕರಡಿಯ ದೇಹ ಮತ್ತು ಕೂದಲು ಪತ್ತೆಯಾಗಿದೆ. ಗೌಜಗಲ್ಲು ಗ್ರಾಮದ ಬಂಡೆಯ ಮೇಲೆ ಆರು ಮಂದಿ ಕರಡಿಯ ದೇಹವನ್ನು ಕತ್ತರಿಸಿ ಆರು ಗುಡ್ಡೆಗಳನ್ನಾಗಿ ಮಾಡಿ ಮನೆಗೆ ಕೊಂಡೊಯ್ದಿದ್ದಾರೆ. ಮಾಂಸದ ಊಟ ಮಾಡಿದ ನಂತರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಪಿಗಳ ಆರೋಗ್ಯ ಪರೀಕ್ಷೆಯ ಜತೆಗೆ ಊಟದ ಪರೀಕ್ಷೆಯನ್ನೂ ನಡೆಸಲಾಗಿದೆ. ಗೌಜಗಲ್ಲು ಗ್ರಾಮದ ಚಿಕ್ಕಬಸವಯ್ಯ, ಯತೀಶ್, ನಾಗರಾಜು, ಶ್ರೀಧರ, ರಾಮಯ್ಯ, ರಾಜಣ್ಣ ಎಂಬ ಆರು ಮಂದಿಯನ್ನು ಬಂಧಿಸಿ ಕೊರಟಗೆರೆ ಅರಣ್ಯ ಇಲಾಖೆಯಲ್ಲಿ ವನ್ಯಜೀವಿ ಅಪರಾಧ ಕಾಯಿದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಮಧುಗಿರಿ ಅರಣ್ಯ ಉಪವಿಭಾಗ ಸಹಾಯಕ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನಪ್ಪ, ಕೊರಟಗೆರೆ ವಲಯ ಅರಣ್ಯಾಧಿಕಾರಿ ಸುರೇಶ್, ಉಪವಲಯ ಅರಣ್ಯಾಧಿಕಾರಿ ನಾಗರಾಜು, ಹನುಮಂತರಾಯಪ್ಪ, ಅರಣ್ಯ ರಕ್ಷಕರಾದ ಮಂಜುನಾಥ, ವೆಂಕಟರಾಮು, ನರಸಿಂಹಯ್ಯ, ಚಾಂದುಪಾಷ, ನರಸರಾಜು ಮತ್ತಿತರರು ಇದ್ದರು.
from India & World News in Kannada | VK Polls https://ift.tt/32hsYFz