ಸಿಎಂ ಗಾದಿಗೆ ಅಡ್ಡಿಯಾದ ವಯಸ್ಸು; ವಿರೇಂದ್ರ ಪಾಟೀಲರ ಬಳಿಕ ಇದೀಗ ಬಿಎಸ್‌ವೈ ಸರದಿ?

ಇರ್ಷಾದ್‌ ಉಪ್ಪಿನಂಗಡಿ ಬೆಂಗಳೂರು: ವಯಸ್ಸು, ಆರೋಗ್ಯ ಇವು ಅಧಿಕಾರ ಅನುಭವಿಸಲು ಬೇಕಾಗಿರುವ ಪ್ರಮುಖ ಅಂಶಗಳಲ್ಲಿ ಒಂದಾಗಿವೆ. ಅವಕಾಶವಿದ್ದರೂ ವಯಸ್ಸು, ಆರೋಗ್ಯ ಅಧಿಕಾರವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇದೀಗ ಸಿಎಂ ಅವರ ರಾಜೀನಾಮೆಗೂ ‘ಬಹಿರಂಗ ಕಾರಣ’ವಾಗಿರುವ ಅಂಶ ವಯಸ್ಸು. ಇವರಷ್ಟೇ ಅಲ್ಲ, ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಲಿಂಗಾಯತ ಸಮುದಾಯದ ವಿರೇಂದ್ರ ಪಾಟೀಲರು ವಯಸ್ಸು ಹಾಗೂ ಅನಾರೋಗ್ಯ ಕಾರಣದಿಂದ ಸಿಎಂ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ವಿರೇಂದ್ರ ಪಾಟೀಲರು ದಕ್ಷ ಆಡಳಿತಕ್ಕೆ ಹೆಸರಾದವರು. ಕಾಂಗ್ರೆಸ್ ಪಕ್ಷದಲ್ಲಿ 1968 ರಿಂದ 1971 ರವರೆಗೆ ಮುಖ್ಯಮಂತ್ರಿಯಾಗಿದ್ದವರು. ಬಳಿಕ 18 ವರ್ಷಗಳ ಬಳಿಕ ಅಂದರೆ 1989 ರಿಂದ 1990 ರವರೆಗೆ ಮುಖ್ಯಮಂತ್ರಿಯಾಗಿ ರಾಜ್ಯಭಾರ ನಡೆಸಿದವರು. ಆದರೆ ಸಿಎಂ ಗಾದಿಯನ್ನು ವಯಸ್ಸು ಹಾಗೂ ಕೈಕೊಟ್ಟ ಆರೋಗ್ಯದ ಕಾರಣಕ್ಕಾಗಿ ಕಳೆದುಕೊಳ್ಳಬೇಕಾಯಿತು. ವಿರೇಂದ್ರ ಪಾಟೀಲರಿಗೆ ವಯೋಸಹಜ ಅನಾರೋಗ್ಯ ಕಾಡಿದರೂ ಅವರು ಸಿಎಂ ಸ್ಥಾನವನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಸೇರಬೇಕಾಗಿ ಬಂದಿತ್ತು. ಪಾರ್ಶ್ವವಾಯು ಹೊಡೆತಕ್ಕೆ ಸಿಲುಕಿ ಹಾಸಿಗೆ ಹಿಡಿಯಬೇಕಾಗಿ ಬಂತು. ಹೀಗಿದ್ದರೂ ಅವರು ಸಿಎಂ ಆಗಿ ಮುಂದುವರಿದಿದ್ದರು. ಇವರ ಆರೋಗ್ಯ ವಿಚಾರಿಸಲು ಬಂದ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಮನೆಗೆ ತೆರಳಿ ಬೇಗ ಗುಣಮುಖರಾಗುವಂತೆ ಹಾರೈಸಿದರು. ಬಳಿಕ ಹೊರಗೆ ಬಂದು ಕರ್ನಾಟಕ ಬೇರೆ ಮುಖ್ಯಮಂತ್ರಿಯನ್ನು ಕಾಣಲಿದೆ ಎಂದರು. ಒಂದು ಅರ್ಥದಲ್ಲಿ ರಾಜೀವ್ ಗಾಂಧಿಯವರು ವಿರೇಂದ್ರ ಪಾಟೀಲರನ್ನು ವಜಾ ಮಾಡಿದರು ಎಂದೇ ಚರ್ಚೆಗೆ ಗ್ರಾಸವಾಯಿತು. ಇದೀಗ ಬಿಎಸ್‌ ಯಡಿಯೂರಪ್ಪ ಅವರ ಸಿಎಂ ಸ್ಥಾನ ಕಳೆದುಕೊಳ್ಳುವ ಸಂದರ್ಭವೂ ಇದೇ ಆಗಿದೆ. ಬಿಜೆಪಿ ಪಕ್ಷದಲ್ಲಿ 75 ವರ್ಷ ದಾಟಿದವರಿಗೆ ಅಧಿಕಾರ ಕೊಟ್ಟಿಲ್ಲ. ಆದರೆ ಬಿಎಸ್‌ವೈ 75 ದಾಟಿದರು ಅವಕಾಶ ನೀಡಲಾಗಿದೆ. ಯಡಿಯೂರಪ್ಪನವರಿಗೆ ವಯಸ್ಸು ಒಂದು ಕಾರಣವಾದರೂ ಅವರು ಆರೋಗ್ಯವಂತರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಚುರುಕಾಗಿಯೇ ಸರ್ಕಾರದ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ವಯಸ್ಸಿನ ಜೊತೆಗೆ ಬಿಎಸ್‌ವೈ ಆಡಳಿತದ ಬಗ್ಗೆ ಇತರ ಆರೋಪಗಳು ಕೇಳಿಬಂದಿದ್ದವು. ಸ್ವತಃ ಬಿಜೆಪಿ ಶಾಸಕರೇ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ಧವೂ ಆಡಳಿತದಲ್ಲಿ ಹಸ್ತಕ್ಷೇಪ ಆರೋಪ ಇತ್ತು. ಇದೀಗ ಬಿಎಸ್‌ವೈ ರಾಜೀನಾಮೆ ಬಹುತೇಕ ಖಚಿತ ಎಂಬ ವಾತಾವರಣವಿದೆ. ಇದಕ್ಕೆ ಸದ್ಯ ಕೊಡುತ್ತಿರುವ ಕಾರಣ “ವಯಸ್ಸು”. ಒಂದು ವೇಳೆ ರಾಜೀನಾಮೆ ಅಧಿಕೃತಗೊಂಡರೆ ವಯಸ್ಸಿನ ಕಾರಣಕ್ಕಾಗಿ ಸಿಎಂ ಪಟ್ಟ ಕಳೆದುಕೊಂಡ ಮುಖ್ಯಮಂತ್ರಿಗಳ ಪೈಕಿ ವಿರೇಂದ್ರ ಪಾಟೀಲರ ನಂತರ ಬಿಎಸ್ ಯಡಿಯೂರಪ್ಪ ಅವರ ಸರದಿಯಾಗಿದೆ. ಇವರುಗಳ ಹೊರತು ಇತರ ಮುಖ್ಯಮಂತ್ರಿಗಳು ವಯಸ್ಸು, ಅನಾರೋಗ್ಯ ಕಾರಣದಿಂದ ಸಿಎಂ ಸ್ಥಾನ ಕಳೆದುಕೊಂಡಿಲ್ಲ.


from India & World News in Kannada | VK Polls https://ift.tt/3eMEJqQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...