ತುಮಕೂರು: ಮೋದಿ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಮೋದಿ ಸಂಚರಿಸಲಿರುವ ಬಿ.ಎಚ್ ರಸ್ತೆಯ ಇಕ್ಕೆಲಗಳಲ್ಲಿ ಇರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಜೆವರೆಗೂ ಬಾಗಿಲು ಮುಚ್ಚಿಸಲಾಗಿದೆ. ಮುಖ್ಯರಸ್ತೆಯನ್ನು ಸಂಪರ್ಕಿಸುವ ಎಲ್ಲಾ ಅಡ್ಡ ರಸ್ತೆಗಳನ್ನು ಬಂದ್ ಮಾಡಲಾಗಿದೆ. ನಾಲ್ಕೈದು ಖಾಸಗಿ ಆಸ್ಪತ್ರೆಯ ರಸ್ತೆಗಳನ್ನು ಸಹ ಪೊಲೀಸರು ಬ್ಯಾರಿಕೆಡ್ ಬಳಸಿ ಮುಚ್ಚಿದ್ದಾರೆ. ಬಿ.ಎಚ್ ರಸ್ತೆಯ ಇಕ್ಕೆಲಗಳಲ್ಲಿನ ಸುಮಾರು 10ಕ್ಕೂ ಅಧಿಕ ಎಟಿಎಂಗಳನ್ನೂ ಮುಚ್ಚಿಸಲಾಗಿದೆ. ಒಟ್ಟಾರೆಯಾಗಿ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಜನರು ಪರದಾಡುವಂತಾಗಿದೆ. ಪ್ರಧಾನಿ ಭಾಗವಹಿಸಲಿರುವ ಕೃಷಿ ಸಮ್ಮಾನ್ ಹಾಗೂ ಕೃಷಿ ಕರ್ಮಣ್ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಭಾಗದ ರೈತರು ಗುರುವಾರ ತುಮಕೂರು ನಗರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊರಟಿದ್ದರು. ಆದರೆ ಮಾರ್ಗಮಧ್ಯದಲ್ಲಿ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದಿದ್ದಾರೆ. ಪ್ರಧಾನಿ ಮೋದಿ ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಧರಿಸಿ ಪಾಲ್ಗೊಳ್ಳಲು ರೈತ ಸಂಘದ ಮುಖಂಡರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
from India & World News in Kannada | VK Polls https://ift.tt/2sCQTxu