ಶಿಡ್ಲಘಟ್ಟದಲ್ಲಿ ಮದುವೆ ಊಟ ಸೇವಿಸಿ ಒಬ್ಬ ಮೃತ್ಯು, ಇಬ್ಬರು ಗಂಭೀರ, 50 ಮಂದಿ ಅಸ್ವಸ್ಥ

ಶಿಡ್ಲಘಟ್ಟ: ತಾಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯ ಎಲ್‌.ಮುತ್ತುಕದಹಳ್ಳಿ, ಪ್ಯಾಯಲಹಳ್ಳಿ ಹಾಗೂ ತಾಲೂಕು ಗಡಿ ಭಾಗದ ಮನ್ನಾರ್‌ಪುರದ ಗ್ರಾಮಸ್ಥರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದ್ದು, ಪ್ಯಾಯಲಹಳ್ಳಿಯ ನಾರಾಯಣಪ್ಪ(62) ಮೃತಪಟ್ಟಿದ್ದರೆ, ಎಲ್‌.ಮುತ್ತುಕದಹಳ್ಳಿಯ ನರಸಿಂಹಮೂರ್ತಿ ಹಾಗೂ ರಾಮಾಂಜಿ ಅವರು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಧು- ವರರನ್ನು ಹೊರತುಪಡಿಸಿ ಕುಟುಂಬದವರಿಗೂ ವಾಂತಿ ಬೇಧಿ ಕಾಣಿಸಿಕೊಂಡಿದೆ. ಆದರೆ ವಧು ಹಾಗೂ ವರರಲ್ಲಿ ಯಾವುದೆ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ ಅವರು ಅದೃಷ್ಟವಶಾತ್‌ ಸೇಫ್‌ ಆಗಿದ್ದಾರೆ. ಘಟನೆ ಹಿನ್ನಲೆ ಎಲ್‌.ಮುತ್ತುಕಹಳ್ಳಿಯ ವಧು ಹಾಗೂ ಮನ್ನಾರ್‌ಪುರದ ವರನಿಗೆ ಮದುವೆ ನಿಶ್ಚಯವಾಗಿ ಚಿಕ್ಕಬಳ್ಳಾಪುರ ತಾಲೂಕಿನ ಕಂದವಾರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಗುರುವಾರ ಹಾಗೂ ಶುಕ್ರವಾರ ಮದುವೆ ಆಗಿದೆ. ಗುರುವಾರ ಸಂಜೆ ನಡೆದ ಆರತಕ್ಷೆಯಲ್ಲಿ ಊಟ ಮಾಡಿದವರಲ್ಲಿ ಮಾತ್ರ ವಾಂತಿ ಹಾಗೂ ಬೇಧಿ ಕಾಣಿಸಿಕೊಂಡಿದೆ. ಶುಕ್ರವಾರ ಬೆಳಗ್ಗೆ ನಡೆದ ಮುಹೂರ್ತದಲ್ಲಿ ಊಟ ಮಾಡಿದವರಲ್ಲಿ ಅಂತಹ ಯಾವುದೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿಲ್ಲ. ಶನಿವಾರ ಹಾಗೂ ಭಾನುವಾರ ನಿತ್ರಾಣಗೊಂಡವರ ಸಂಖ್ಯೆ ಹೆಚ್ಚಾಗಿದ್ದು, ವಿಷಯ ಒಬ್ಬರಿಂದ ಒಬ್ಬರಿಗೆ ಹರಡಿ ಎಲ್ಲರಲ್ಲೂ ಆತಂಕ ಮನೆ ಮಾಡಿದ್ದು. ಆಸ್ಪತ್ರೆಗೆ ದೌಡಾಯಿಸಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಿದೆ, ನಿರ್ಜಲೀಕರಣದಿಂದ ನಿತ್ರಾಣಗೊಂಡವರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಗ್ರಾಮಸ್ಥರಲ್ಲಿ ಒಂದು ರೀತಿಯ ಆತಂಕ ಮನೆ ಮಾಡಿದೆ. ತಾತ್ಕಾಲಿಕ ಆಧಿರೋಗ್ಯ ಕೇಂದ್ರ ಸ್ಥಾಪನೆ: ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ, ಆರೋಗ್ಯ ನಿರೀಕ್ಷಕ ಲೋಕೇಶ್‌ ಹಾಗೂ ಸಿಬ್ಬಂದಿ ಎಲ್‌.ಮುತ್ತುಕದಹಳ್ಳಿಯ ಸರಕಾರಿ ಶಾಲೆ ಹಾಗೂ ಅಂಗನವಾಡಿಯಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆದಿದ್ದಾರೆ. ಗ್ರಾಮದ ಮನೆ ಮನೆಗೂ ಭೇಟಿ ನೀಡಿ ಅಗತ್ಯ ಔಷಧಿಗಳನ್ನು ವಿತರಿಸಿ ಉಪಚರಿಸಿದ್ದಾರೆ. ಸ್ವಚ್ಚತೆ ಕಾಪಾಡಿಕೊಂಡು ಬಿಸಿ ನೀರು, ಬಿಸಿ ಬಿಸಿ ಊಟ ಸೇವಿಸಿ ಕಾಲ ಕಾಲಕ್ಕೆ ಮಾತ್ರೆಗಳನ್ನು ನುಂಗಲು ಹಾಗೂ ನಿರ್ಜಲೀಕರಣದಿಂದ ಪಾರಾಗಲು ಒಆರ್‌ಎಸ್‌ ಪೌಡರ್‌ ಪ್ಯಾಕೆಟ್‌ ಕೊಟ್ಟು ಕುಡಿಯಲು ತಿಳಿಸಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಯೋಗೀಶ್‌ಗೌಡ, ಜಿಲ್ಲಾ ಸರ್ವೇಕ್ಷಣಾಕಾರಿ ಡಾ.ಬಾಬುರಾವ್‌ ಇನ್ನಿತರೆ ಅಕಾರಿಗಳು ಎಲ್‌.ಮುತ್ತುಕದಹಳ್ಳಿ, ಪ್ಯಾಯಲಹಳ್ಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಮಾಜಿ ಶಾಸಕ ರಾಜಣ್ಣ ಸಹ ತಮ್ಮ ಸ್ವಗ್ರಾಮ ಮುತ್ತುಕದಹಳ್ಳಿಗೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಧೈರ್ಯ ತುಂಬಿದ್ದಾರೆ. ಮೊದಲು ಗ್ರಾಮದ ನೀರು ಸರಬರಾಜಿನ ಮೇಲೆ ಮೂಡಿತ್ತು ಶಂಕೆ ಗುರುವಾರ ಸಂಜೆ ಮದುವೆಯ ಆರತಕ್ಷತೆ ಮುಗಿದಿದ್ದು ಶನಿವಾರ ಬೆಳಗ್ಗೆ ಮೊದಲಿಗೆ ವಾಂತಿ ಬೇಧಿ ಕಾಣಿಸಿಕೊಂಡಿದೆ. ಹಾಗಾಗಿ ಮೊದಲಿಗೆ ಗ್ರಾಮದಲ್ಲಿನ ನೀರು ಕಲುಷಿತಗೊಂಡಿರಬಹುದು ಎಂದು ಅನುಮಾನ ವ್ಯಕ್ತವಾಗಿತ್ತು. ಆರೋಗ್ಯ ಇಲಾಖೆಯ ಸಿಬ್ಬಂದಿ ಗ್ರಾಮದಲ್ಲಿನ ನೀರನ್ನು ಸಂಗ್ರಹ ಮಾಡಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿದ್ದು ನೀರಿನಲ್ಲಿ ಅಂತಹ ಕಲುಷಿತ ಅಂಶಗಳಿಲ್ಲ ಎಂದು ದೃಢಪಟ್ಟಿದೆ. ನಂತರ ಮನ್ನಾರ್‌ಪುರ ಹಾಗೂ ಪ್ಯಾಯಲಹಳ್ಳಿಯಲ್ಲೂ ವಾಂತಿ ಬೇಧಿ ಕಾಣಿಸಿಕೊಂಡಾಗ ಇದು ಮದುವೆಯ ಊಟದ ಎಫೆಕ್ಟ್ ಎಂಬ ನಿರ್ಧಾರಕ್ಕೆ ಬರಲಾಗಿದೆ. ಶನಿವಾರದಿಂದಲೆ ನಾನು ಹಾಗೂ ನಮ್ಮ ಸಿಬ್ಬಂದಿ ಎಲ್‌.ಮುತ್ತುಕದಹಳ್ಳಿಯಲ್ಲಿ ಬೀಡು ಬಿಟ್ಟಿದ್ದು ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದೆ. ನೆರೆಯ ಪ್ಯಾಯಲಹಳ್ಳಿ ಹಾಗೂ ಎಲ್‌.ಮುತ್ತುಕದಹಳ್ಳಿಯ ಮನೆ ಮನೆಗೂ ಭೇಟಿ ನೀಡಿದ್ದೇವೆ. ಅಗತ್ಯ ಔಷಧ ವಿತರಿಸಿ ಮುಂಜಾಗ್ರತೆ ಕ್ರಮಗಳ ಬಗ್ಗೆ ತಿಳಿ ಹೇಳಲಾಗಿದೆ. ಬೇರೆ ಬೇರೆ ಆಸ್ಪತ್ರೆಗಳಲ್ಲಿಚಿಕಿತ್ಸೆ ಪಡೆಯುತ್ತಿರುವ ಆರೋಗ್ಯ ಸ್ಥಿತಿ ಕುರಿತು ಕಾಲ ಕಾಲಕ್ಕೆ ಮಾಹಿತಿ ತರಿಸಿಕೊಳ್ಳುತ್ತಿದ್ದೇವೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಆತಂಕ ಪಡುವ ಅಗತ್ಯವಿಲ್ಲ. - ಡಾ.ವೆಂಕಟೇಶ್‌ಮೂರ್ತಿ, ಆರೋಗ್ಯಾಕಾರಿ, ಶಿಡ್ಲಘಟ್ಟ. ಮದುವೆಯಲ್ಲಿ ಸಂಜೆ ಊಟ ಮಾಡಿದವರಲ್ಲಿ ಮಾತ್ರ ಈ ಸಮಸ್ಯೆ ಕಾಣಿಸಿಕೊಂಡಿದೆ. ವೈದ್ಯರು ಹಾಗೂ ಗ್ರಾಮಪಂಚಾಯಿತಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ನಮ್ಮೂರಿನ ಚರಂಡಿಗಳಲ್ಲಿ ಕಸ ಕಡ್ಡಿ ತೆಗೆದು ಸ್ವಚ್ಚತೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಬ್ಲೀಚಿಂಗ್‌ ಪೌಡರ್‌ ಸಿಂಪಡಣೆ ಮಾಡಿ ಗ್ರಾಮಸ್ಥರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ. -ಭೈರಾರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ, ಎಲ್‌.ಮುತ್ತುಕದಹಳ್ಳಿ. ಮದುವೆ ಆಹಾರದಲ್ಲಿ ವಿಷ ಸೇವನೆ ಆಗಿ ಕೆಲವರು ಅಸ್ವಸ್ಥರಾಗಿದ್ದಾರೆ. ಆಹಾರದ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಯಾರಿಗೂ ಯಾವುದೇ ತೊಂದರೆ ಇಲ್ಲ. ಒಂದೆರಡು ದಿನದಲ್ಲಿ ಎಲ್ಲರೂ ಸಹಜ ಸ್ಥಿತಿಗೆ ಬರುತ್ತಾರೆ. - ಡಾ.ಬಿ.ಎಂ.ಯೋಗೇಶ್‌ಗೌಡ, ಡಿಎಚ್‌ಒ ಚಿಕ್ಕಬಳ್ಳಾಪುರ


from India & World News in Kannada | VK Polls https://ift.tt/2VAVsV7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...