
ಹೊಸದಿಲ್ಲಿ: ದೇಶದ ಯುದ್ಧ ನೌಕೆಗಳಿಗೆ ಮಹಿಳಾ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇವರ ಸಂಖ್ಯೆ ಹೆಚ್ಚಿಸಲಾಗುವುದು ಎಂದು ನೌಕಾಪಡೆ ನೂತನ ಮುಖ್ಯಸ್ಥ ಆರ್. ಹರಿಕುಮಾರ್ ತಿಳಿಸಿದರು. ನೌಕಾದಿನ (ಡಿ.4)ದ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ವಿಮಾನ ವಾಹಕ ಸಮರ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಸೇರಿ 15 ನೌಕೆಗಳಿಗೆ 28 ಮಹಿಳಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಮುಂದೆಯೂ ಮಹಿಳೆಯರಿಗೆ ಹೊಸ ಹೊಸ ಜವಾಬ್ದಾರಿಗಳನ್ನು ನೀಡಲಾಗುವುದು," ಎಂದು ಮಾಹಿತಿ ನೀಡಿದರು. ''ಯುದ್ಧ ನೌಕೆಗಳನ್ನು ನಿರ್ವಹಿಸುವುದು ಸುಲಭವಲ್ಲ. ಅದರಲ್ಲೂ, ಕ್ಷಿಪಣಿ ಹಾಗೂ ಟ್ಯಾಂಕರ್‌ಗಳನ್ನು ನಿರ್ನಾಮ ಮಾಡುವ ನೌಕೆಗಳ ನಿರ್ವಹಣೆ, ಶತ್ರುಗಳ ವಿರುದ್ಧ ಹೋರಾಟ ಸವಾಲಿನದ್ದಾಗಿರುತ್ತದೆ. ಇಂತಹ ನೌಕೆಗಳಲ್ಲೂ ಮಹಿಳಾ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಅವರನ್ನು ಅಣಿಗೊಳಿಸಲಾಗುತ್ತಿದೆ,'' ಎಂದು ಮಾಹಿತಿ ನೀಡಿದರು. "ದೇಶದ ಸೇನೆಯಲ್ಲೂ ಮಹಿಳಾ ಸಬಲೀಕರಣ, ಅವರ ಪಾಲುದಾರಿಕೆ, ಸೇವೆ ಹೆಚ್ಚಿಸುವ ದಿಸೆಯಲ್ಲಿ ಕೇಂದ್ರ ಸರಕಾರ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಅನುಗುಣವಾಗಿ ನೌಕಾಪಡೆಯೂ ಹೆಣ್ಣುಮಕ್ಕಳ ಅಧಿಕಾರ ಹಾಗೂ ಸೇವೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಯುದ್ಧನೌಕೆ ಮಾತ್ರವಲ್ಲದೆ, ತಂತ್ರಜ್ಞಾನ, ವಾಣಿಜ್ಯ ವಿಭಾಗಗಳಲ್ಲೂ ಅವರ ಹೊಣೆಗಾರಿಕೆಯನ್ನು ಹೆಚ್ಚಿಸುವ ಹಾಗೂ ಹೊಸ ಅವಕಾಶಗಳನ್ನು ನೀಡುವ ಮೂಲಕ ಸ್ತ್ರೀ ಸಬಲೀಕರಣಕ್ಕೆ ಒತ್ತು ನೀಡಲಾಗುವುದು," ಎಂದು ವಿವರಿಸಿದರು. ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ಭಾರತದ ನೌಕಾಪಡೆಯು ದಾಳಿ ಮಾಡಿ, ಯುದ್ಧ ಗೆದ್ದ ಸ್ಮರಣಾರ್ಥ ಪ್ರತಿ ವರ್ಷದ ಡಿ. 4ರಂದು ನೌಕಾದಿನ ಆಚರಿಸಲಾಗುತ್ತದೆ. ಅದರಲ್ಲೂ, ಈ ಬಾರಿ ನೌಕಾದಿನಕ್ಕೆ 50 ವರ್ಷ ತುಂಬುತ್ತಿದ್ದು, 'ಸ್ವರ್ಣಿಂ ವಿಜಯ ದಿವಸ್' ಎಂದು ಆಚರಿಸಲಾಗುತ್ತಿದೆ. ಚೀನಾ ಚಟುವಟಿಕೆ ಮೇಲೆ ನಿಗಾ "ಭಾರತೀಯ ಸಾಗರ ಪ್ರದೇಶದಲ್ಲಿ ಚೀನಾ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದ್ದು, ಎಂತಹ ವಿಷಮ ಪರಿಸ್ಥಿತಿಯಲ್ಲೂ ದಿಟ್ಟ ಪ್ರತ್ಯುತ್ತರ ನೀಡಲು ನೌಕಾಪಡೆ ಸನ್ನದ್ಧವಾಗಿದೆ," ಎಂದು ಅಡ್ಮಿರಲ್ ಆರ್. ಹರಿಕುಮಾರ್ ತಿಳಿಸಿದರು. "ಸಾಗರ ಪ್ರದೇಶದಲ್ಲಿ ದೇಶವನ್ನು ರಕ್ಷಿಸಲು ನಮ್ಮ ಸೇನೆ ಸಮರ್ಥವಾಗಿದೆ. ಅದರಲ್ಲೂ, ಲಡಾಕ್ ಗಡಿಯಲ್ಲಿ ಉಪಟಳ ಮಾಡುತ್ತಿರುವ ಚೀನಾ ಸಾಗರ ಗಡಿಯಲ್ಲೂ ಉದ್ಧಟತನ ತೋರುವ ಸಾಧ್ಯತೆ ಇದೆ. ಹಾಗಾಗಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ," ಎಂದು ತಿಳಿಸಿದರು.
from India & World News in Kannada | VK Polls https://ift.tt/3DsDeru