ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಭಾರತೀಯ ಕ್ರೀಡಾಪಟುಗಳಿಗೆ ತಲಾ 75 ಲಕ್ಷ ರೂ. ನಗದು ಬಹುಮಾನ ಹಾಗೂ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ(ಎನ್‌ಎಸ್‌ಎಫ್) ವತಿಯಿಂದ 25 ಲಕ್ಷ ರೂ ಬೋನಸ್ ನೀಡುವುದಾಗಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಗುರುವಾರ ಘೋಷಿಸಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತರಿಗೆ 40 ಲಕ್ಷ ರೂ ಹಾಗೂ ಕಂಚಿನ ಪದಕ ವಿಜೇತರಿಗೆ 25 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಸಲಹಾ ಸಮಿತಿ ತಿಳಿಸಿದೆ. "ಮಹತ್ವದ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಪ್ರತಿಯೊಬ್ಬ ಕ್ರೀಡಾಪಟುವಿಗೂ ತಲಾ ಒಂದು ಲಕ್ಷ ರೂ ನೀಡಲಾಗುತ್ತದೆ," ಎಂದು ಐಒಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಎನ್‌ಎಸ್‌ಎಫ್ ವತಿಯಿಂದ ಭಾಗವಹಿಸಿರುವ ಪ್ರತಿಯೊಬ್ಬ ಅಥ್ಲಿಟ್‌ಗೂ 25 ಲಕ್ಷ ರೂ. ಬೋನಸ್ ಹಾಗೂ ಒಲಿಂಪಿಕ್ಸ್ ಪದಕ ಗೆದ್ದರೆ 30 ಲಕ್ಷ ರೂ. ಬಹುಮಾನ ನೀಡಬೇಕೆಂದು ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ ಎಂದು ತಿಳಿಸಿದೆ. ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ಇತರೆ ಸದಸ್ಯರು ತಲಾ 15 ಲಕ್ಷ ರೂ ಸಹಾಯ ಧನವನ್ನು ಸ್ವೀಕರಿಸಲಿದ್ದಾರೆ. "ಪದಕ ವಿಜೇತರಿಗೆ ಇದೇ ಮೊದಲ ಬಾರಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ನಗದು ಬಹುಮಾನ ನೀಡಲು ಮುಂದಾಗಿದೆ," ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಅಥ್ಲಿಟ್‌ಗೂ ದಿನಕ್ಕೆ ಯುಎಸ್‌ಡಿ ಡಾಲರ್ 50 ರೂ ನೀಡಬೇಕೆಂದು ಕೂಡ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ. "ರಾಜ್ಯಗಳಲ್ಲಿ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಹೆಚ್ಚಿನ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಉತ್ತೇಜಿಸಲು ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ತಲಾ 15 ಲಕ್ಷ ರೂ. ಕೊಡುಗೆ ನೀಡಲಿದೆ," ಎಂದು ಅವರು ಹೇಳಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3rrWwZz