ಟೋಕಿಯೋ (ಜಪಾನ್): ಇಲ್ಲಿನ ಹಾಕಿ ಸ್ಟೇಡಿಯಂ ಸೌಥ್ ಪಿಚ್‌ನಲ್ಲಿ ನಡೆದ ಪಂದ್ಯದಲ್ಲಿ ವಿರುದ್ಧ 3-2 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿದೆ. ಹಾಗೂ ರೂಪಿಂದರ್ ಪಾಲ್ ಸಿಂಗ್ ಅವರ ಅದ್ಭುತ ಕೌಶಲದ ನೆರವಿನಿಂದ ಭಾರತ, ಕಿವೀಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು. ಇದರ ಜೊತೆಗೆ ನ್ಯೂಜಿಲೆಂಡ್ ತಂಡದ ಆಕ್ರಮಣಕಾರಿ ಆಟಗಾರರ ಎದುರು ಗೋಡೆಯಂತೆ ಅಡ್ಡ ನಿಂತ ಅನುಭವಿ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ತಂಡದ ಗೆಲುವಿನಲ್ಲಿ ವಿಶೇಷ ಪಾತ್ರವನ್ನು ವಹಿಸಿದರು. ಪಂದ್ಯ ಆರಂಭದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಕಠಿಣ ಹೋರಾಟ ನಡೆದಿತ್ತು. ಅದರಂತೆ ಭಾರತದ ಕ್ರಾಸ್‌ಬಾರ್ ಬಳಿ ಬಲವಾದ ಹೊಡೆತಕ್ಕೆ ಕೈಹಾಕಿದ್ದರು. ಆದರೆ, ಇದು ಸಕಾರವಾಗಲಿಲ್ಲ. ಆದರೆ, ಇದೇ ವೇಳೆ ಪೆನಾಲ್ಟಿ ಕಾರ್ನರ್ ಅವಕಾಶ ಸದುಪಯೋಗಪಡಿಸಿಕೊಂಡ ಕೇನ್ ರಸೆಲ್ ಬಲ ತುದಿಯ ಮೂಲಕ ಚೆಂಡನ್ನು ಗೋಲು ಪಟ್ಟಿಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಆ ಮೂಲಕ ಕಿವೀಸ್ 1-0 ಮುನ್ನಡೆ ಪಡೆಯಿತು. ಇದಾದ ಕೆಲವೇ ನಿಮಿಷಗಳನ್ನು ರೂಪಿಂದರ್ ಸಿಂಗ್ ಪೆನಾಲ್ಟಿ ಕಾರ್ನರ್‌ನಲ್ಲಿ ಅದ್ಭುತ ಕೌಶಲವನ್ನು ಪ್ರದರ್ಶಿಸಿ ಭಾರತಕ್ಕೆ ಮೊದಲ ಗೋಲು ತಂದುಕೊಟ್ಟರು. ಇದರ ಫಲವಾಗಿ ಭಾರತ 1-1 ಸಮಬಲ ಸಾಧಿಸಿತು. ಆ ಮೂಲಕ ಮೊದಲ ಕ್ವಾರ್ಟರ್ ಅಂತ್ಯಕ್ಕೆ ಉಭಯ ತಂಡಗಳು 1-1 ಸಮಬಲ ಕಾಯ್ದುಕೊಂಡಿದ್ದವು. ಎರಡನೇ ಕ್ವಾರ್ಟರ್‌ನಲ್ಲಿ ಕಣಕ್ಕೆ ಇಳಿದ ಭಾರತ ಎದುರಾಳಿ ತಂಡದ ಮುಂಚೂಣಿ ಆಟಗಾರರಿಗೆ ಯಾವುದೇ ಅವಕಾಶಗಳನ್ನು ನೀಡಲಿಲ್ಲ. 5 ನಿಮಿಷಗಳ ಬಳಿಕ ಭಾರತ ರಿವ್ಯೂ ಕೇಳಿ ಪೆನಾಲ್ಟಿ ಕಾರ್ನರ್ ಪಡದುಕೊಂಡಿತು. ಈ ವೇಳೆ ಹರ್ಮನ್‌ಪ್ರೀತ್ ಯಾವುದೇ ತಪ್ಪು ಮಾಡದೆ, ರೂಪಿಂದರ್ ಸಿಂಗ್ ಸಹಾಯದಿಂದ ಗೋಲು ಪಟ್ಟಿಗೆ ಚೆಂಡನ್ನು ಸೇರಿಸುವಲ್ಲಿ ಯಶಸ್ವಿಯಾದರು. ಆ ಮೂಲಕ ಭಾರತ ಮೊದಲ ಬಾರಿ ಪಂದ್ಯದಲ್ಲಿ 2-1 ಮುನ್ನಡೆ ಪಡೆಯಿತು. ನಂತರ ಅದೇ ಲಯ ಮುಂದುವರಿಸಿದ ಹರ್ಮನ್‌ಪ್ರೀತ್ ಸಿಂಗ್ ತಮ್ಮ ಎರಡನೇ ಗೋಲನ್ನು ತಂಡಕ್ಕೆ ಕೊಡುಗೆಯಾಗಿ ನೀಡಿದರು. ಇದಾದ ಕೆಲವೇ ನಿಮಿಷಗಳ ಅಂತರದಲ್ಲಿ ಸ್ಟಿಫೆನ್ ಜೆನ್ನಿಸ್ ಅವರು ನ್ಯೂಜಿಲೆಂಡ್ ತಂಡಕ್ಕೆ ಗೋಲು ತಂದುಕೊಡುವ ಮೂಲಕ 2-3 ಅಂತರವನ್ನು ಕಡಿಮೆ ಮಾಡಿದರು. ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತ ತಂಡ ರಕ್ಷಣಾ ವಿಭಾಗದ ಆಟಗಾರರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದರು ಹಾಗೂ ಗೋಲ್ ಕೀಪರ್ ಶ್ರೀಜೇಶ್ ಕೂಡ ಎದುರಾಳಿ ತಂಡದ ಫಾವರ್ಡ್ ಆಟಗಾರರನ್ನು ನಿಯಂತ್ರಿಸಿದರು. ಅಂತಿಮವಾಗಿ ಭಾರತ 3-2 ಅಂತರದಲ್ಲಿ ಗೆಲುವಿನ ನಗೆ ಬೀರಿತು. ಆಸ್ಟ್ರೇಲಿಯಾ, ಅರ್ಜೆಂಟೀನಾ, ಸ್ಪೇನ್ ಹಾಗೂ ನ್ಯೂಜಿಲೆಂಡ್ ತಂಡಗಳಿರುವ ಫೂಲ್ 'ಎ' ನಲ್ಲಿ ಭಾರತ ಸ್ಥಾನ ಪಡೆದುಕೊಂಡಿದೆ. ಫೂಲ್ 'ಬಿ'ನಲ್ಲಿ ನೇದರ್ಲೆಂಡ್, ಜರ್ಮನಿ, ಗ್ರೇಟ್ ಬ್ರಿಟನ್, ಕೆನಡಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳಿವೆ. ಜುಲೈ 30ರವರೆಗೂ ಲೀಗ್ ಪಂದ್ಯಗಳು ನಡೆಯಲಿದ್ದು, ಆಗಸ್ಟ್ 1 ಮತ್ತು 3 ರಂದು ಕ್ರಮವಾಗಿ ಕ್ವಾರ್ಟರ್ ಫೈನಲ್ಸ್ ಹಾಗೂ ಸೆಮಿಫೈನಲ್ಸ್ ಪಂದ್ಯಗಳು ಜರುಗಲಿವೆ. ಕಂಚು ಹಾಗೂ ಚಿನ್ನದ ಪದಕಗಳ ಪಂದ್ಯಗಳು ಆಗಸ್ಟ್ 5 ರಂದು ನಡೆಯಲಿವೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3x2oBb9