
ಕುಟುಂಬಕ್ಕೆ ಒಂದು ಲಕ್ಷ ರೂ ಪರಿಹಾರ ನೀಡುವ ಆದೇಶದಲ್ಲಿ ಸರ್ಕಾರ ಪ್ರಮುಖ ತಿದ್ದುಪಡಿ ತಂದಿದೆ. ಕುಟುಂಬದ ಯಾವುದೇ ವ್ಯಕ್ತಿ ಮೃತಪಟ್ಟರೂ ಆ ಕುಟುಂಬಕ್ಕೆ ಪರಿಹಾರ ಸಿಗಬೇಕು ಎಂದು ಆದೇಶದಲ್ಲಿ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಮಾಹಿತಿ ನೀಡಿದ್ದಾರೆ. ಕುಟುಂಬಕ್ಕೆ ಆಸರೆಯಾಗಿರುವ ದುಡಿಯುವ ವ್ಯಕ್ತಿಯು ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟರೆ ಅಂತಹ ಬಿಪಿಎಲ್ ಕುಟುಂಬಕ್ಕೆ ಒಂದು ಲಕ್ಷ ರೂ ನೀಡುವುದಾಗಿ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿತ್ತು. ಅಂದರೆ ಈ ಕುಟುಂಬದಲ್ಲಿನ 'ದುಡಿಯುವ' ಮುಖ್ಯ ವ್ಯಕ್ತಿ ಮೃತಪಟ್ಟರೆ ಮಾತ್ರವೇ ಪರಿಹಾರ ಸಿಗುತ್ತದೆ ಎಂಬ ಷರತ್ತು ವಿಧಿಸಲಾಗಿತ್ತು. ಇದರಂತೆ ಆ ಕುಟುಂಬದ ಇತರೆ ಯಾವುದೇ ವ್ಯಕ್ತಿ ಮೃತಪಟ್ಟರೂ, ಅವರು 'ದುಡಿಯುವ' ವ್ಯಕ್ತಿ ಆಗದ ಕಾರಣ ಆ ಕುಟುಂಬ ಪರಿಹಾರಕ್ಕೆ ಅರ್ಹತೆ ಪಡೆದುಕೊಳ್ಳುತ್ತಿರಲಿಲ್ಲ. ಈ ನಿಯಮದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. 'ದುಡಿಯುವ' ವ್ಯಕ್ತಿ ಗುರುತಿಸುವಲ್ಲಿ ಲೋಪಗಳು ಉಂಟಾಗುತ್ತದೆ. ಅಲ್ಲದೆ, ಕಷ್ಟದಲ್ಲಿರುವ ಕುಟುಂಬಗಳಲ್ಲಿ ಯಾವ ವ್ಯಕ್ತಿ ಮೃತಪಟ್ಟರೂ ಮತ್ತಷ್ಟು ಆಘಾತಕ್ಕೆ ಒಳಗಾಗುತ್ತವೆ. ಹೀಗಾಗಿ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಸರಿಯಲ್ಲ ಎಂಬ ವಾದ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 'ದುಡಿಯುವ' ಪದವನ್ನು ಕೈ ಬಿಡಲು ನಿರ್ಧರಿಸಿದೆ. ರಾಜ್ಯ ಸರ್ಕಾರವು ಘೋಷಿಸಿರುವ ಒಂದು ಲಕ್ಷ ರೂ ಪರಿಹಾರ ಪಡೆಯಲು ಪರಿಗಣಿಸುವ ಮೃತ ವ್ಯಕ್ತಿಯು ಬಿ.ಪಿ.ಎಲ್ ಕುಟುಂಬದ "ದುಡಿಯುವ ಸದಸ್ಯನಾಗಿರಬೇಕು" ಎಂದು ಇರುವ ಕಡೆಗಳಲ್ಲೆಲ್ಲಾ, "ದುಡಿಯುವ” ಎಂಬ ಪದವನ್ನು ಕೈಬಿಡಬೇಕು. ರಾಜ್ಯ ಸರ್ಕಾರವು ಘೋಷಿಸಿರುವ 1 ಲಕ್ಷ ರೂ ಲಕ್ಷ ಪರಿಹಾರ ಪಡೆಯಲು ಪರಿಗಣಿಸುವ ಮೃತ ವ್ಯಕ್ತಿಯು ಬಿಪಿಎಲ್ ಕುಟುಂಬದ ಸದಸ್ಯನಾಗಿರಬೇಕು ಎಂದು ತಿದ್ದುಪಡಿ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೆ, ಮೈರಾಣು ಸೋಂಕಿನಿಂದಾಗಿ ಸದಸ್ಯರನ್ನು ಕಳೆದುಕೊಂಡಂತಹ ಬಡತನ ರೇಖೆಗಿಂತ ಕೆಳಗಿರುವ, ಯಾವುದೇ ವಯಸ್ಸಿನ ನಿಬಂಧನೆ ಇಲ್ಲದ ಎಲ್ಲಾ ಕುಟುಂಬದ ಅರ್ಹ ಕಾನೂನು ಬದ್ಧ, ವಾರಸುದಾರರಿಗೆ ರಾಜ್ಯ ಸರ್ಕಾರದ 1 ಲಕ್ಷ ರೂಪಾಯಿ ಆರ್ಥಿಕ ನೆರವನ್ನು ನೀಡಬೇಕು ಎಂದು ಹೇಳಲಾಗಿದೆ. ಉಳಿದಂತೆ ಯಾವ ಆದೇಶ ಮತ್ತು ಮಾರ್ಗಸೂಚಿಗಳಲ್ಲಿ ಮಾಡುತ್ತಿಲ್ಲ ಎಂದು ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಕೆ.ಸಿ ಕುಮಾರ್ ತಿಳಿಸಿದ್ದಾರೆ. 'ಕೋವಿಡ್‌ನಿಂದ ಮೃತಪಟ್ಟವರಿಗೆ ₹1 ಲಕ್ಷ ಪರಿಹಾರ ನೀಡುವ ಆದೇಶದಲ್ಲಿ ತಿದ್ದುಪಡಿ ತಂದಿದ್ದು, 'ದುಡಿಯುವ' ಪದ ತೆಗೆದುಹಾಕಿ, ಪರಿಹಾರಕ್ಕೆ ಪರಿಗಣಿಸುವ ಮೃತ ವ್ಯಕ್ತಿ ಬಿಪಿಎಲ್ ಕುಟುಂಬದವರಾಗಿರಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಈ ಮೂಲಕ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಇನ್ನಷ್ಟು ನೊಂದ ಕುಟುಂಬಗಳಿಗೆ ಸಾಂತ್ವನ ನೀಡಲಿದೆ' ಎಂದು ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ.
from India & World News in Kannada | VK Polls https://ift.tt/3oivAeL