ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸ್ಫೋಟಗೊಂಡಿರುವ ಆಂತರಿಕ ಭಿನ್ನಮತ ಮತ್ತಷ್ಟು ತೀವ್ರಗೊಳ್ಳುತ್ತಿದೆ. ನಾಯಕತ್ವದ ವಿರುದ್ಧ ಸಿಡಿದೆದ್ದಿರುವ ಕಮಲದ ಒಂದು ಬಣ ದೆಹಲಿ ಪ್ರವಾಸ ಮಾಡಿದ ಬೆನ್ನಲ್ಲೇ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ದೆಹಲಿ ಪ್ರವಾಸ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹೈಕಮಾಂಡ್‌ಗೆ ಸಚಿವ ಸಿ.ಪಿ ಯೋಗೀಶ್ವರ್ ಹಾಗೂ ಇತರ ಶಾಸಕರು ನೀಡಿರುವ ದೂರಿನ ಬೆನ್ನಲ್ಲೇ ವಿಜಯೇಂದ್ರ ದೆಹಲಿಗೆ ತೆರಳಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ಸಿ.ಪಿ ಯೋಗೀಶ್ವರ್ ಅವರು ದೆಹಲಿಗೆ ತೆರಳಿದ್ದರು. ಇವರ ಜೊತೆಗೆ ಅರವಿಂದ್ ಬೆಲ್ಲದ್ ಕೂಡಾ ಸಾಥ್ ನೀಡಿದ್ದರು. ಸಚಿವರ ದೆಹಲಿ ಭೇಟಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಿಎಂ ಬಿಎಸ್‌ವೈ ಕೂಡಾ ಗರಂ ಆಗಿದ್ದರು. ಅಲ್ಲದೆ ಅವರ ಆಪ್ತ ಶಾಸಕರು ಸಿಪಿವೈ ವಿರುದ್ಧ ಮುಗಿಬಿದ್ದಿದ್ದರು. ಈ ನಡುವೆ ಸಚಿವ ಸಂಪುಟ ಸಭೆಯ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಿ.ಪಿ ಯೋಗೀಶ್ವರ್ ಸಿಎಂ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಪರಿಹಾಯ್ದಿದ್ದರು. ಸಚಿವರ ಈ ನಡೆ ಕಮಲ ಪಾಳಯದಲ್ಲಿ ಪರ ವಿರೋಧ ಆರೋಪ ಪ್ರತ್ಯಾರೋಪಗಳಿಗೆ ಅವಕಾಶ ಮಾಡಿಕೊಟ್ಟಿತ್ತು. ಬಂಡಾಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಪಿವೈ ಬೆಂಬಲಕ್ಕೆ ಬಹಿರಂಗವಾಗಿ ನಿಂತಿದ್ದರು. ಆದರೆ ಎಂಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಸುಮಾರು 18 ಶಾಸಕರು ಸಿಎಂ ಬಿಎಸ್‌ವೈ ಅವರನ್ನು ಭೇಟಿ ಮಾಡಿ ಸಿಪಿ ಯೋಗೀಶ್ವರ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ದೆಹಲಿ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ತಮ್ಮ ವಿರುದ್ಧ ನಿರಂತರವಾಗಿ ಕೆಲವರು ಆರೋಪ ಮಾಡಿತ್ತಿರುವುದರಿಂದ ಬೇಸತ್ತ ವಿಜಯೇಂದ್ರ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೊತೆಗೆ ದೂರಿಕೊಂಡಿದ್ದಾರೆ ಎನ್ನಲಾಗಿದೆ. ನಾನು ಯಾವುದೇ ರೀತಿಯಲ್ಲಿ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಹೀಗಿದ್ದರೂ ಉದ್ದೇಶಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಬಿಜೆಪಿ ಹೈಕಮಾಂಡ್ ಈ ಕುರಿತಾಗಿ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುವುದು ಕೂಡಾ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಜುಲೈ ಬಳಿಕ ನಾಯಕತ್ವ ಬದಲಾವಣೆ ಖಚಿತ ಎಂದು ಒಂದು ಬಣ ಹೇಳುತ್ತಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಇದನ್ನು ನಿರಾಕರಿಸಿದ್ದಾರೆ. ಆದರೆ ಸಿಟಿ ರವಿ ಭವಿಷ್ಯದ ಬಗ್ಗೆ ಗೊತ್ತಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹೇಳಿಕೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಭಿನ್ನಮತ ದೆಹಲಿ ಅಂಗಳವನ್ನು ತಲುಪಿದೆ. ಹೈಕಮಾಂಡ್ ಮುಂದೆ ಪರ-ವಿರುದ್ಧ ಅಭಿಪ್ರಾಯ ಮಂಡಿಸಲಾಗಿದೆ. ಆದರೆ ದೆಹಲಿ ವರಿಷ್ಠರು ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೆ ಎಂಬುವುದು ಸದ್ಯದ ಕುತೂಹಲ.
from India & World News in Kannada | VK Polls https://ift.tt/3pfzaFw