ಹೊಸದಿಲ್ಲಿ: ಆರಂಭಿಕ ಬ್ಯಾಟ್ಸ್‌ಮನ್ ಗಾಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ತನ್ನ ಯೋಜನೆಯಲ್ಲಿ ಹಲವು ಬದಲಾವಣೆ ಮಾಡಿಕೊಂಡಿದ್ದು, ಕೆ.ಎಲ್ ರಾಹುಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಿ, ಮಯಾಂಕ್ ಅಗರ್ವಾಲ್ ವೈಫಲ್ಯ ಅನುಭವಿಸಿದರೆ ಬ್ಯಾಕಪ್ ಓಪನರ್ ಆಗಿ ಹನುಮ ವಿಹಾರಿ ಅವರನ್ನು ಇಟ್ಟುಕೊಂಡಿದೆ. ಶುಭಮನ್ ಗಿಲ್ ಗಾಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾಗೆ ಬಾರೀ ಹಿನ್ನಡೆಯಾಗಿದೆ. ಯುವ ಆರಂಭಿಕ ಬ್ಯಾಟ್ಸ್‌ಮನ್ ಎರಡು ತಿಂಗಳ ಕಾಲ ಟೀಮ್ ಇಂಡಿಯಾದಿಂದ ಹೊರಗುಳಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಮೂಲಕ ಬ್ಯಾಟ್ಸ್‌ಮನ್ ಇಂಗ್ಲೆಂಡ್ ಸರಣಿಯಿಂದ ಹೊರ ನಡೆಯಬಹುದು. ಇಂಗ್ಲೆಂಡ್ ಟೆಸ್ಟ್ ಸರಣಿಯ ನಿಮಿತ್ತ ಭಾರತ ಟೆಸ್ಟ್ ತಂಡದಲ್ಲಿ ಕೆಲ ಯೋಜನೆಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಟೀಮ್ ಮ್ಯಾನೇಜ್‌ಮೆಂಟ್ ಹತ್ತಿರದ ಮೂಲಗಳು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿವೆ. "ಕಳೆದ ವರ್ಷದಿಂದ ಹೊಸ ಚೆಂಡಿನಲ್ಲಿ ಕೆ.ಎಲ್ ರಾಹುಲ್ ಅವರ ಬ್ಯಾಟಿಂಗ್ ಅಷ್ಟೊಂದು ಚೆನ್ನಾಗಿಲ್ಲ. ಹಾಗಾಗಿ, ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವುದು ಅತ್ಯುತ್ತಮ ಆಯ್ಕೆಯಾಗಿದೆ. ಹೊಸ ಚೆಂಡಿನಲ್ಲಿ ಆಡುವ ಅತ್ಯುತ್ತಮ ಸಾಮರ್ಥ್ಯವನ್ನು ಹನುಮ ವಿಹಾರಿ ಈ ಹಿಂದೆ ತೋರಿದ್ದಾರೆ," ಎಂದು ಮೂಲಗಳು ತಿಳಿಸಿವೆ. ಶುಭಮನ್ ಗಿಲ್ ಗಾಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ. 2019ರ ಸೆಪ್ಟೆಂಬರ್‌ನಲ್ಲಿ ಭಾರತ ತಂಡದ ಪರ ಕೊನೆಯ ಟೆಸ್ಟ್ ಪಂದ್ಯವಾಡಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧ ಭಾರತ ತಂಡದ ಪ್ಲೇಯಿಂಗ್ ಇಲೆವೆನ್‌ಗೆ ಮರಳಲಿದ್ದಾರೆ. ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರೆ ಆಗ ಹೊಸ ಚೆಂಡು ಹೊಳಪು ಕಳೆದುಕೊಂಡಿರುತ್ತದೆ ಹಾಗೂ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಬಹುದು. ಕೌಂಟಿ ಆಡಿರುವ ಅನುಭವ ಹೊಂದಿರುವ ಹಾಗೂ ಹೊಸ ಚೆಂಡಿನಲ್ಲಿ ಆಡುವ ಅದ್ಭುತ ಸಾಮರ್ಥ್ಯ ಹೊಂದಿರುವ ಹನುಮ ವಿಹಾರಿ ಕೂಡ ಭಾರತ ತಂಡಕ್ಕೆ ಪ್ರಮುಖ ಅಸ್ತ್ರ ಎಂದು ಹೇಳಬಹುದು. ಸ್ವಿಂಗ್ ಆಗುವ ಇಂಗ್ಲೀಷ್ ಪರಿಸ್ಥಿತಿಗಳು ಅವರ ಬ್ಯಾಟಿಂಗ್ ಶೈಲಿಗೆ ಹೊಂದಾಣಿಕೆಯಾಗಲಿದ್ದು, ಈ ಹಿಂದೆಯೂ ಅವರು ಟೀಮ್ ಇಂಡಿಯಾಗೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಡಿದ ಅನುಭವವನ್ನು ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ ಹೀಗಿದೆ ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಮಾಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವೃದ್ಧಿಮಾನ್ ಸಹಾ ಕಾಯ್ದಿರಿಸಿದ ಆಟಗಾರರು: ಪ್ರಸಿಧ್ ಕೃಷ್ಣ, ಅಭಿಮನ್ಯು ಈಶ್ವರನ್, ಅರ್ಝಾನ್ ನಾಗವಾಸವಾಲ, ಅವೇಶ್ ಖಾನ್.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3AgbVQH