ಹೊಸದಿಲ್ಲಿ: ಭಾರತಕ್ಕೆ ಮತ್ತೊಂದು ಸ್ವರ್ಣ ಪದಕ ಸಿಕ್ಕಿದೆ. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಲ್ಲ. ಜಪಾನ್‌ಗೆ ಸಾವಿರ ಮೈಲುಗಳ ದೂರದಲ್ಲಿ ಇರುವ ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಕೆಡೆಟ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಉದಯೋನ್ಮುಖ ಕುಸ್ತಿಪಟು ಪ್ರಿಯಾ ಮಲಿಕ್ ಸ್ವರ್ಣ ಸಾಧನೆ ಮೆರೆದಿದ್ದಾರೆ. ಮಹಿಳೆಯರ 73 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಭಾರತೀಯ ಕುಸ್ತಿಪಟು ಪ್ರಿಯಾ ಮಲಿಕ್, ಅಧಿಕಾರಯುತ ಪ್ರದರ್ಶನ ನೀಡುವ ಮೂಲಕ ಬೆಲರೂಸ್‌ನ ಸೆನಿಯಾ ಪಟಾಪೊವಿಚ್ ಅವರನ್ನು 5-0 ಅಂತರದಲ್ಲಿ ಮಣಿಸಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯ್ ಚಾನೂ ಸ್ವರ್ಣ ಗೆದ್ದ ಒಂದು ದಿನದ ಬಳಿಕ ಕುಸ್ತಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಶುಭ ಸುದ್ದಿ ನೀಡಿದ್ದಾರೆ. ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಿಯಾ ಮಲಿಕ್ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದು, ಸ್ವರ್ಣ ಪದಕಗಳ ಬೇಟೆಯಾಡುತ್ತಾ ಬಂದಿದ್ದಾರೆ. 2019ರ ಖೇಲೋ ಇಂಡಿಯಾ ಕ್ರೀಡಾ ಕೂಟದಲ್ಲೂ ಪ್ರಿಯಾ ಚಿನ್ನ ಗೆದ್ದಿದ್ದರು. ಬಳಿಕ ದಿಲ್ಲಿಯಲ್ಲಿ ನಡೆ 17ನೇ ಶಾಲಾ ಕ್ರೀಡಾಕೂಟದಲ್ಲೂ ಸ್ವರ್ಣಕ್ಕೆ ಕೊರಳೊಡ್ಡಿದ್ದರು. 2020ರಲ್ಲಿ ನಡೆ ಹಲವು ಕೂಟಗಳಲ್ಲೂ ಪ್ರಿಯಾ ಚಿನ್ನ ಗೆದ್ದಿದ್ದಾರೆ. ಇದೀಗ ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್‌ಷಿಪ್ ಕೂಟದಲ್ಲಿ ಸ್ವರ್ಣ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಮಹಿಳಾ 65 ಕೆಜಿ ವಿಭಾಗದಲ್ಲಿ ಭಾರತದ ವರ್ಷಾ ಟರ್ಕಿಯ ಡ್ಯುಗು ಜೆನ್ ಎದುರು ಜಯ ದಾಖಲಿಸುವ ಮೂಲಕ ಕಂಚಿನ ಪದಕ ಗೆದ್ದಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3BCgnK8