ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಮತ್ತು ಹಲವು ಸಚಿವರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿರುವ ಗಂಭೀರ ಆರೋಪದ ಮೇಲೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ಬಂಧಿತ. ಆರೋಪಿ ವಿರುದ್ಧ ಸಿಸಿಬಿ ಪೊಲೀಸರಿಗೆ ಹಲವಾರು ದೂರು ಬಂದಿತ್ತು. ಸಿಸಿಬಿ ಅಧಿಕಾರಿಗಳು ವಂಚನೆಗೆ ಸಂಬಂಧಿಸಿದ ಸಾಕ್ಷಿಗಳನ್ನು ಕಲೆಹಾಕಿ ರಾಜಣ್ಣನನ್ನು ಬಂಧಿಸಿದ್ದಾರೆ. ತಮ್ಮ ಹೆಸರು ದುರ್ಬಳಕೆ ಮಾಡುತ್ತಿರುವುದಾಗಿ ಸಿಎಂ ಪುತ್ರ ವಿಜಯೇಂದ್ರ ಅವರು ಸಿಸಿಬಿಗೆ ದೂರು ನೀಡಿದ್ದರು. ಅವರ ದೂರಿನ್ವಯ ಎಫ್‌ಐಆರ್ ದಾಖಲಿಸಲಾಗಿತ್ತು. ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲೂ ಎಫ್‌ಐಆರ್ ದಾಖಲಾಗಿತ್ತು. "ನನ್ನ ಹೆಸರು ಹೇಳಿಕೊಂಡು ಕೆಲಸ ಮಾಡಿಸಿಕೊಡುತ್ತೇನೆ ಹಾಗೂ ವರ್ಗಾವಣೆ ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ಹಲವರಿಗೆ ಮೋಸ ಮಾಡಿದ್ದಾರೆ," ಎಂದು ದೂರಿನಲ್ಲಿ ವಿಜಯೇಂದ್ರ ಉಲ್ಲೇಖಿಸಿದ್ದಾರೆ. ವಿಧಾನಸೌಧ, ಶಾಸಕರ ಭವನ, ಸಿಎಂ ಮನೆ ಬಳಿ ಬರುತ್ತಿದ್ದ ಸಾರ್ವಜನಿಕರು ಹಾಗೂ ಉದ್ಯಮಿಗಳಿಗೂ ಈತ ಮೋಸ ಮಾಡಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಎರಡು ದಿನಗಳ ಹಿಂದೆ ವಿಜಯೇಂದ್ರ ಅವರು ಸಿಸಿಬಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜು ಅಲಿಯಾಸ್ ರಾಜಣ್ಣನನ್ನು ಗುರುವಾರ ಸಂಜೆ ಸಚಿವ ಶ್ರೀರಾಮುಲು ಮನೆಯ ಬಳಿಯೇ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹಲವು ವರ್ಷಗಳಿಂದ ಶ್ರೀರಾಮುಲು ಹಾಗೂ ರೆಡ್ಡಿ ಕುಟುಂಬದ ಜತೆ ರಾಜು ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಆರೋಪಿಯನ್ನು ಬಂಧಿಸಲು '7 ಮಿನಿಸ್ಟರ್ ಕ್ವಾರ್ಟರ್ಸ್'ಗೆ ತೆರಳಿದಾಗ ರಾಜಣ್ಣ ಪೊಲೀಸರ ಜತೆ ವಾಗ್ವಾದ ನಡೆಸಿದ್ದ. ಬಳಿಕ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
from India & World News in Kannada | VK Polls https://ift.tt/3huGc5P