
ಗದಗ: ಕೊರೊನಾ ರೂಪಾಂತರಿ ತಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದಲ್ಲಿ ನೆರೆ ರಾಜ್ಯದಿಂದ ಬರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬಯಿ, ಸೊಲ್ಲಾಪುರ, ಮೀರಜ್ ಭಾಗದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗುತ್ತಿದೆ. ಗದಗ ರೈಲ್ವೆ ನಿಲ್ದಾಣದಲ್ಲಿ ಇಳಿಯುವ ಪ್ರತಿಯೊಬ್ಬ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿ, ಆರ್‌ಟಿಪಿಸಿಆರ್ ವರದಿ ಪರಿಶೀಲಿಸುತ್ತಿದ್ದಾರೆ. ವರದಿ ಇಲ್ಲದೇ ಬಂದ ಪ್ರಯಾಣಿಕರನ್ನು ರ್ಯಾಪಿಡ್ ಟೆಸ್ಟ್‌ಗೆ ಒಳಪಡಿಸಲಾಗುತ್ತಿದೆ. ತಪ್ಪಿಸಿಕೊಳ್ಳುತ್ತಿರುವ ಪ್ರಯಾಣಿಕರುಗದಗ- ಮುಂಬಯಿ, ಧಾರವಾಡ- ಸೊಲ್ಲಾಪುರ ಸಹಿತ ಬೇರೆ ಬೇರೆ ರೈಲುಗಳ ಮೂಲಕ ನೆರೆಯ ರಾಜ್ಯದಿಂದ 400ಕ್ಕೂ ಹೆಚ್ಚು ಪ್ರಯಾಣಿಕರು ಗದಗ ನಿಲ್ದಾಣದಲ್ಲಿ ಇಳಿಯುತ್ತಿದ್ದಾರೆ. ಆದರಲ್ಲಿ ಶೇ.70 ಜನ ಮಾತ್ರ ರೈಲ್ವೆ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗುತ್ತಿದ್ದಾರೆ. ಇನ್ನುಳಿದ ಶೇ.30 ಜನ ಆರೋಗ್ಯ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ, ರೈಲ್ವೆ ಹಳಿಗಳನ್ನು ದಾಟಿ ಬೆಟಗೇರಿ ಭಾಗದ ಮೂಲಕ ಹೋಗುತ್ತಿರುವುದು ಆರೋಗ್ಯ ಇಲಾಖೆ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ನೆರೆಯ ರಾಜ್ಯದಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೋವಿಡ್ ಲಸಿಕೆ ಪಡೆದಿದ್ದರೂ ತಪಾಸಣೆ ಮಾಡಲಾಗುತ್ತಿದೆ. ರೋಗದ ಲಕ್ಷಣಗಳು ಕಂಡುಬಂದಲ್ಲಿ ಅಂಥವರಿಗೆ ಸ್ಥಳದಲ್ಲಿಯೇ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಮಾಹಿತಿ ಲಭ್ಯವಾಗಿಲ್ಲ ಧಾರವಾಡ ಎಸ್‌ಡಿಎಂ ನಲ್ಲಿ ಚಿಕಿತ್ಸೆ ಪಡೆದಿರುವ ಜಿಲ್ಲೆಯ ರೋಗಿಗಳ ಬಗ್ಗೆ ಎಸ್‌ಡಿಎಂ ವೈದ್ಯಕೀಯ ಅಧೀಕ್ಷಕರ ಬಳಿ ಮಾಹಿತಿ ಕೇಳಲಾಗಿದೆ. ಒಂದೆರಡು ದಿನದಲ್ಲಿ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ ಬಸರಿಗಿಡದ ತಿಳಿಸಿದ್ದಾರೆ.
from India & World News in Kannada | VK Polls https://ift.tt/3xWv0Xh