ಆರ್.ಶ್ರೀಧರ್ ರಾಮನಗರ ರಾಮನಗರ: ಹೊಸ ವರ್ಷಚಾರಣೆ ಹಿನ್ನಲೆಯಲ್ಲಿ ಎಲ್ಲಿಯಾದರೂ ಪ್ರವಾಸಕ್ಕೆ ಹೋಗುವ ಪ್ಲ್ಯಾನ್ ಮಾಡಿಕೊಂಡಿದ್ದರೆ, ಬದಲಿಸಿಕೊಳ್ಳುವುದು ಒಳ್ಳೆಯದು. ಕೊರೊನಾದ ಹೊಸ ಮಾದರಿ ಒಮಿಕ್ರಾನ್ ದಾಳಿ ತಡೆಯಲು ಜಿಲ್ಲೆಯಲ್ಲೂ ಕಟ್ಟುನಿಟ್ಟಿನ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾತ್ರಿ 10ಗಂಟೆ ಬಳಿಕದ ಸಂಭ್ರಮಾಚರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಕಳೆದ ವರ್ಷವೂ ನಿರ್ಬಂಧವಿತ್ತುಕಳೆದ ವರ್ಷ ಜಿಲ್ಲೆಯಲ್ಲಿನ ಪ್ರಮುಖ ಪ್ರವಾಸಿ ತಾಣಗಳ ಪ್ರವೇಶಕ್ಕೆ ಜಿಲ್ಲಾಡಳಿತ ಮೂರು ದಿನಗಳ ನಿರ್ಬಂಧ ವಿಧಿಸಿತ್ತು. 2020ರ ಡಿಸೆಂಬರ್ 30ರಿಂದ 2021ರ ಜನವರಿ 2ರವರೆಗು ಜಿಲ್ಲೆಯ ಪ್ರಮುಖ ತಾಣಗಳಿಗೆ ನಿಷೇಧಾಜ್ಙೆ ಹೊರಡಿಸಿತ್ತು. ಚನ್ನಪಟ್ಟಣದ ಕಣ್ವ ಜಲಾಶಯ, ಮಾಗಡಿಯ ಸಾವನದುರ್ಗ, ಮಂಚನಬೆಲೆ ಜಲಾಶಯ, ಕನಕಪುರದ ಸಂಗಮ-ಮೇಕೆದಾಟು, ಚುಂಚಿ ಫಾಲ್ಸ್ ಜಲಾಶಯಗಳಿಗೆ ಮೂರು ದಿನಗಳ ಕಾಲ ಸಾರ್ವಜನಿಕರು ಭೇಟಿಯನ್ನು ನಿಷೇಧಿಸಿತ್ತು. ಇನ್ನೂ ನಿರ್ಧಾರವಿಲ್ಲ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ ಹೇರುವ ಬಗ್ಗೆ ಈ ವರ್ಷ ಈ ಬಗ್ಗೆ ಈವರೆಗೂ ಜಿಲ್ಲಾಡಳಿತ ನಿರ್ಧಾರ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಬಹುದು. ಇದೆಲ್ಲದಕ್ಕಿಂತ ಹೆಚ್ಚಾಗಿ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೂ ಕರ್ಫ್ಯೂ ಜಾರಿಯಲ್ಲಿರುವುದರಿಂದ ಹೋಟಲ್ಗಳಲ್ಲಿ ಮಧ್ಯರಾತ್ರಿ ಪಾರ್ಟಿಗಳು ನಡೆಯುವಂತಿಲ್ಲ. ಲಾಂಗ್ ರೈಡ್ ನೆಪದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೇಕಾಬಿಟ್ಟಿ ಓಡಾಡುವಂತಿಲ್ಲ. ಮನೆಯೊಳಗೆ ಸೀಮಿತ ಈ ಭಾರಿಯ ಹೊಸ ವರ್ಷಚಾರಣೆ ಕೇವಲ ಮನೆಗಳಿಗಷ್ಟೆ ಸೀಮಿತಗೊಳ್ಳಬೇಕಿದೆ. ಕರ್ಫ್ಯೂ ಹಿನ್ನಲೆಯಲ್ಲಿ ಮನೆಮನೆಗಳಲ್ಲಿ ಮಾತ್ರವೇ ನೂತನ ವರ್ಷವನ್ನು ಸ್ವಾಗತಿಸಿಕೊಳ್ಳಬೇಕಿದೆ. ಮಾತ್ರವಲ್ಲ, ಸಾಲುಸಾಲು ಸರಕಾರಿ ರಜೆ ಇದೆ. ಡಿಸೆಂಬರ್ 31 ಶುಕ್ರವಾರ. ಹೀಗಾಗಿ ಶನಿವಾರ ರಜೆ ಹಾಕಿದರೆ, ಭಾನುವಾರ ರಜೆ. ಹೀಗಾಗಿ ಕಡೆ ಘಳಿಗೆಯಲ್ಲಿ ಪ್ರವಾಸಿತಾಣಗಳ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದರೂ ಅಚ್ಚರಿ ಇಲ್ಲ. ಹೋಟಲ್ಗಳಲ್ಲೂ ಆಚರಣೆ ಇಲ್ಲ ಕಳೆದ 22 ವರ್ಷಗಳಿಂದ ಹೊಸ ವರ್ಷಚಾರಣೆಗೆ ಖ್ಯಾತಿ ಪಡೆದಿದ್ದ ಈಗಲ್ಟನ್ ರೆಸಾರ್ಟ್ ಈ ಭಾರಿ ಕೋವಿಡ್ ಕಾರಣಕ್ಕೆ ತಟಸ್ಥಗೊಂಡಿದೆ. ಯುವಸಮೂಹಕ್ಕೆ ಅತ್ಯಾಕರ್ಷಕ ತಾಣವಾಗಿದ್ದ ಈಗಲ್ ಟನ್ನಲ್ಲಿ ಈ ಭಾರಿ ವರ್ಷಾಚರಣೆಗೆ ಪಾರ್ಟಿ ಇಲ್ಲದಿರುವುದು ಪಾರ್ಟಿ ಪ್ರಿಯರ ಅಸಮಾಧಾನಕ್ಕೂ ಕಾರಣವಾಗಿದೆ. ಬಿಡದಿಯಲ್ಲಿನ ಖಾಸಗಿ ರೆರ್ಸಾಟ್ಗಳು, ರಾಸ್ಥ, ಈಗಲ್ಟನ್, ಹೀಲ್ವ್ಯೂ ರೆಸಾರ್ಟ್ಗಳಲ್ಲಿ ಪ್ರತಿ ವರ್ಷ ನೈಟ್ ಪಾರ್ಟಿ ನಡೆಯುತ್ತಿದ್ದವು. ಡಿಸೆಂಬರ್ 31ರ ಮಧ್ಯರಾತ್ರಿಗಾಗಿ ಕಾಯುತ್ತಿದ್ದ ಸಾರ್ವಜನಿಕರು, ನೈಟ್ ಕರ್ಫೂ ಹಿನ್ನಲೆಯಲ್ಲಿ ಈ ಭಾರಿ ಎಲ್ಲ ಆಚರಣೆಗಳನ್ನು ತಮ್ಮ ಮನೆಗೆ ಸೀಮಿತಗೊಳಿಸಿಕೊಳ್ಳಬೇಕಿದೆ. ರಸ್ತೆ ಮಧ್ಯೆ ಮೋಜಿಗೆ ಅವಕಾಶವಿಲ್ಲ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಾರ್ಟಿ, ಮೋಜು ಮಸ್ತಿ ಹೆಚ್ಚಾಗುವ ಸಾಧ್ಯತೆಯು ಇದೆ. ಹೊಸ ವರ್ಷದ ಆಚರಣೆ ನೆಪದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರಸ್ತೆ ಮಧ್ಯದಲ್ಲಿ ಕೇಕ್ ಕತ್ತರಿಸಲು ಅವಕಾಶ ನೀಡಿಲ್ಲ. ಇದಲ್ಲದೇ, ನಗರದ ಪ್ರಮುಖ ವೃತ್ತದಲ್ಲಿಆಚರಣೆ ನಡೆಸುವುದನ್ನು ನಿಷೇಧಿಸಿದೆ. ಇನ್ನು ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಆಯಾ ಕಟ್ಟಿನ ಪ್ರದೇಶದಲ್ಲಿನ ಪೊಲೀಸ್ ತಪಾಸಣೆ ಡಿ.31ರ ಮದ್ಯರಾತ್ರಿ 2 ಗಂಟೆ ವರೆಗೂ ಮುಂದುವರಿಯಲಿದೆ. ದೇವಾಲಯಗಳಿಗೆ ಪ್ರವೇಶ ರೇವಣಸಿದ್ದೇಶ್ವರ ಬೆಟ್ಟ, ಮಳೂರಿನ ಅಪ್ರಮೇಯ ಸ್ವಾಮಿ ದೇವಾಲಯ, ಲಕ್ಷ್ಮಿ ನರಸಿಂಹಸ್ವಾಮಿ ಬೆಟ್ಟ, ಕನಕಪುರದ ಶಿವಾಲದಪ್ಪನ ಬೆಟ್ಟ, ಶಿವನಾಂಕೇಶ್ವರ ದೇವಾಲಯ, ಎಳಗಳ್ಳಿ ಕಾಯಿಮುದ್ದಮ್ಮ, ಕಲ್ಲಹಳ್ಳಿಯ ಚಿಕ್ಕತಿರುಪತಿ, ರಾಮದೇವರ ಬೆಟ್ಟ ರಾಮದೇವಾಲಯ, ಮಾಗಡಿಯ ರಂಗನಾಥಸ್ವಾಮಿ ದೇವಾಲಯ, ಕಲ್ಲೂರ ಆಂಜನೇಯ ಸ್ವಾಮಿ, ಕೆಂಗಲ್ನ ಆಂಜನೇಯ ದೇವಾಲಯ, ಕೋತಿ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ಇನ್ನಿತರ ದೇವಾಲಯಗಳಲ್ಲಿ ಜ.1ರಂದು ವಿಶೇಷ ಪೂಜೆಗಳು ನಡೆಯಲಿವೆ. ಇಲ್ಲಿಗೆ ಬರಬಹುದು ಹೊಸ ವರ್ಷದ ದಿನ ಜಾನಪದ ಲೋಕ, ರೇವಣ ಸಿದ್ದೇಶ್ವರ ಸ್ವಾಮಿ ಬೆಟ್ಟ, ರಾಮದೇವರಬೆಟ್ಟ, ವಂಡರ್ ಲಾ, ಇನೋವೆಟಿವ್ ಫಿಲ್ಮ್ ಸಿಟಿ, ಸ್ಥಳೀಯ ನಿವಾಸಿಗಳು ರಾಮನಗರದ ರಂಗರಾಯನದೊಡ್ಡಿ ಕೆರೆ ಸೇರಿದಂತೆ ಇನ್ನಿತರ ಪ್ರದೇಶಗಳು ಪ್ರವಾಸಿಗರಿಗೆ ಮುಕ್ತಗೊಂಡಿವೆ. ಆದರೆ, ಇಲ್ಲಿಯು ಬೆಳಗ್ಗೆಯಿಂದ ಸಂಜೆವರೆಗು ಮಾತ್ರವೇ ಅವಕಾಶ ನೀಡುವ ಸಾಧ್ಯತೆಗಳಿವೆ. ಕುಡಿದು ವಾಹನ ಚಾಲನೆ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹೆದ್ದಾರಿಗಳಲ್ಲಿ ಆಚರಣೆಗಳಲ್ಲಿ ನೆಪದಲ್ಲಿ ಸವಾರರಿಗೆ ತೊಂದರೆ ನೀಡುವಂತಿಲ್ಲ. ನಿಯಮಗಳನ್ನು ಉಲ್ಲಂಘಿಸಿದರೆ ಶಿಕ್ಷೆ ತಪ್ಪಿದ್ದಲ್ಲ. ನೈಟ್ ಕಫ್ರ್ಯೂ ಜಾರಿಯಲ್ಲಿರುವುದರಿಂದ ಬಹುತೇಕ ಹೋಟಲ್ಗಳಲ್ಲಿ ರಾತ್ರಿ ಪಾರ್ಟಿಗಳು ನಡೆಯುವುದಿಲ್ಲ. ಸರಕಾರದ ನಿಯಮಗಳನ್ನು ಯಾರೊಬ್ಬರು ಉಲ್ಲಂಘಿಸುವಂತಿಲ್ಲ. ಎಸ್.ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರಾಮನಗರ ನೈಟ್ ಕಫ್ರ್ಯೂ ಜಾರಿಯಲ್ಲಿರುವುದರಿಂದ ಯಾರೊಬ್ಬರು ರಾತ್ರಿ ಆಚರಣೆಗೆ ಹೊರ ಹೋಗುವುದಿಲ್ಲ. ಆದರೆ, ಪ್ರವಾಸಿ ತಾಣಗಳಿಗೆ ಕಳೆದ ಭಾರಿಯಂತೆ ನಿರ್ಬಂಧ ಹೇರಬಾರದು. ಕೋವಿಡ್ ನಿಯಮಗಳ ಪಾಲನೆ ಮೂಲಕ ಮುಕ್ತ ಅವಕಾಶ ನೀಡಬೇಕು. ಇದರಿಂದ ಪ್ರವಾಸೋದ್ಯಮ ಕೊಂಚ ಚೇತರಿಸಿಕೊಳ್ಳಲಿದೆ. ವಿವೇಕ್, ಕನಕಪುರ ನಿವಾಸಿಕಳೆದ ವರ್ಷದಂತೆ ಈ ವರ್ಷವು ಯಾವುದೇ ಪಾರ್ಟಿ ನಡೆಸುತ್ತಿಲ್ಲ. ನೈಟ್ ಕಫ್ರ್ಯೂ ಜಾರಿಗೆ ಬರುವ ಮುನ್ನವೆ, ಮುನ್ನೆಚ್ಚರಿಕಾ ಕ್ರಮ ವಹಿಸಿ ಪಾರ್ಟಿಗಳನ್ನು ನಿಷೇಧಿಸಿದ್ದೇವೆ. ಹೋಟಲ್ನಲ್ಲಿ ತಂಗಿರುವವರಿಗೆ ಯಥಾ ಪ್ರಕಾರ ಸೇವೆ ನೀಡುತ್ತೇವೆ. ಮ್ಯಾಥ್ಯು, ಮ್ಯಾನೇಜರ್ಈಗಲ್ಟನ್ ರೆರ್ಸಾರ್ಟ್ , ಬಿಡದಿ
from India & World News in Kannada | VK Polls https://ift.tt/3HmKHux