ಹೊಸದಿಲ್ಲಿ: ನಾಯಕ ಶತಕ ಸಿಡಿಸಿ ಒಂದು ವರ್ಷ ಹಾಗೂ ಆರು ತಿಂಗಳಾಗಿದೆ. 2019ರಲ್ಲಿ ಬಾಂಗ್ಲಾದೇಶ ವಿರುದ್ಧ ಡೇ ನೈಟ್ ಟೆಸ್ಟ್‌ನಲ್ಲಿ ಕೊಹ್ಲಿ ಕೊನೆಯ ಬಾರಿ ಸೆಂಚುರಿ ಬಾರಿಸಿದ್ದರು. ಇದುವರೆಗೆ 7 ಟೆಸ್ಟ್ ಪಂದ್ಯಗಳಾಡಿರುವ ಭಾರತದ ನಾಯಕ ಇನ್ನೂ ಮೂರಂಕಿ ವೈಯಕ್ತಿಕ ಮೊತ್ತ ಗಳಿಸುವಲ್ಲಿ ಸಾಧ್ಯವಾಗಲಿಲ್ಲ. ಇದರ ಹೊರತಾಗಿಯೂ ವಿರಾಟ್ ಕೊಹ್ಲಿಯನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಬೆಂಬಲಿಸಿದ್ದು, ನ್ಯೂಜಿಲೆಂಡ್ ವಿರುದ್ಧ ಮುಂಬರುವ ಉದ್ಘಾಟನಾ ಆವೃತ್ತಿಯ ಹಣಾಹಣಿಯಲ್ಲಿ ಟೀಮ್ ಇಂಡಿಯಾ ನಾಯಕ ಖಂಡಿತಾ ಅತ್ಯುತ್ತಮ ಪ್ರದರ್ಶನ ತೋರುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೂನ್ 18 ರಿಂದ 22ರವರೆಗೆ ಇಂಗ್ಲೆಂಡ್‌ನ ಸೌತಾಮ್ಟನ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಚೊಚ್ಚಲ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಈ ಪಂದ್ಯ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸವಾಲುದಾಯಕವಾಗಿದೆ. ಏಕೆಂದರೆ, ನ್ಯೂಜಿಲೆಂಡ್ ತಂಡದಲ್ಲಿ ಮಾರಕ ವೇಗಿಗಳಿದ್ದು, ಇಂಗ್ಲೆಂಡ್ ಪಿಚ್‌ಗಳಲ್ಲಿ ಚೆಂಡು ಹೆಚ್ಚಿನ ಚಲನೆ ಹೊಂದಿರುವ ಹಿನ್ನೆಲೆಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಬ್ಯಾಟ್ ಮಾಡುವುದು ಸ್ವಲ್ಪ ಕಷ್ಟಕರವಾಗಿದೆ. ಇಂತಹ ಕಠಿಣ ಸನ್ನಿವೇಶದಲ್ಲಿ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿ ನಿಂತು ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಬೇಕಾದ ಅಗತ್ಯವಿದೆ. ಈ ಬಗ್ಗೆ ಮಾತನಾಡಿರುವ ರಮೀಝ್ ರಾಜಾ, ಫುಟ್‌ವರ್ಕ್ ಮೂಲಕ ವಿರಾಟ್ ಕೊಹ್ಲಿ ಈ ಬಾರಿ ತಂಡಕ್ಕೆ ನೆರವಾಗಲಿದ್ದಾರೆ ಎಂದು ಹೇಳಿದ್ದಾರೆ. ಇಂಡಿಯಾ ನ್ಯೂಸ್ ಸ್ಪೋರ್ಟ್ಸ್ ಜೊತೆ ಮಾತನಾಡಿರುವ ರಾಜಾ, "ವಿರಾಟ್ ಕೊಹ್ಲಿ ಬ್ಯಾಟಿಂಗ್ ನಾನು ನೋಡಿರುವ ಹಾಗೆ, ಹೆಚ್ಚಿನ ಸ್ವಿಂಗ್ ಇರುವ ಪಿಚ್‌ಗಳಲ್ಲಿ ಅವರು ಆರಂಭದಿಂದಲೇ ಲೆಗ್ ಸೈಡ್ ಕಡೆ ಜಾಸ್ತಿ ಆಡುತ್ತಾರೆ ಹಾಗೂ ಮುಷ್ಟಿಯ ಮೇಲೆ ಹೆಚ್ಚಿನ ಕೆಲಸ ಮಾಡುತ್ತಾರೆ. ಕೊಹ್ಲಿ ನೇರವಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ಫ್ಲಿಕ್‌ಗಳನ್ನು ಆಡಿದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಅಂದಹಾಗೆ ಏನು ಮಾಡಬೇಕೆಂದು ಅವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ," ಎಂದು ಹೇಳಿದರು. "ಕೆಲವೊಮ್ಮೆ ನೀವು ಜಾಸ್ತಿ ಯೋಚನೆ ಮಾಡುತ್ತೀರಿ ಹಾಗೂ ಸೆಂಚುರಿ ಮತ್ತು ರನ್‌ಗಳನ್ನು ಗಳಿಸಲು ನೀವು ಒತ್ತಡಕ್ಕೆ ಒಳಗಾಗುತ್ತೀರಿ. ಆರಂಭಿಕ 20 ರಿಂದ 25 ರನ್‌ಗಳ ವರೆಗೆ ಸಾಧ್ಯವಾದಷ್ಟು ನೇರ ಬ್ಯಾಟ್‌ನಲ್ಲಿ ಆಡಬೇಕು. ಈ ವೇಳೆ ಅವರು ಮುಷ್ಠಿಯನ್ನು ಬದಲಾಯಿಸಬಾರದು. ಇದನ್ನು ಅವರು ಪಾಲಿಸಿದರೆ ಖಂಡಿತಾ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಯಶಸ್ವಿಯಾಗಲಿದ್ದಾರೆ," ಎಂದು ತಿಳಿಸಿದರು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಟೂರ್ನಿಯನ್ನು ಪ್ರತ್ಯೇಕ ಅವಧಿಯಲ್ಲಿ ಆಯೋಜನೆ ಮಾಡಬೇಕೆಂದು ರಾಜಾ ಸಲಹೆ ನೀಡಿದ್ದಾರೆ. ಅಲ್ಲದೆ ಭಾರತದ ಉಪಸ್ಥಿತಿಯಲ್ಲಿ ಫೈನಲ್ ಆಸಕ್ತಿದಾಯಕವಾಗಿರುತ್ತದೆ ಎಂಬ ಅಂಶವನ್ನು ಇದೇ ವೇಳೆ ತಿಳಿಸಿದರು. "ನನಗೆ ಅನಿಸಿದ ಹಾಗೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಟೂರ್ನಿಯನ್ನು ಪ್ರತ್ಯೇಕ ವಿಂಡೋ(ಅವಧಿ)ನಲ್ಲಿ ಆಯೋಜನೆ ಮಾಡಬೇಕು. ಆರು ತಿಂಗಳ ಕಾಲ ಇದು ನಡೆಯಬೇಕು ಹಾಗೂ ಎಲ್ಲಾ ತಂಡಗಳು ಮುಖಾಮುಖಿಯಾಗಬೇಕು. ಈ ವೇಳೆ ಬೇರೆ ಸ್ವರೂಪದ ಕ್ರಿಕೆಟ್ ಅನ್ನು ನಿಲ್ಲಿಸಬೇಕು. ನೀವು ಸಂಪೂರ್ಣವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ತೊಡಗಿಕೊಳ್ಳಬೇಕಾದರೆ ಈ ರೀತಿಯ ಪ್ರತ್ಯೇಕ ಅವಧಿ ಅಗತ್ಯ," ಎಂದು ರಮೀಝ್ ರಾಜಾ ಸಲಹೆ ನೀಡಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/34JD4Np