ಕೋಲ್ಕತ್ತಾ: ವಿರೋಧಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವ ವಿದೇಶಿ ಪ್ರಜೆಗಳು ಹಾಗೂ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಉಳಿಯುವುದು ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಲ್ಕತ್ತಾದಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾರಣಕ್ಕೆ ಜಾದವ್'ಪುರ್ ವಿಶ್ವವಿದ್ಯಾಲಯದ ಪೋಲಿಷ್ ವಿದ್ಯಾರ್ಥಿಗೆ ದೇಶ ಬಿಡುವಂತೆ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ ದೇಶ ತೊರೆಯುವಂತೆ ಆದೇಶಿಸಿದೆ. ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಜಾಧವ್'ಪುರ್ ವಿವಿಯ ಕಂಪ್ಯಾರೇಟಿವ್ ಲಿಟ್ರೆಚರ್ ವಿಭಾಗದ ಕಮಿಲ್ ಸೀಡ್ಸಿನ್ಸ್ಕಿಗೆ ಆದಷ್ಟು ಶೀಘ್ರವಾಗಿ ದೇಶ ಬಿಡುವಂತೆ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ ಸೂಚಿಸಿದೆ. ವಿದ್ಯಾರ್ಥಿ ವೀಸಾ ಅಡಿಯಲ್ಲಿ ಭಾರತದಲ್ಲಿ ಉಳಿದುಕೊಂಡಿರುವ ಕಮಿಲ್ ಸೀಡ್ಸಿನ್ಸ್ಕಿ ದೇಶದ ಆಂತರಿಕ ರಾಜಕೀಯ ವಿಚಾರದಲ್ಲಿ ಮೂಗು ತೂರಿಸುವುದು ಸರಿಯಲ್ಲ ಎಂದಿರುವ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ, ಆದಷ್ಟು ಶೀಘ್ರದಲ್ಲಿ ಕಚೇರಿಗೆ ಬಂದು ವಿವರಣೆ ನೀಡುವಂತೆ ಖಡಕ್ ವಾರ್ನಿಂಗ್ ಮಾಡಿದೆ. ಕಳೆದ ವರ್ಷ ಡಿಸೆಂಬರ್'ನಲ್ಲಿ ನಗರದ ಮೌಲಾಲಿ ಪ್ರದೇಶದಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಸಿಡ್ಸಿನ್ಸ್ಕಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದ. ವಿಶ್ವ ಭಾರತಿ ವಿಶ್ವವಿದ್ಯಾನಿಲಯದ ಬಾಂಗ್ಲಾದೇಶದ ವಿದ್ಯಾರ್ಥಿನಿಯೊಬ್ಬಳಿಗೆ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ ಇದೇ ರೀತಿಯ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
from India & World News in Kannada | VK Polls https://ift.tt/3cn0gne