2ಕೆಜಿ ಚಿನ್ನ, 5ಕೆಜಿ ಬೆಳ್ಳಿ,1 ಕೋಟಿ ಹಣ ಕೊಟ್ಟರೂ ಮತ್ತೆ ವರದಕ್ಷಿಣೆ ಕಿರುಕುಳ ನೀಡಿದ ಭೂಪ..!

ಬೆಂಗಳೂರು: ಮದುವೆ ಮಾಡಿಕೊಟ್ಟಿದ್ದಲ್ಲದೆ ಕೈ ತುಂಬ ಹಣ, ಒಡವೆ ನೀಡಿದರೂ ಸಂತೃಪ್ತನಾಗದ ಭಂಡ ಪತಿಯ ವಿರುದ್ಧ ಪತ್ನಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2 ಕೆ.ಜಿ. ಚಿನ್ನ, 5 ಕೆ.ಜಿ. ಬೆಳ್ಳಿ, ಕೈ ತುಂಬಾ ಹಣ ಕೊಟ್ಟು ಅದ್ಧೂರಿ ಮದುವೆ ಮಾಡಿದರೂ ಸಂತೃಪ್ತನಾಗದ ಗುತ್ತಿಗೆದಾರನೊಬ್ಬನ ಪುತ್ರ ಮತ್ತೆ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದ. ಇದರಿಂದ ಬೇಸತ್ತ ಮಾರತ್ತಹಳ್ಳಿ ನಿವಾಸಿ 28 ವರ್ಷದ ಮಹಿಳೆ ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೂರಿನನ್ವಯ ಪ್ರತಿಷ್ಠಿತ ಕಂಪನಿಯಲ್ಲಿ ಎಕ್ಸಿಕ್ಯೂಟಿವ್‌ಯಾಗಿರುವ ಪತಿ ಬಾಲಾಜಿ(32) ಸೇರಿ ನಾಲ್ವರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. 2020 ನವೆಂಬರ್‌ನಲ್ಲಿ ದೂರುದಾರ ಮಹಿಳೆಯನ್ನು ಬಾಲಾಜಿ ಎಂಬಾತ ವಿವಾಹವಾಗಿದ್ದ. ಬಾಲಾಜಿ ತಂದೆ ಕಲ್ಯಾಣನಗರದಲ್ಲಿ ಖ್ಯಾತ ಗುತ್ತಿಗೆದಾರರಾಗಿದ್ದಾರೆ. ವಿವಾಹವಾದ 1 ತಿಂಗಳಲ್ಲೇ ಪತಿ ಮತ್ತೆ 1 ಕೋಟಿ ರೂ. ವರದಕ್ಷಿಣೆಗೆ ಬೇಡಿಕೆಯಿಟ್ಟು, ಪತ್ನಿಗೆ ಕಿರುಕುಳ ಕೊಡಲು ಆರಂಭಿಸಿದ್ದ. ಮಹಿಳೆಯ ಪಾಲಕರು ಸಾಲ ಮಾಡಿ 80 ಲಕ್ಷ ರೂ. ಕೊಟ್ಟಿದ್ದರು. ಮನೆ ಕಟ್ಟಲು ಹಣ ಬೇಕೆಂದು ಬಾಕಿ 20 ಲಕ್ಷ ರೂ.ಗಳನ್ನು ತರುವಂತೆ ಪತಿ ಆಗಾಗ ಪೀಡಿಸುತ್ತಿದ್ದ. ಇದಕ್ಕೆ ಪತ್ನಿ ನಿರಾಕರಿಸಿದಾಗ ಹಲ್ಲೆ ನಡೆಸಿ, ದೈಹಿಕ ಕಿರುಕುಳ ಕೊಟ್ಟು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಕಳೆದ ಜನವರಿಯಲ್ಲಿ ಪೊಂಗಲ್‌ ಹಬ್ಬಕ್ಕೆ ತವರಿನಿಂದ ಹಣ ತರಲಿಲ್ಲವೆಂದು ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದ. ಈ ಬಗ್ಗೆ ಪತ್ನಿ ತನ್ನ ಪಾಲಕರ ಬಳಿ ಅಳಲನ್ನು ತೋಡಿಕೊಂಡಿದ್ದಳು. ಮದುವೆಗೆ ಮಾಡಿದ ಸಾಲವನ್ನೇ ಇನ್ನೂ ತೀರಿಸದ ಹಿನ್ನೆಲೆಯಲ್ಲಿ ಪಾಲಕರ ಬಳಿ ಹಣವಿರಲಿಲ್ಲ. ನಂತರ ಸಂಬಂಧಿಕರ ಒತ್ತಾಯದ ಮೇರೆಗೆ ಪತ್ನಿಯನ್ನು ಮನೆಗೆ ಸೇರಿಸಿದ ಪತಿ ಬಾಲಾಜಿ, ರೂಮ್‌ನಲ್ಲಿ ಕೂಡಿ ಹಾಕಿ ಆಹಾರ ಕೊಡದೆ ಹಿಂಸಿಸುತ್ತಿದ್ದ ಎನ್ನಲಾಗಿದೆ. ಮಗಳ ರೋದನ ಕಂಡು ಮರುಗಿದ ಪಾಲಕರು ಮತ್ತೆ 30 ಲಕ್ಷ ರೂ.ಗಳನ್ನು ಕೊಟ್ಟಿದ್ದರು. ಇದಾದ ಕೆಲ ಸಮಯ ಸುಮ್ಮನಿದ್ದ ಪತಿ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದಾನೆ. ಪತ್ನಿಯ ಚಿನ್ನಾಭರಣ, ವರದಕ್ಷಿಣೆ ಹಣ ಪಡೆದು ಇದೀಗ ವಿಚ್ಛೇದನ ಕೊಡುವಂತೆ ಪತ್ನಿಗೆ ದುಂಬಾಲು ಬಿದ್ದಿದ್ದಾನೆ. ಪತಿಯ ವರ್ತನೆಯಿಂದ ನೊಂದ ಪತ್ನಿ ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ. ಬಾಲಾಜಿಗೆ ನೋಟಿಸ್‌ ನೀಡಿರುವ ಪೊಲೀಸರು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ.


from India & World News in Kannada | VK Polls https://ift.tt/3dCzyJq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...