- ಆತೀಶ್ ಬಿ. ಕನ್ನಾಳೆ, ಸಮೃದ್ಧ ಪ್ರಕೃತಿ ಸಂಪತ್ತು ಹೊಂದಿ ದೇಶದ ಹವಾಮಾನ ನಿಯಂತ್ರಿಸುವ ಪಶ್ಚಿಮಘಟ್ಟದ ಜೀವ ವೈವಿಧ್ಯದ ಬಗ್ಗೆ ಸಾಕಷ್ಟು ಅಧ್ಯಯ ನಗಳಾಗಿವೆ. ಆದರೂ ಇಲ್ಲಿನ ಪೂರ್ಣ ಪ್ರಮಾಣದ ಜ್ಞಾನ ಜನತೆಗೆ ತಲುಪುತ್ತಿಲ್ಲ. ಇದನ್ನು ಮನಗಂಡು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ 'ವೈಲ್ಡ್‌ಲೈಫ್ ಇಂಟರ್‌ಪ್ರಿಟೇಶನ್ ಸೆಂಟರ್(ಡಬ್ಲ್ಯುಐಸಿ)' ಅನ್ನು ಶಿವಮೊಗ್ಗದಲ್ಲಿ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಕೇಂದ್ರ ಸರಕಾರದ ಪರಿಸರ ಶಿಕ್ಷಣ ಕೇಂದ್ರ (ಸಿಇಇ) ಜತೆ ಒಪ್ಪಂದ (ಎಂಒಯು) ಕೂಡ ಮಾಡಿಕೊಳ್ಳಲಾಗಿದೆ. ಶಿವಮೊಗ್ಗ ಸ್ಮಾರ್ಟ್ ಸಿಟಿ ಕಂಪನಿ ಲಿ. ಹಾಗೂ ಸಿಇಇ ಮಧ್ಯೆ ಒಪ್ಪಂದವಾಗಿದ್ದು, ಬೆಂಗಳೂರಿನಲ್ಲಿರುವ ಸಿಇಇ ತಂಡವು ಮೂರು ತಿಂಗಳಲ್ಲಿ ಪಶ್ಚಿಮಘಟ್ಟಕ್ಕೆ ಭೇಟಿ ನೀಡಿ ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ಕೇಂದ್ರ ಸರಕಾರದ ಪರಿಸರ ಶಿಕ್ಷಣ ಕೇಂದ್ರ(ಸಿಇಇ) ಜತೆ ಒಪ್ಪಂದ(ಎಂಒಯು) ಕೂಡ ಮಾಡಿಕೊಳ್ಳಲಾಗಿದೆ. ಶಿವಮೊಗ್ಗ ಸ್ಮಾರ್ಟ್ ಸಿಟಿ ಕಂಪನಿ ಲಿ. ಹಾಗೂ ಸಿಇಇ ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಬೆಂಗಳೂರಿನಲ್ಲಿರುವ ಸಿಇಇ ತಂಡವು ಮೂರು ತಿಂಗಳಲ್ಲಿ ಪಶ್ಚಿಮಘಟ್ಟಕ್ಕೆ ಭೇಟಿ ನೀಡಿ ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸಲಿದ್ದಾರೆ. ಈ ಮೂರು ತಿಂಗಳ ಅವಧಿಯಲ್ಲಿಯೇ ಡಿಪಿಆರ್ ಮತ್ತು ಮಾಡಬೇಕಾದ ಕಾರ್ಯಗಳ ಬಗ್ಗೆ ಅಂತಿಮ ರೂಪುರೇಷೆ ಸಿದ್ಧವಾಗಲಿದೆ. ಇದಕ್ಕಾಗಿ, ಸ್ಮಾರ್ಟ್ ಸಿಟಿ ಯೋಜನೆ ಅಡಿ 8.58 ಕೋಟಿ ರೂ. ಮೀಸಲು ಇಡಲಾಗಿದೆ. ಗಾಂಧಿ ಪಾರ್ಕ್‌ನಲ್ಲಿ ಡಬ್ಲ್ಯುಐಸಿ: ನಗರದ ಹೃದಯ ಭಾಗದಲ್ಲಿರುವ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ಎರಡೂವರೆ ಎಕರೆ ಜಾಗ ಗುರುತಿಸಲಾಗಿದೆ. ಇದರಲ್ಲಿ ಐದು ಸಾವಿರ ಚದರ ಅಡಿಯಲ್ಲಿ ಇಂಟರ್‌ಪ್ರಿಟೇಶನ್ ಸೆಂಟರ್‌ಗೆ ಕಟ್ಟಡ ನಿರ್ಮಿಸಲಾಗುವುದು. ಇದನ್ನು ಅಹಮದಾಬಾದ್‌ನ ಪರಿಸರ ಯೋಜನೆ ಮತ್ತು ತಂತ್ರಜ್ಞಾನ ಕೇಂದ್ರ(ಎಸ್‌ಇಪಿಟಿ)ಕ್ಕೆ ವಹಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು 15 ತಿಂಗಳ ಕಾಲಾವಧಿ ನೀಡಲಾಗಿದೆ. ಗುತ್ತಿಗೆ ಪಡೆದಿರುವ ಸಿಇಇ ಐದು ವರ್ಷ ನಿರ್ವಹಣೆ ನೋಡಿಕೊಳ್ಳಲಿದೆ. ಸೆಂಟರ್‌ನ ವೈಶಿಷ್ಟ್ಯ ವನ್ಯಜೀವಿ ನಿರ್ವಚನ ಕೇಂದ್ರ(ಡಬ್ಲ್ಯುಐಸಿ) ಕಟ್ಟಡ ಎರಡು ಅಂತಸ್ತಿನಿಂದ ಕೂಡಿರಲಿದೆ. ಪಶ್ಚಿಮಘಟ್ಟಗಳಲ್ಲಿರುವ ಜೀವಸಂಕುಲ, ಸಸ್ಯರಾಶಿ, ಹವಾಮಾನ ಸೇರಿದಂತೆ ತುಂಗೆಯ ಪೂರ್ಣ ಇತಿಹಾಸ ಲಭ್ಯವಾಗಲಿದೆ. ಚಾಲುಕ್ಯರು, ಕದಂಬರು, ಕೆಳದಿ ಮತ್ತು ವಿಜಯನಗರ ಸಾಮ್ರಾಜ್ಯದ ಕುರಿತೂ ಮಾಹಿತಿ ಲಭ್ಯವಾಗಲಿದೆ. ಪಶ್ಚಿಮ ಘಟ್ಟದ ದಟ್ಟ ಕಾನನದಲ್ಲಿ ವೈದ್ಯಕೀಯ ಗುಣವುಳ್ಳ ಸಸ್ಯಸಂಪತ್ತಿದೆ. ಅಳಿವಿನಂಚಿನಲ್ಲಿರುವ ಜೀವವೈವಿಧ್ಯವಿದೆ. ಅದರ ಸಂಪೂರ್ಣ ಮಾಹಿತಿ 3ಡಿನಲ್ಲಿ ಲಭ್ಯವಾಗಲಿದೆ. ಸಾಹಿತ್ಯ ಮತ್ತು ಧ್ವನಿ ಎರಡೂ ಲಭ್ಯವಾಗಲಿದೆ. ಪ್ರವಾಸಿ ತಾಣವಾಗಿರುವ ಮಲೆನಾಡಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾಹಿತಿ ಸಿಗಲಿದೆ. ಮಾಹಿತಿಯಲ್ಲಿ ರಾಜ್ಯಕ್ಕೆ ಒತ್ತು ಉತ್ತರದ ಗುಜರಾತ್ ಸೇರಿ ದಕ್ಷಿಣ ಭಾರತದ ಕೇರಳ, ತಮಿಳುನಾಡು, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹರಡಿರುವ 1,600 ಕಿ.ಮೀ. ಪಶ್ಚಿಮಘಟ್ಟದ ಜೀವವೈವಿಧ್ಯಗಳ ಬಗ್ಗೆ ಮಾಹಿತಿ ಇಲ್ಲಿ ಲಭ್ಯವಾಗಲಿದೆ. ಆದರೆ, ಕರ್ನಾಟಕದಲ್ಲಿ ಹರಡಿಕೊಂಡಿರುವ ಪಶ್ಚಿಮಘಟ್ಟಕ್ಕೆ ಶೇ.60 ಹಾಗೂ ಉಳಿದ ರಾಜ್ಯಗಳಿಗೆ ಶೇ.40ರಷ್ಟು ಒತ್ತು ನೀಡಲಾಗುವುದು. ಮಾಹಿತಿಯಲ್ಲಿ ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಜಿಲ್ಲೆಯ ಪಶ್ಚಿಮಘಟ್ಟದಲ್ಲಿರುವ ಜೀವವೈವಿಧ್ಯಕ್ಕೆ ಅಧಿಕ ಒತ್ತು ನೀಡಲಾಗುವುದು. ಕೇಂದ್ರದ ಮೂಲ ಉದ್ದೇಶ ಪಶ್ಚಿಮಘಟ್ಟದ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಶಿಕ್ಷಣ ನೀಡುವುದು. ಪಶ್ಚಿಮಘಟ್ಟಗಳ ಮೌಲ್ಯ, ಜೀವವೈವಿಧ್ಯಗಳ ಬಗ್ಗೆ ಜನತೆಗೆ ಪೂರ್ಣ ಮಾಹಿತಿ ಒದಗಿಸಲು ಒಟ್ಟು 8.58 ಕೋಟಿ ರೂ. ವೆಚ್ಚದಲ್ಲಿ ‘ವೈಲ್ಡ್‌ಲೈಫ್ ಇಂಟರ್‌ಪ್ರಿಟೇಶನ್ ಸೆಂಟರ್’ ಮಾಡಲಾಗುತ್ತಿದೆ. - ಚಿದಾನಂದ್ ವಟಾರೆ, ವ್ಯವಸ್ಥಾಪಕ ನಿದೇಶಕ, ಶಿವಮೊಗ್ಗ
from India & World News in Kannada | VK Polls https://ift.tt/2ZIR32x